ಶಿಬಾಜೆ ಸಾವು ಪ್ರಕರಣ,ಎಸ್ಐಟಿ ತನಿಖೆ ಸ್ವಾಗತಾರ್ಹ: ಶ್ರೀಧರ ಅಸಹಜ ಸಾವಿನ ಬಗ್ಗೆಯೂ ತನಿಖೆಯಾಗಲಿ:,ಪರಿಶಿಷ್ಟ ಜಾತಿ, ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಆಗ್ರಹ:

 

 

ಬೆಳ್ತಂಗಡಿ:ಶಿಬಾಜೆಯ  ಎಸ್ಟೇಟ್ ನಲ್ಲಿ ನಡೆದ ಶ್ರೀಧರ್ ಮುಗೇರ ಕೊಲೆ ಪ್ರಕರಣವನ್ನು ಎಸ್ಐಟಿ ತನಿಖೆ ನಡೆಸಲು ಅವಕಾಶ ಕಲ್ಪಿಸಿರುವುದನ್ನು ಸ್ವಾಗತಿಸಿ , ಕಳಿಯ ಗ್ರಾಮದಲ್ಲಿ ವರ್ಷಗಳ ಹಿಂದೆ ನಡೆದ ಶ್ರೀಧರ್ ಮುಗೇರರ ಅಸಹಜ ಸಾವಿನ ಬಗ್ಗೆಯೂ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂಬ ಆಗ್ರಹ ಪರಿಶಿಷ್ಟ ಜಾತಿ ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಕೇಳಿ ಬಂತು.
ಬೆಳ್ತಂಗಡಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬೆಳ್ತಂಗಡಿ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ರೋಹಿಣಿ ರವರ ಅಧ್ಯಕ್ಷತೆಯಲ್ಲಿ ಫೆ 22 ರಮನದು ಮಾಸಿಕ ಪರಿಶಿಷ್ಟ ಜಾತಿ/ಪಂಗಡಗಳ ಕುಂದುಕೊರತೆಗಳ ಸಭೆ ನಡೆಯಿತು.ಈ ವೇಳೆ
ಹಿರಿಯ ದಲಿತ ಮುಖಂಡ ಸಂಜೀವ ಆರ್ ಮಾತನಾಡಿ 2022 ರಲ್ಲಿ ನಡೆದ ಶಿಬಾಜೆಯ ಶ್ರೀಧರ್ ಮುಗೇರ ಕೊಲೆ ಪ್ರಕರಣದಲ್ಲಿ ಕೆಲವು ಬಲಾಢ್ಯರಿದ್ದು , ತನಿಖೆ ಹಾದಿ ತಪ್ಪಲು ಕಾರಣವಾಗಿತ್ತು. ಆ ಬಳಿಕ ದಲಿತ ಸಂಘಟನೆಗಳು ವ್ಯಾಪಕ ಪ್ರತಿಭಟನೆ ನಡೆಸಿದ ಬಳಿಕ ರಾಜ್ಯ ಸರ್ಕಾರ ಸಿಐಡಿ ತನಿಖೆ ನಡೆಸಿದರೂ ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ. ಇದೀಗ ರಾಜ್ಯ ಹೈಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ಎಸ್ಐಟಿ ತನಿಖೆ ನಡೆಸಲು ಆದೇಶಿಸಿರುವುದು ಸ್ವಾಗತಾರ್ಹ‌ ವಿಚಾರ.