ಕೊಕ್ಕಡ: ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಕೊಕ್ಕಡ ಗ್ರಾಮದ ಸೌತಡ್ಕ ದೇವಸ್ಥಾನಕ್ಕೆ ತೆರಳುವ ರಸ್ತೆ ಅಂಚಿನಲ್ಲಿರುವ ಮನೆಯೊಂದಕ್ಕೆ ನುಗ್ಗಿ, ಮನೆ ಮಂದಿಗೆ ಹಲ್ಲೆ ನಡೆಸಿ, ದರೋಡೆ ನಡೆಸಿದ ಪ್ರಕರಣದ ತನಿಖೆಗಾಗಿ ಪೊಲೀಸ್ ಹಿರಿಯ ಅಧಿಕಾರಿಗಳು ಕೊಕ್ಕಡಕ್ಕೆ ದೌಡಾಯಿಸಿದ್ದಾರೆ.
ನಸುಕಿನ ಜಾವ 2.30ರ ಸುಮಾರಿಗೆ ಘಟನೆ ನಡೆದಿದ್ದು, ವಿಶ್ವ ಹಿಂದೂ ಪರಿಷತ್ ಪ್ರಮುಖ್ ನೂಜೆ ತುಕ್ರಪ್ಪ ಶೆಟ್ಟಿ ಮನೆಗೆ ನುಗ್ಗಿದ ದರೋಡೆಕೋರರ ತಂಡ ಅವರ ಪತ್ನಿಗೆ ಹಲ್ಲೆ ನಡೆಸಿ, ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ದೋಚಿರುವುದಾಗಿ ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ದ.ಕ. ಎಸ್ಪಿ ಲಕ್ಬ್ಮೀ ಪ್ರಸಾದ್ ಭೇಟಿ ನೀಡಿ ಘಟನೆಯ ಕುರಿತು ಮನೆಯವರಿಂದ ಹಾಗೂ ಇಲಾಖಾ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಕೂಲಂಕುಷವಾಗಿ ತನಿಖೆಗೆ ತಂಡಗಳನ್ನು ರಚಿಸಿ, ಕಾರ್ಯಾಚರಣೆಗೆ ಇಳಿಸಿದ್ದಾರೆ.
ರಬ್ಬರು ತೋಟದತ್ತ ಶ್ವಾನದಳ:
ಲಕ್ಷಾಂತರ ಮೌಲ್ಯದ ದರೋಡೆ ಪ್ರಕರಣ ಇದಾಗಿದ್ದು, ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಆಯಾಮಗಳಲ್ಲಿ ತನಿಖೆ ಆರಂಭಿಸಲಾಗಿದೆ. ಬೆರಳಚ್ಚು ತಜ್ಞರ ತಂಡ ಹಾಗೂ ಶ್ವಾನದಳ ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸಲಾಗಿದೆ. ಶ್ವಾನದಳ ಮನೆಯ ಸುತ್ತಮುತ್ತಲಿನ ರಬ್ಬರ್ ತೋಟಗಳ ಕಡೆ ತೆರಳಿದೆ.
ಸ್ಥಳ ಮಹಜರು:
ಎಎಸ್ಪಿ ಲಖನ್ ಸಿಂಗ್ ಯಾದವ್, ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಗೆ, ಪ್ರೊಬೆಷನರಿ ಎಎಸ್ಪಿ ರೋಹನ್ ಜಗದೀಶ್, ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್, ಉಪ್ಪಿನಂಗಡಿ ಠಾಣೆ ಪೋಲೀಸರು ಮತ್ತು ನೆಲ್ಯಾಡಿ ಹೊರ ಠಾಣಾ ಸಿಬ್ಬಂದಿಗಳು ಮಹಜರು ವೇಳೆ ಹಾಜರಿದ್ದರು.
ಒಳನುಗ್ಗಿದ ದರೋಡೆಕೋರರು:
ಮಾಮೂಲಿಯಾಗಿ ಅಪರಾತ್ರಿಯಲ್ಲಿ ಯಾರೇ ಬಂದು ಕರೆದರೂ ಮೇಲ್ಛಾವಣಿಯ ಬಾಗಿಲು ತೆರೆದು ಖಚಿತವಾದ ಬಳಿಕ ಮಾಡಿಕೊಂಡು ಕೆಳಗಿನ ಬಾಗಿಲು ತೆರೆಯುತ್ತಿದ್ದರಂತೆ. ಘಟನೆ ನಡೆದ ವೇಳೆ ಅದೇ ರೀತಿ ಆಗಿದೆ. ದರೋಡೆಕೋರರು ಮನೆಯ ಮುಂಭಾಗದ ಸಿಟೌಟ್ ಮೇಲಿನ ಮಹಡಿಯನ್ನು ಏಣಿಯ ಮೂಲಕ ಏರಿ ಮೇಲಿನ ಮಹಡಿ ಬಾಗಿಲ ಬಳಿ ಅವಿತು ಕುಳಿತ್ತಿದ್ದರು. ರೂಢಿಯಂತೆ ಮೇಲ್ಛಾವಣಿಯ ಬಾಗಿಲು ತೆಗೆಯುತ್ತಿದ್ದಂತೆ ಮನೆಯೊಳಗೆ ಪ್ರವೇಶಿಸಿದ್ದಾರೆ.
