ಆರಾಧ್ಯ ಬಾಳಿಗೆ ‘ಅಮೃತ ಸಂಜೀವಿನಿ’ ಬೆಳಕು: ₹17 ಲಕ್ಷ ಸಹಾಯಧನ ಹಸ್ತಾಂತರ

ಉಜಿರೆ: ದುರ್ಬಲ ವರ್ಗದ ಜನರಿಗೆ ಸಹಕಾರ ಮಾಡುವ ಮನೋಭಾವದಿಂದ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ. ಇಂತಹಾ ಜನಪರ ಮಾನವೀಯ ಕಾರ್ಯಗಳಿಂದಲೇ ಧರ್ಮದ ಸ್ಥಾಪನೆಯಾದಂತೆ ಕಂಡುಬರುತ್ತಿದೆ ಎಂದು‌ ಗುರುಪುರ ವಜ್ರದೆಹಿಶ್ರೀ ರಾಜಶೇಖರಾನಂದ ಸ್ವಾಮೀಜಿ ‌ನುಡಿದರು‌.


ಅವರು ಉಜಿರೆ ಶಾರದಾ ಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಣ್ಣೀರುಪಂತದ ರವಿಶಂಕರ್ ಅವರ ಪುತ್ರಿ ಆರಾಧ್ಯ ಚಿಕಿತ್ಸೆಗೆ ‘ಅಮೃತ ಸಂಜೀವಿನಿ’ ವತಿಯಿಂದ ಸಂಗ್ರಹಿಸಿದ 17 ಲಕ್ಷ ರೂ. ಸಹಾಯಧನ ಹಸ್ತಾಂತರಿಸಿ ಆಶೀರ್ವಚನ ನೀಡಿದರು.
ಯುವಕರು ಒಗ್ಗೂಡಿ ‘ಅಮೃತ ಸಂಜೀವಿನಿ’ ಸಂಘಟನೆ ರಚಿಸಿ, ಸಹಾಯ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಸಮಾಜದಲ್ಲಿ ಮತ್ತೊಬ್ಬರ ಸಂಕಷ್ಟಕ್ಕೆ ನೆರವಾಗುವುದೇ ಪುಣ್ಯದ ಕೆಲಸ ಎಂದರು.
ತಣ್ಣೀರುಪಂತದ ದೇಸಿನ್ ಕೊಡಿ ರವಿಶಂಕರ್ ಕೋಟ್ಯಾನ್ ಅವರ ಮೂರು ವರ್ಷ 7 ತಿಂಗಳು ವಯಸ್ಸಿನ ಮಗಳು ಆರಾಧ್ಯ ಅವರು, ಶ್ರವಣದೋಷದಿಂದಾಗಿ ಸಮಸ್ಯೆ ಎದುರಿಸುತ್ತಿದ್ದಳು. ಚಿಕಿತ್ಸೆ ನೀಡಲು ಸುಮಾರು 14 ಲಕ್ಷ ರೂ‌. ವೆಚ್ಚವಾಗುವುದಾಗಿ‌ ವೈದ್ಯರು ತಿಳಿಸಿದ್ದರು, ಇದನ್ನು ಗಮನಿಸಿ ಅಮೃತ ಸಂಜೀವಿನಿ ವತಿಯಿಂದ 17 ಲಕ್ಷ ರೂ. ಸಹಾಯಧನ ಸಂಗ್ರಹಿಸಲಾಗಿತ್ತು.
ನ.5ರಂದು ಮಂಗಳೂರಿನಲ್ಲಿ ‌ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಮಗುವಿನ
ಸಮಸ್ಯೆ ಆಲಿಸಿ ವಿಶೇಷ ಪ್ರಕರಣವೆಂದು ಪರಿಗಣಿಸಿ ವೈದ್ಯಕೀಯ ಸೇವೆಗೆ 5 ಲಕ್ಷ ರೂ. ಪರಿಹಾರ ‌ ನೀಡಲು ಸ್ಥಳದಲ್ಲೇ ಆದೇಶ ನೀಡಿದ್ದರು.
ಅಮೃತ ಸಂಜೀವಿನಿ ಸದಸ್ಯ ವಸಂತ ಪಣಪಿಲ, ರಾಜೇಶ್ ಶೆಟ್ಟಿ, ರವಿಶಂಕರ್ ಕೋಟ್ಯಾನ್, ಪೂರ್ಣಿಮಾ ಉಪಸ್ಥಿತರಿದ್ದರು.
ಲೋಕೇಶ್ ಶಿಬಾಜೆ ಸ್ವಾಗತಿಸಿ, ವಿಜೇತ್ ರೈ ಪುತ್ತೂರು ನಿರೂಪಿಸಿ, ವಂದಿಸಿದರು. ಆನಂದ ಬಜೆಕೊಟ್ಟು ಸಹಕರಿಸಿದರು.

error: Content is protected !!