ಅನುಭವ್ ಅಪಹರಣ ಪ್ರಕರಣ: ಇನ್ನೂ ಇಬ್ಬರು ಆರೋಪಿಗಳು ಅರೆಸ್ಟ್ ಸಾಧ್ಯತೆ: ಪ್ರಕರಣದ ಪ್ರಮುಖ ಆರೋಪಿ‌ ಪತ್ತೆಗಾಗಿ ಶೋಧ: ದ.ಕ. ಎಸ್.ಪಿ. ಲಕ್ಷ್ಮೀ ಪ್ರಸಾದ್ ಹೇಳಿಕೆ: ಬೆಳ್ತಂಗಡಿ ಪೊಲೀಸರ ವಶದಲ್ಲಿ 6 ಆರೋಪಿಗಳು

 

ಬೆಳ್ತಂಗಡಿ: ಉಜಿರೆ ನಿವಾಸಿ, ಉದ್ಯಮಿ, ನಿವೃತ್ತ ಸೈನಿಕ ಎ.ಕೆ.ಶಿವನ್ ಮೊಮ್ಮಗ ಅನುಭವ್ ಅಪಹರಣ ಪ್ರಕರಣದ ಬಹುತೇಕ ಮಾಹಿತಿ ಲಭಿಸಿದೆ. ಪ್ರಕರಣ ಸಂಬಂಧ ಇನ್ನೂ ಇಬ್ಬರು ಆರೋಪಿಗಳನ್ನು ನಾಳೆಯೊಳಗೆ ಬಂಧಿಸುವ ಸಾಧ್ಯತೆ ‌ಇದೆ. ಮುಖ್ಯ ಆರೋಪಿ ತಲೆಮರೆಸಿಕೊಂಡಿದ್ದು ಶೀಘ್ರದಲ್ಲಿ ಪತ್ತೆ ಕಾರ್ಯ ನಡೆಸಲಾಗುವುದು‌ ಎಂದು ದ.ಕ. ಎಸ್.ಪಿ. ಲಕ್ಷ್ಮೀ ಪ್ರಸಾದ್ ಹೇಳಿದರು.

ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣದ‌ ತನಿಖೆಯ‌ ಮಾಹಿತಿ ನೀಡಿದರು.
ಆರೋಪಿಗಳು ಘಟನೆ ನಡೆಯುವ 10 ದಿನಗಳ ಮುಂಚಿತವಾಗಿ ಧರ್ಮಸ್ಥಳಕ್ಕೆ ಆಗಮಿಸಿ, ಲಾಡ್ಜ್ ಒಂದರಲ್ಲಿ ಉಳಿದುಕೊಂಡು ಪರಿಸ್ಥಿತಿ ಅವಲೋಕನ ಮಾಡುತ್ತಿದ್ದರು. ಘಟನೆಗೆ ಬೆಂಗಳೂರಿನ ಸಂಪರ್ಕ ಇರುವ ಮಾಹಿತಿಯಿದೆ‌. ಶ್ರೀಘ್ರದಲ್ಲಿ ಎಲ್ಲಾ ಮಾಹಿತಿಗಳು ಹೊರಬೀಳಲಿವೆ ಎಂದು ಮಾಹಿತಿ ನೀಡಿದರು.

ಬೆಳ್ತಂಗಡಿ ಠಾಣೆಯಲ್ಲಿ 6 ಆರೋಪಿಗಳು:
ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಬೆಳ್ತಂಗಡಿ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿ 5 ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಆರೋಪಿಗಳ ಪತ್ತೆ:
ಡಿ. 17 ರಂದು ಸಂಜೆ ಉಜಿರೆ ಶಿವನ್ ಅವರ ಮನೆ ಬಳಿಯಿಂದ ಅವರ ಹಾಗೂ ಸೊಸೆಯ ಕಣ್ಣೆದುರೇ ಮೊಮ್ಮಗ ಅನುಭವ್ ನನ್ನು ಅಪಹರಿಸಲಾಗಿತ್ತು. ಈ ಕುರಿತು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಯ ಜಾಡು ಹಿಡಿದ ಕೋಲಾರ ಜಿಲ್ಲೆ ಎಸ್ಪಿ ಕಾರ್ತಿಕ್ ಅವರ ಸಹಕಾರದೊಂದಿಗೆ ದ.ಕ. ಎಸ್ಪಿ ಲಕ್ಷ್ಮೀ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಕೋಲಾರದ ಮಾಸ್ತಿಯಲ್ಲಿ ಬಂಧಿಸಿ, ಮಗುವನ್ನು ರಕ್ಷಿಸಿ, ಶನಿವಾರ ಮಧ್ಯಾಹ್ನ ಹೆತ್ತವರಿಗೆ ಒಪ್ಪಿಸಲಾಗಿತ್ತು.

