ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಮೂರ್ತಿಯ ಪ್ರತಿಷ್ಠಾ ಮಹೋತ್ಸವ: ಅಂತರಾಷ್ಟ್ರೀಯ ಗ್ರಂಥಾಲಯಗಳಿಗೆ “ಮಹಾಪುರಾಣ” ಕೊಡುಗೆ

ಉಜಿರೆ: ಧರ್ಮಸ್ಥಳದ ರತ್ನಗಿರಿಯಲ್ಲಿ ಭಗವಾನ್ ಶ್ರೀ ಬಾಹುಬಲಿ ಮೂರ್ತಿಯ ಪ್ರತಿಷ್ಠಾ ಮಹೋತ್ಸವ
ಹಾಗೂ ಮೂವತ್ತೊಂಭತ್ತನೆ ವರ್ಧಂತ್ಯುತ್ಸವದ ಅಂಗವಾಗಿ ಮಂಗಳವಾರ ತೋರಣ ಮುಹೂರ್ತ, ವಿಮಾನ
ಶುದ್ಧಿ, ನಾಂದಿಮಂಗಲ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳು ನಡೆದವು. ಪೂಜ್ಯ 105 ಶ್ರೀ ನಿರ್ವಾಣ ಸಾಗರ ಕ್ಷುಲ್ಲಕ ಮಹಾರಾಜರು, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.

ಇಂದು ಪಾದಾಭಿಷೇಕ:

ಬುಧವಾರ ಬೆಳಿಗ್ಗೆ ಗಂಟೆ 8.30ರಿಂದ ರತ್ನಗಿರಿಗೆ ಭವ್ಯ ಅಗ್ರೋದಕ ಮೆರವಣಿಗೆ ಬಳಿಕ ಭಗವಾನ್ ಶ್ರೀ ಬಾಹುಬಲಿ ಮೂರ್ತಿಗೆ 216 ಕಲಶಗಳಿಂದ ಪಾದಾಭಿಷೇಕ ನಡೆಯುತ್ತದೆ. ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕರು ಮಂಗಲ ಪ್ರವಚನ ನೀಡುವರು.

ಅಂತಾರಾಷ್ಟ್ರೀಯ ಗ್ರಂಥಾಲಯಗಳಿಗೆ “ಮಹಾಪುರಾಣ” ಕೊಡುಗೆ:

ಜೈನಧರ್ಮದ ಮೇರುಕೃತಿ “ಮಹಾಪುರಾಣ”. ಪೂಜ್ಯ ಆಚಾರ್ಯ ಜಿನಸೇನಾಚಾರ್ಯ- ಗುಣಭದ್ರಾಚಾರ್ಯ ವಿರಚಿತ “ಮಹಾಪುರಾಣ”ವನ್ನು ಇಂಗ್ಲಿಷ್ ಗೆ ಭಾಷಾಂತರ ಮಾಡಿ ಬೆಂಗಳೂರಿನಲ್ಲಿರುವ ಪಂಡಿತರತ್ನ ಎ. ಶಾಂತಿರಾಜ ಶಾಸ್ತ್ರಿ ಟ್ರಸ್ಟ್ ಮೂಲಕ ಜಿತೇಂದ್ರ ಕುಮಾರ್ ಪ್ರಕಟಿಸಿದ್ದಾರೆ. ಈ ಗ್ರಂಥವು ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳು ಮತ್ತು ಗ್ರಂಥಾಲಯದಲ್ಲಿದ್ದರೆ ಕುತೂಹಲಿಗಳಿಗೆ ಓದಲು ಉತ್ತಮ ಆಕರ ಗ್ರಂಥವಾಗಿದೆ. ಅಲ್ಲದೆ ವಿವಿಧ ಧರ್ಮಗಳ ತುಲನಾತ್ಮಕ ಅಧ್ಯಯನಕ್ಕೂ ಇದು ಉಪಯುಕ್ತವಾಗಿದೆ.

ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಜೈನಧರ್ಮದ
ಮೇರುಕೃತಿಯಾದ “ಮಹಾಪುರಾಣ” ಗ್ರಂಥವನ್ನು ನೂರು ಅಂತಾರಾಷ್ಟ್ರೀಯ ಗ್ರಂಥಾಲಯಗಳಿಗೆ
ಕೊಡುಗೆಯಾಗಿ ನೀಡಿದ್ದಾರೆ. ಉಚಿತ ಕೊಡುಗೆಯಾಗಿ ನೀಡಿರುವುದಲ್ಲದೆ, ಎಲ್ಲಾ ಗ್ರಂಥಾಲಯಗಳಿಗೆ
ಗ್ರಂಥವನ್ನು ತಲುಪಿಸುವ ವ್ಯವಸ್ಥೆಯನ್ನೂ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಮಾಡಿದ್ದಾರೆ.

error: Content is protected !!