ಗೇರುಕಟ್ಟೆ: ನಾಳ ಪಿಜಿನುಕ್ಕು ಸಮೀಪದ ಪಲ್ಲಾದೆ ರಸ್ತೆ ಬದಿ 70ರ ವೃದ್ದೆ ತಾಯಿಯನ್ನು ಬಿಟ್ಟು ಹೋದ ಪ್ರಕರಣಕ್ಕೆ ಸಂಬಂಧಿಸಿ ಐವರು ಮಕ್ಕಳ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಪುತ್ರ ರವಿ, ಉದಯ, ದಕ್ಷಿಣ ಕನ್ನಡ ಜಿಲ್ಲಾ ಮೀಸಲು ಪೊಲೀಸ್ ಸಿಬ್ಬಂದಿ ಚಂದ್ರಹಾಸ, ಪುತ್ರಿ ಪ್ರೇಮಾ, ಆಶಾ ಕಾರ್ಯಕರ್ತೆ ಉಷಾ ವಿರುದ್ಧ ಹಿರಿಯ ನಾಗರಿಕರ ರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಗೇರುಕಟ್ಟೆ ಬಳಿ ನಿವಾಸಿ, ಲಲಿತಾ ಎಂಬವರು ಪುತ್ರ ಉದಯ ಜತೆ ಗೇರುಕಟ್ಟೆ ಜನತಾ ಕಾಲನಿ ಮನೆಯಲ್ಲಿ ವಾಸಿಸುತ್ತಿದ್ದರು. ಕೆಲ ಸಮಯದಿಂದ ಕಾಲು ನೋವಿನಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಗೊಂಡಿದ್ದರು. ಅವರನ್ನು ನಾಳದಲ್ಲಿರುವ ಅವರ ತಂಗಿ ಮನೆಗೆ ಸೇರಿಸುವ ಪ್ರಯತ್ನ ಮಾಡಲಾಗಿತ್ತು. ಆದರೆ ಅಲ್ಲಿ ವೃದ್ಧೆಯ ತಂಗಿ(60), ತಮ್ಮ(55) ಇದ್ದು, ಇಬ್ಬರೂ ಅವಿವಾಹಿತರು. ಅವರೂ ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಲಲಿತಾ ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿತ್ತು.
ಜ.31ರಂದು ಲಲಿತಾ ಅವರನ್ನು ಆಟೋದಲ್ಲಿ ಕರೆತಂದು ರಸ್ತೆ ಬದಿ ಬಿಟ್ಟು ಹೋಗಲಾಗಿತ್ತು. ಸ್ಥಳೀಯರು ಸಹಾಯವಾಣಿ 112ಕ್ಕೆ ಮಾಹಿತಿ ನೀಡಿದ್ದು, ಬೆಳ್ತಂಗಡಿ ಠಾಣೆ ಹೊಯ್ಸಳ ಸಿಬ್ಬಂದಿ ವೃದ್ಧೆಯನ್ನು ರಕ್ಷಿಸಿದ್ದರು. ಬಳಿಕ ವೃದ್ಧೆಯ ಮಗಳು ಉಷಾ ಮತ್ತು ಮೊಮ್ಮಗಳ ಮನವೊಲಿಸಿದ್ದ ಪೊಲೀಸರು, ವೃದ್ದೆಯನ್ನು ಉಷಾ ಅವರ ಮನೆಗೆ ಕರೆದೊಯ್ದು ಬಿಟ್ಟಿದ್ದರು.