ಕೊಕ್ಕಡದ ಮನೆಯೊಂದರಲ್ಲಿ ದರೋಡೆ: ಚಿನ್ನಾಭರಣ,ನಗದು ದೋಚಿದ ದುಷ್ಕರ್ಮಿಗಳು: ದರೋಡೆಕೋರ ತಂಡದಿಂದ ಮನೆ ಮಂದಿಗೆ ಹಲ್ಲೆ

ಕೊಕ್ಕಡ: ಮನೆಯೊಂದಕ್ಕೆ ದರೋಡೆಕೊರರು ನುಗ್ಗಿ ನಗನಗದು ದರೋಡೆ ಮಾಡಿದ ಘಟನೆ ಕೊಕ್ಕಡ ಸಮೀಪದ ಕೌಕ್ರಾಡಿ ಗ್ರಾಮದಲ್ಲಿ ನಡೆದಿದೆ.

ಸೌತಡ್ಕ ದೇವಸ್ಥಾನಕ್ಕೆ ತೆರಳುವ ರಸ್ತೆ ಸಮೀಪದ ನೂಜೆ ತುಕ್ರಪ್ಪ ಶೆಟ್ಟಿ ಯವರ ಮನೆಗೆ ಸುಮಾರು ಒಂಭತ್ತು ಮಂದಿ ದರೋಡೆಕೋರರ ತಂಡವು ಸೋಮವಾರ ಸುಮಾರು 2-30 ಗಂಟೆಯ ಮಧ್ಯ ರಾತ್ರಿ ನುಗ್ಗಿ ಮನೆಯ ಯಜಮಾನ ಮತ್ತು ಅವರ‌ ಪತ್ನಿ ಮೇಲೆ ಹಲ್ಲೆ ನಡೆಸಿ ಲಕ್ಷಾಂತರ ರೂ. ಮೌಲ್ಯದ ನಗನಗದು ದೋಚಿದ ಘಟನೆ ನಡೆದಿದೆ.

ಒಂಭತ್ತು ಮಂದಿ ಇದ್ದ ದರೋಡೆಕೋರರ ತಂಡ ಇವರನ್ನು ಸ್ಥಳದಲ್ಲೆ ಕೂಡಿ ಹಾಕಿ ಹಲ್ಲೆ ನಡೆಸಿದ ಸಂದರ್ಭ ತುಕ್ರಪ್ಪ ಶೆಟ್ಟಿ ಯವರ ಪತ್ನಿಗೆ ಚೂರಿಯಿಂದ ಹೊಟ್ಟೆಗೆ ಎರಡು ಬಾರಿ ಇರಿದಿದ್ದು, ತೀವ್ರ ಗಾಯಗಳಾಗಿವೆ. ಕೂಡಲೇ ಇವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಅಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮನೆಯಲ್ಲಿ ಪತಿ , ಪತ್ನಿ ಮತ್ತು ಇಬ್ಬರು ಸಣ್ಣ ಮಕ್ಕಳು ಮಾತ್ರ ಈ ಸಂದರ್ಭದಲ್ಲಿ ಇದ್ದುದರಿಂದ ಇವರನ್ನೆಲ್ಲ ಮಾರಕಾಸ್ತ್ರ ತೋರಿಸಿ ಬೆದರಿಸಿ ಕೂಡಿ ಹಾಕಿ ಈ ದರೋಡೆ ನಡೆಸಿದ್ದು ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದನ್ನು ದೋಚಿಕೊಂಡು ಡಕಾಯಿತರ ತಂಡ ಪರಾರಿಯಾಗಿದೆ. ಡಕಾಯಿತರು ತೆರಳುತ್ತಲೆ ಮನೆಯವರು ಧರ್ಮಸ್ಥಳ ಪೋಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಕೂಡಲೆ ಪೋಲೀಸ್ ಅಧಿಕಾರಿಗಳು ಘಟನೆ ನಡೆದ ಮನೆಗೆ ಧಾವಿಸಿದ್ದಾರೆ. ಸ್ಥಳೀಯವಾಗಿ ವಿಶ್ವಹಿಂದೂ ಪರಿಷತ್ ನ ಕೊಕ್ಕಡ ವಲಯ ಅದ್ಯಕ್ಷರಾಗಿದ್ದ ನೂಜೆ ತುಕ್ರಪ್ಪ ಶೆಟ್ಟಿ ಯವರ ಮನೆಗೆ ಈ ದರೋಡೆ ಕೋರರು ನುಗ್ಗಿದ ವಿಷಯ ತಿಳಿಯುತ್ತಲೆ ನೂರಾರು ಮಂದಿ ಆಗಮಿಸಿದ್ದಾರೆ.ದರೋಡೆ ಕೋರರ ತಂಡದಲ್ಲಿ ಮನೆಯೊಳಗೆ ನುಗ್ಗಿದವರು ಅಂದಾಜು ಒಂಭತ್ತು ಮಂದಿಯಷ್ಟಿದ್ದು ದರೋಡೆ ನಡೆಸಿ ಪರಾರಿಯಾಗಬಹುದಾದ ಎಲ್ಲಾ ರಸ್ತೆಗಳನ್ನು ನಾಕಾಬಂದಿ ಹಾಕಿ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.

error: Content is protected !!