ಈ ಬಗ್ಗೆ ಸರಿಯಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಒತ್ತಾಯಿಸಿದ ಅವರು ವರ್ಷಗಳ ಹಿಂದೆ ಕಳಿಯ ಗ್ರಾಮದಲ್ಲಿ ಶ್ರೀಧರ್ ಮುಗೇರ ಎಂಬವರ ಮೃತದೇಹ ಸಂಶಯಾಸ್ಪದವಾಗಿ ಕೆರೆಯಲ್ಲಿ ಪತ್ತೆಯಾಗಿತ್ತು , ಪ್ರಕರಣಕ್ಕೆ ಸಂಬಂಧಿಸಿದಂತೆ ಅಸಹಜ ಸಾವು ಎಂದು ಪ್ರಕರಣ ದಾಖಲಾಗಿದ್ದರೂ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಇದಕ್ಕೆ ಧ್ವನಿಗೂಡಿಸಿದ ದಲಿತ ಮುಖಂಡ ಶೇಖರ್ ಲಾಯಿಲ, ಶಿಬಾಜೆ ಪ್ರಕರಣದ ಆರೋಪಿಗಳಿಗೆ ಪೋಲಿಸರು ರಕ್ಷಣೆ ನೀಡಿದ್ದಾರೆ ಎಂದು ಆರೋಪಿಸಿದ ಅವರು ಶಾಸಕರ ಪೋನ್ ಕರೆಗಳ ಬಗ್ಗೆ ಎಸ್ಐಟಿ ಪರಿಶೀಲಿಸಬೇಕು ಎಂದರು. ಈ ವೇಳೆ ಮಾತನಾಡಿದ ಬೆಳ್ತಂಗಡಿ ಇನ್ಸ್‌ಪೆಕ್ಟರ್ ಬಿ.ಜಿ ಸುಬ್ಬಾಪುರ್ ಮಠ್ ಇದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಸಹಜ ಪ್ರಕರಣ ದಾಖಲಾಗಿದ್ದು , ವೈದ್ಯಕೀಯ ತಾಂತ್ರಿಕ ಪರೀಕ್ಷೆಯ ವರದಿಯ ಆಧಾರದಲ್ಲಿ ತನಿಖೆ ನಡೆಯುತ್ತಿದ್ದು , ತಿಂಗಳಲ್ಲಿ ತನಿಖೆಯಲ್ಲಿ ಪ್ರಗತಿ ಸಾಧಿಸಲಿದ್ದೇವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಅಪ್ರಾಪ್ತ ವಯಸ್ಸಿನ ಮಕ್ಕಳು, ದ್ವಿಚಕ್ರ ಸೇರಿದಂತೆ ವಾಹನಗಳನ್ನು ಅಡ್ಡಾದಿಡ್ಡಿಯಾಗಿ , ಅತಿವೇಗವಾಗಿ ಚಲಾಯಿಸುತ್ತಿದ್ದರೂ ಪೋಲಿಸ್ ಇಲಾಖೆ ಗಂಭೀರವಾಗಿ ಪರಿಗಣಿಸುತ್ತಿಲ್ಲ.ನಂಬರ್ ಪ್ಲೇಟ್ ಧರಿಸದೇ ಕೆಲವರು ಬೈಕ್ ಚಲಾಯಿಸುತ್ತಿರುವುದು ಕಂಡುಬರುತಿದ್ದು ಇದು ಅಪಾಯಕಾರಿ ಬೆಳವಣಿಗೆ ಎಂದು ಆತಂಕ ವ್ಯಕ್ತಪಡಿಸಿದ ಶೇಖರ್ ಲಾಯಿಲ ಒಂದೆರಡು ಪ್ರಕರಣಗಳಲ್ಲಿ ದಂಡ ವಸೂಲಿ ಮಾಡಿದರೆ ಕಡಿವಾಣ ಬೀಳಬಹುದು ಎಂದ ಅವರು ಲಾಯಿಲ ಗ್ರಾಮದ ದರ್ಪಿಂಜೆ ಸೇತುವೆ ಸುತ್ತಮುತ್ತ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದು , ಇದೀಗ ಇಲ್ಲಿ ಲಾಯಿಲ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಸಾದ್ ಶೆಟ್ಟಿ ಏಣಿಂಜೆರವರು ಮುತುವರ್ಜಿಯಿಂದ ಸಿಸಿ ಕ್ಯಾಮರಾ ಅಳವಡಿಸಿದ್ದು , ಅದರ ಸಹಾಯದಿಂದ ಅಕ್ರಮ ಚಟುವಟಿಕೆಗಳಲ್ಲಿ ನಿರತರಾಗಿರುವವರ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಬೆಳ್ತಂಗಡಿ ಬಸ್ ನಿಲ್ದಾಣ ಸೇರಿದಂತೆ ಕೆಲವು ಕಡೆಗಳಲ್ಲಿ ಮಾನಸಿಕ ಅಸ್ವಸ್ಥರು ಓಡಾಟ ನಡೆಸುತ್ತಿರುವುದಲ್ಲದೇ ಕೆಲವೊಮ್ಮೆ ತೀರಾ ಕೆಟ್ಟ ರೀತಿಯಲ್ಲಿ ವರ್ತಿಸುತಿದ್ದಾರೆ.ಇದರಿಂದ ಮಹಿಳೆಯರು, ವಿದ್ಯಾರ್ಥಿಗಳು ತೀರಾ ಮುಜುಗರಕ್ಕೀಡಾಗುತಿದ್ದಾರೆ ಈ ಬಗ್ಗೆಯೂ ಕ್ರಮ ಕೈಗೊಳ್ಳಬೇಕು ಎಂದರು. ಇನ್ನೋರ್ವ ಮುಖಂಡ ಶೀನ ಪಿಲ್ಯ ಮಾತನಾಡಿ ಪಿಲ್ಯ ಮಾರಿಗುಡಿ ಬಳಿ ವ್ಯಾಪಕ ಅಪಘಾತಗಳು ಸಂಭವಿಸುತ್ತಿದ್ದು , ಇಲ್ಲಿ ಬ್ಯಾರಿಕೇಡ್ ಅಳವಡಿಸಬೇಕು ಎಂದು ಒತ್ತಾಯಿಸಿದರು. ನಾರಾವಿಯ ಕೃಷ್ಣಪ್ಪ ರವರು ಮಾತನಾಡಿ ಇತ್ತೀಚಿಗೆ ನಾರಾವಿಯಲ್ಲಿ ದಲಿತ ವ್ಯಕ್ತಿಯೊಬ್ಬರ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಮಕ್ಕಳ ಎದುರಿನಲ್ಲಿಯೇ ಹಲ್ಲೆ ನಡೆಸಿದ ಘಟನೆ ಬಗ್ಗೆ ಪ್ರಸ್ತಾಪಿಸಿ , ಪೋಲಿಸ್ ಇಲಾಖೆ ಯಾವುದೇ ಒತ್ತಡಕ್ಕೆ ಮಣಿಯದೆ ಕಾನೂನಿನಡಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಚೆನ್ನಕೇಶವ , ವೆಂಕಪ್ಪ ನಾಯ್ಕ ಉಪ್ಪಿನಂಗಡಿ , ರಾಮಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಸಭೆಯಲ್ಲಿ
ಬೆಳ್ತಂಗಡಿ ಪೋಲಿಸ್ ಉಪ ವಿಭಾಗ ವ್ಯಾಪ್ತಿಯ ಠಾಣೆಗಳ ಪೋಲಿಸ್ ಸಬ್ ಇನ್ಸ್‌ಪೆಕ್ಟರ್ ಗಳು ಉಪಸ್ಥಿತರಿದ್ದರು. ಡಿವೈಎಸ್ಪಿ ಕಛೇರಿಯ ಮನೋಹರ್ ಹಿಂದಿನ ಸಭೆಯ ನಡಾವಳಿಗಳನ್ನು ಸಭೆಯ ಮುಂದಿಟ್ಟರು.
ಉಪ್ಪಿನಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ನಾಗರಾಜ್ ಧನ್ಯವಾದವಿತ್ತರು.

error: Content is protected !!