ಉಜಿರೆಯಿಂದ ಕೋಲಾರಕ್ಕೆ ತಂದೆ-ತಾಯಿ:
ಶನಿವಾರ ಮುಂಜಾನೆ 5 ಗಂಟೆ ಸುಮಾರಿಗೆ ಕರೆ ಮಾಡಿ ಮಗು ಸಿಕ್ಕಿರುವ ವಿಚಾರ ತಿಳಿಸಲಾಗಿತ್ತು. ಬೆಳಗ್ಗೆ 7 ಗಂಟೆಗೆ ಉಜಿರೆಯಿಂದ ಮಗುವಿನ ತಂದೆ-ತಾಯಿ ಕೊಲಾರಕ್ಕೆ ಪಯಣ ಬೆಳೆಸಿದ್ದು, ಮಧ್ಯಾಹ್ನ ಒಂದು ಗಂಟೆಗೆ ತಲುಪಿದ್ದಾರೆ. ಸುರಕ್ಷಿತವಾಗಿದ್ದ ಮಗುವನ್ನು ಪೋಷಕರಿಗೆ ಒಪ್ಪಿಸಿದ್ದರು. ಬಳಿಕ ಕಾನೂನಾತ್ಮಕ ಕೆಲಸಗಳನ್ನು ಮುಗಿಸಿಕೊಂಡು ಸುಮಾರು ೩ ಗಂಟೆಗೆ ಅನುಭವ್ ತನ್ನ ಪೋಷಕರ ಜತೆ ಉಜಿರೆಯ ಮನೆಯನ್ನು ಸೇರಿದ್ದ.

ಆರೋಪಿಗಳಿಗೆ‌ ಕೋವಿಡ್ ಟೆಸ್ಟ್:
ಕಿಡ್ನಾಪ್ ಮಾಡಿದ ಪ್ರಮುಖ ಆರೋಪಿಯನ್ನು ಹೊರತು ಪಡಿಸಿ, ಉಳಿದ ಆರೋಪಿಗಳು ಪೊಲೀಸರ ವಶದಲ್ಲಿದ್ದು, ಹೆಚ್ಚಿನ ತನಿಖೆಗಾಗಿ ಬೆಳ್ತಂಗಡಿ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ವಶದಲ್ಲಿರುವ ಆರೋಪಿಗಳ ಕೋವಿಡ್-19 ಪರೀಕ್ಷೆ ಬೆಳ್ತಂಗಡಿಯಲ್ಲಿ ನಡೆಸಲಾಗಿದೆ.

ಮುಂದುವರಿದ ತನಿಖೆ:
ಬೆಳ್ತಂಗಡಿ ನ್ಯಾಯಾಲಯಕ್ಕೂ ಹಾಜರು ಪಡಿಸಲಾಗಿದೆ ಎಂದು ತಿಳಿದುಬಂದಿದ್ದು, ಮಗುವಿನ ಕಿಡ್ನಾಪ್ ಪ್ರಮುಖ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿಯುತ್ತಿದೆ. ಇದೀಗ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಅಪಹರಣದ ರೂವಾರಿ ಹಾಸನ ಜಿಲ್ಲೆಯಾತನಾಗಿದ್ದಾನೆ ಎನ್ನಲಾಗಿದ್ದು, ಈತನಿಗೆ ಬಾಲಕನ ಮನೆಯವರ ಕುರಿತು ಸ್ಪಷ್ಟವಾದ ಮಾಹಿತಿಗಳಿವೆ ತಿಳಿದು ಬಂದಿದೆ. ಆರೋಪಿ ಬಿಟ್ ಕಾಯಿನ್‌ಗಾಗಿಯೇ ಬೇಡಿಕೆ ಮುಂದಿಟ್ಟಿರುವುದು ಒಟ್ಟು ಪ್ರಕರಣದ ಹಿಂದೆ ಬಿಟ್ ಕಾಯಿನ್ ವ್ಯವಹಾರವೇ ಕಾರಣವೇ ಎಂಬ ಅನುಮಾನವೂ ಮೂಡುತ್ತಿದೆ. ಆರೋಪಿಗಳ ವಿಚಾರಣೆ ನಡೆಯುತ್ತಿದ್ದು ಒಂದೆರಡು ದಿನಗಳಲ್ಲಿ ಇಡೀ ಪ್ರಕರಣದ ಹಿನ್ನಲೆಗಳು ಬಹಿರಂಗಗೊಳ್ಳುವ ನಿರೀಕ್ಷೆಯಿದೆ.

