ಪೋಲಿಯೋ ಹನಿ ಬದಲಿಗೆ ಸ್ಯಾನಿಟೈಸರ್ ಹನಿ ಹಾಕಿದ ಪ್ರಕರಣ: ಅಧಿಕಾರಿಗಳನ್ನು ಅಮಾನತುಗೊಳಿಸಿದ ಮಹಾರಾಷ್ಟ್ರ ಆರೋಗ್ಯ ಇಲಾಖೆ

ಮುಂಬೈ : ಮಹಾರಾಷ್ಟ್ರದ ಯಾವತ್ಮಾಲ್​​​ ಪ್ರದೇಶದಲ್ಲಿ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಬದಲಿಗೆ ಹ್ಯಾಂಡ್ ಸ್ಯಾನಿಟೈಸರ್ ಹಾಕಲಾಗಿತ್ತು. ಇದರಿಂದ ಮಕ್ಕಳು ಅಸ್ವಸ್ಥಗೊಂಡಿದ್ದು , ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟು 12 ಮಕ್ಕಳಿಗೆ ಸ್ಯಾನಿಟೈಸರ್​ ಅನ್ನು ಪೋಲಿಯೋ ಹನಿ ರೀತಿಯಲ್ಲಿ ಹಾಕಲಾಗಿತ್ತು.

ಈ ಘಟನೆಯನ್ನು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಖಂಡಿಸಿದ್ದಾರೆ. “ಪೋಲಿಯೋ ಹನಿಗಳ ಬದಲಿಗೆ ಮಕ್ಕಳಿಗೆ ಸ್ಯಾನಿಟೈಸರ್ ನೀಡುವುದು ಕ್ಷಮಿಸಲಾಗದ ತಪ್ಪು. ಸಂಬಂಧಪಟ್ಟ ಅಂಗನವಾಡಿ ಕಾರ್ಮಿಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ” ಎಂದು ಹೇಳಿದರು.ರಾಷ್ಟ್ರೀಯ ಪಲ್ಸ್​ ಪೋಲಿಯೋ ಕಾರ್ಯಕ್ರಮದ ಚಾಲನೆಯ ನಿಮಿತ್ತ ಭಾನುವಾರ ಬೆಳಗ್ಗೆ ಗ್ರಾಮ ಪಂಚಾಯತ್ ಪ್ರದೇಶದ ಮಕ್ಕಳಿಗೆ ಪೋಲಿಯೋ ಹನಿ ಹಾಕಬೇಕಿತ್ತು. ಅಲ್ಲಿ 12 ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಬದಲಿಗೆ ಹ್ಯಾಂಡ್​ ಸ್ಯಾನಿಟೈಸರ್ ಹನಿಯನ್ನು ಹಾಕಿಲಾಗಿದೆ. ಹೀಗೆ ಹ್ಯಾಂಡ್ ಸ್ಯಾನಿಟೈಸರ್ ಸೇವಿಸಿದ ಮಕ್ಕಳು ತಡರಾತ್ರಿ ವಾಂತಿ ಮಾಡಿಕೊಳ್ಳಲು ಶುರು ಮಾಡಿದವು. ಆಗ ಗಾಬರಿಗೊಂಡ ಪೋಷಕರು ಕೂಡಲೇ ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯ ಮಕ್ಕಳು ಚೇತರಿಸಿಕೊಳ್ಳುತಿದ್ದಾರೆ ಎಂದು ತಿಳಿದು ಬಂದಿದೆ.ಸೋಮವಾರ ನಡೆದ ಘಟನೆಗೆ ಸಂಬಂಧಿಸಿದಂತೆ ಆರೋಗ್ಯ ಕಾರ್ಯಕರ್ತ, ವೈದ್ಯ, ಆಶಾ ಕಾರ್ಯಕರ್ತ ಸೇರಿದಂತೆ ಮೂವರು ಅಧಿಕಾರಿಗಳನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.

error: Content is protected !!