ಮಕ್ಕಳನ್ನು ಕೂಡಿ ಹಾಕಿ ಕೊಲ್ಲುವ ಬೆದರಿಕೆ:
ಮನೆಯೊಳಗೆ ಪ್ರವೇಶಿಸಿ, ಮನೆಯ ಯಜಮಾನನನ್ನು ಕಟ್ಟಿ ಹಾಕಿ, ಕೋಣೆಯೊಳಗಿನ ಕವಾಟಿನನ್ನು ತೆರೆಯಲು ಬೆದರಿಕೆ ಹಾಕಿದ್ದಾರೆ. ಆಗುಂತುಕರು ಗಂಡನನ್ನು ಹಿಡಿದಿಟ್ಟಿರುವುದನ್ನು ಗಮನಿಸಿ ಬಿಡಿಸಲು ಯತ್ನಿಸಿದಾಗ, ದರೋಡೆಕೋರರ ತಂಡ ತುಕ್ರಪ್ಪ ಶೆಟ್ಟರ ಪತ್ನಿ ಗೀತಾ ಅವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ. ಪ್ರತಿರೋಧ ವ್ಯಕ್ತಪಡಿಸಿದಾಗ ಮನೆಯಲ್ಲಿದ್ದ ಮಕ್ಕಳನ್ನು ಕೂಡಿ ಹಾಕಿ ಕೊಲ್ಲುವ ಬೆದರಿಕೆ ಕೂಡಾ ಹಾಕಿದ್ದಾರೆ. ಇದರಿಂದ ಭಯಗೊಂಡ ದಂಪತಿಗಳು ಕವಾಟಿನ ಬಾಗಿಲು ತೆಗೆದಿದ್ದಾರೆ. ಕವಾಟನ್ನು ತಡಕಾಡಿ ಅದರಲ್ಲಿದ್ದ ಚಿನ್ನಾಭರಣಗಳನ್ನು ದೋಚಿಕೊಂಡು ನಸುಕಿನ ಜಾವ ಪರಾರಿಯಾಗಿದ್ದಾರೆ.
ಮಹಿಳೆ ಮಂಗಳೂರಿನ ಆಸ್ಪತ್ರೆಗೆ ದಾಖಲು:
ಕೂಡಲೇ ಮನೆಯ ಯಜಮಾನ ತುಕ್ರಪ್ಪ ಶೆಟ್ಟಿ ಮನೆಯ ಹಿಂಭಾಗದ ಕೊಠಡಿಯಲ್ಲಿದ್ದ ತಮ್ಮ ಟ್ಯಾಪಿಂಗ್ ಮಾಡುವ ಕೆಲಸದಾತನ ಬಳಿ ವಿಷಯ ತಿಳಿಸಿದ್ದು, ಪೋಲೀಸರಿಗೆ ಮಾಹಿತಿ ನೀಡಲಾಗಿದೆ. ತಕ್ಷಣ ಪೊಲೀಸರು ಘಟನ ಸ್ಥಳಕ್ಕೆ ಆಗಮಿಸಿದ್ದಾರೆ. ಹಲ್ಲೆಯಿಂದ ಗಾಯಗೊಂಡ ತುಕ್ರಪ್ಪ ಶೆಟ್ಟಿಯವರ ಪತ್ನಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ದರೋಡೆ ಪ್ರಕರಣದ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಮಂದಿ ಆಗಮಿಸಿದ್ದಾರೆ.
ದರೋಡೆಕೋರರ ತಂಡದಲ್ಲಿ ಒಂಬತ್ತು ಮಂದಿ ಇರಬಹುದೆಂದು ಅಂದಾಜಿಸಲಾಗಿದೆ. ಎಲ್ಲಾ ಕಡೆ ನಾಕಾ ಬಂಧಿ ಮಾಡಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.