ಸುತ್ತು ಬಳಸಿ ಕೋಲಾರ ತಲುಪಿದರು:
ಉಜಿರೆ ರಥಬೀದಿಯ ಬಳಿಯಿಂದ ಮಗುವನ್ನು ಕಿಡ್ನಾಪ್ ಮಾಡಿದ ಅಪಹರಣಕಾರರು ಉಜಿರೆ ಪೇಟೆಗೆ ಬಂದು ಅಲ್ಲಿಂದ ಧರ್ಮಸ್ಥಳ, ಕೊಕ್ಕಡ, ಪರಿಯಶಾಂತಿ, ನೆಲ್ಯಾಡಿ, ಉಪ್ಪಿನಂಗಡಿ, ಪುತ್ತೂರು ಸುಳ್ಯ, ಮಡಿಕೇರಿ, ಹಾಸನ, ಚನ್ನರಾಯಪಟ್ಟಣ, ಕನಕಪುರ ರಸ್ತೆಯಾಗಿ ಕೋಲಾರ ತಲುಪಿದ್ದಾರೆ. ಹಳೆಯ ಇಂಡಿಕಾ ವಿಟು ಕಾರಿನಲ್ಲಿ ಮಗುವನ್ನು ಅಪಹರಿಸಲಾಗಿದ್ದು, ದಾರಿ ಮಧ್ಯೆ ಅಭಿನವ್ ಕೇಳಿದ ತಿಂಡಿಗಳನ್ನು ನೀಡಿದ್ದಾರೆ. ಸುತ್ತು ಬಳಿಸಿ ಕೋಲಾರಕ್ಕೆ ಮಗುವನ್ನು ಕರೆದೊಯ್ದಿದ್ದಾರೆ.

ದಕ್ಷ ಪೊಲೀಸ್ ತಂಡದ ಕಾರ್ಯಕ್ಷಮತೆಗೆ ಶ್ಲಾಘನೆ:
ಅಪಹರಣ ನಡೆದ ಬಳಿಕ ಅಖಾಡಕ್ಕಿಳಿದ ದ.ಕ.ಜಿಲ್ಲಾ ಎಸ್.ಪಿ., ಬಂಟ್ವಾಳ ಡಿ.ವೈ.ಎಸ್.ಪಿ ವೆಲೈಂಟೇನ್ ಡಿಸೋಜ ಮತ್ತು ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ನೇತೃತ್ವದಲ್ಲಿ ಹಲವಾರು ಪ್ರಕರಣಗಳನ್ನು ಬೇಧಿಸಿದ ಜಿಲ್ಲೆಯ ಡಿಸಿಬಿಐ ತಂಡ ಸೇರಿ ದಕ್ಷ ಪೊಲೀಸರ ಐದು ತಂಡ ರಚಿಸಿದ್ದರು. ಡಿಸಿಬಿಐ ವೃತ್ತ ನಿರೀಕ್ಷಕ ಚೆಲುವರಾಯ ಸ್ವಾಮಿ, ಬೆಳ್ತಂಗಡಿ ಎಸ್‌ಐ ನಂದಕುಮಾರ್, ಧರ್ಮಸ್ಥಳ ಎಸ್‌ಐ ಪವನ್ ಕುಮಾರ್, ಉಪ್ಪಿನಂಗಡಿ ಎಸ್‌ಐ ಈರಯ್ಯ ಇವರ ನೇತೃತ್ವದ ತಂಡಗಳು ಬೆಂಗಳೂರು, ಕೋಲಾರ, ಚಿಕ್ಕಮಗಳೂರು, ಮಧುಗಿರಿ ಮೊದಲಾದ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಅಪರಾಧಿಗಳ ಪತ್ತೆಗೆ ದಕ್ಷ ಅಧಿಕಾರಿಗಳ ಪಡೆ ಕಾರ್ಯತಂತ್ರ ರೂಪಿಸಿದ್ದರಿಂದ 36 ಗಂಟೆಯೊಳಗೆ ಪ್ರಕರಣವನ್ನು ಬೇಧಿಸಿದ್ದರು. ಯಾವುದೇ ಪ್ರಾಣಹಾನಿ ಇಲ್ಲದೆ, ಯಾರ ಒತ್ತಡವನ್ನು ಗಣನೆಗೆ ತೆಗೆದುಕೊಳ್ಳದೆ ಪ್ರಕರಣವನ್ನು ಸುಖಾಂತ್ಯಗೊಳಿಸಿದ ಪೊಲೀಸರ ಕಾರ್ಯಕ್ಷಮತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆರೋಪಿಗಳ ಪತ್ತೆಗೆ ಸಿಕ್ಕಿದ ಕ್ಲೂ:
ಪ್ರಕರಣದ ಪ್ರಮುಖ ಆರೋಪಿಯನ್ನು ಹೊರತು ಪಡಿಸಿ, ಉಳಿದ ಆರೋಪಿಗಳು ಪೊಲೀಸರ ವಶದಲ್ಲಿದ್ದು, ತನಿಖೆ ಮುಂದುವರಿಯುತ್ತಿದೆ. ಅಪಹರಣ ತಂಡ ಬಾಲಕನ ಕಿಡ್ನಾಪ್ ಮಾಡಲು ₹7 ಲಕ್ಷಕ್ಕೆ ಸುಪಾರಿ ತೆಗೆದುಕೊಂಡಿದ್ದರು. ಪ್ರಮುಖ ಆರೋಪಿ ಓರ್ವನಿಗೆ ಸುಪಾರಿ ನೀಡಿದ್ದು, ಇವನೊಂದಿಗೆ ಹಣದ ಆಸೆಗೆ ಮಂಡ್ಯ, ಬೇಲೂರು, ಕೋಲಾರ ಮೊದಲಾದ ಕಡೆಯ ಯುವಕರು ಈಗ ಸೆರೆಯಾಗಿದ್ದಾರೆ.

ಕಿಡ್ನಾಪ್ ತಂಡದ ಓರ್ವ ಕೆಲ ತಿಂಗಳ ಹಿಂದೆ ಉಜಿರೆಗೆ ಬಂದಿದ್ದಾಗ ಸ್ಥಳೀಯ ಅಟೋ ಚಾಲಕನನ್ನು ಪರಿಚಯಿಸಿಕೊಂಡಿದ್ದ. ಬಳಿಕ ಕರೆ ಮಾಡಿ ಮನೆಯವರ ಕುರಿತು ವಿಚಾರಿಸಿದ್ದ ಎನ್ನಲಾಗಿದೆ. ಇವರ ಒಳಮರ್ಮ ಅರಿಯದ ಚಾಲಕ ತನಗೆ ಗೊತ್ತಿದ್ದ ವಿಚಾರ ತಿಳಿಸಿದ್ದರು. ಬಾಲಕನ ಅಪಹರಣ ಆದ ತಕ್ಷಣ ವಾಟ್ಸ್ ಅಪ್ ಗಳಲ್ಲಿ ಮಗುವಿನ, ಮನೆಯವರ ಪೋಟೋಗಳು ಹರಿದಾಡಿದ್ದನ್ನು ಗಮನಿಸಿದ ತಕ್ಷಣ ಪೊಲೀಸರ ಗಮನಕ್ಕೆ ತಂದಿದ್ದರು ಎನ್ನಲಾಗಿದೆ. ಅಟೋಚಾಲಕ ನೀಡಿದ ಮಾಹಿತಿಯೇ ಆರೋಪಿಗಳಿಗೆ ಬಲೆ ಬೀಸಲು ಸಾಧ್ಯವಾಯಿತು ಎನ್ನುವ ಮಾತುಗಳು ಹರಿದಾಡುತ್ತಿದೆ.

error: Content is protected !!