ಕಾರ್ಗಿಲ್ ವನದಲ್ಲಿ ಯೋಧರ ಸ್ಮರಣಾರ್ಥ ದೀಪ ಹಚ್ಚಿ ದೀಪಾವಳಿ ಆಚರಣೆ

ಮುಂಡಾಜೆ: ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾದ ಯೋಧರ ಸವಿನೆನಪಿಗಾಗಿ ನಿರ್ಮಾಣವಾದ ಕಾರ್ಗಿಲ್ ವನದಲ್ಲಿ ದೀಪಾವಳಿಯನ್ನು ದೀಪ ಬೆಳಗಿಸುವ ಮೂಲಕ ಆಚರಿಸಲಾಯಿತು.

ಕಾರ್ಗಿಲ್ ಯುದ್ಧದಲ್ಲಿ527 ಯೋಧರು ಅಮರರಾಗಿದ್ದಾರೆ ಆ ಯೋಧರನ್ನು ಗಿಡಗಳ ರೂಪದಲ್ಲಿ ಕಾಣುವ ಪ್ರಯತ್ನವೇ ಈ ಕಾರ್ಗಿಲ್ ವನ ಬೆಳ್ತಂಗಡಿ ತಾಲೂಕಿನ‌ ಮುಂಡಾಜೆ ಸಮೀಪ ಸಚಿನ್ ಭೀಢೆಯವರು ತಮ್ಮ ಸ್ವಂತ ಸುಮಾರು 6 ಎಕರೆ ಜಾಗದಲ್ಲಿ ವಿವಿಧ ರೀತಿಯ ಸಸಿಗಳನ್ನು ನೆಟ್ಟು ಜೋಪಾನವಾಗಿ ಪೋಷಿಸಿಕೊಂಡು ಬರುತ್ತಿದ್ದಾರೆ ಅಮರರಾದ ಸೈನಿಕರು ಈ ಗಿಡದ ಮೂಲಕ ಜೀವಂತವಾಗಿದ್ದಾರೆ ಎಂಬ ಕಲ್ಪನೆಯಲ್ಲಿ ತುಂಬಾ ಗೌರವಯುತವಾಗಿ ಅವರು ಈ ಸಸಿಗಳನ್ನು ಬೆಳೆಸುತಿದ್ದಾರೆ. ಅದ್ದರಿಂದ ಈ ಬಾರಿಯ ದೀಪಾವಳಿಯನ್ನು ಅವರು ವಿಶೇಷವಾಗಿ ಕಾರ್ಗಿಲ್ ವನದಲ್ಲಿ ಸಸಿಗಳ ಸುತ್ತ ದೀಪಗಳನ್ನು ಇಟ್ಟು ಆಚರಿಸಿಕೊಂಡಿದ್ದಾರೆ.

ಈ ವನದಲ್ಲಿ ವಿಶೇಷವಾಗಿ 527 ಗಿಡಗಳನ್ನು ಹುತಾತ್ಮ ಸೈನಿಕರ ನೆನಪಿನಲ್ಲಿ ನೆಟ್ಟಿದ್ದಾರೆ . ನೆಡುವ ಗಿಡಗಳು ಬರೀ ನೆರಳಿಗಾಗದೆ ಪ್ರಾಣಿ ಪಕ್ಷಿಗಳಿಗೂ ಆಸರೆಯಾಗುತ್ತಾ ಸೈನಿಕರು ಗಿಡಗಳ ರೂಪದಲ್ಲಿ ನಮ್ಮೊಂದಿಗಿರಲಿ ಎನ್ನುವ ಆಸೆ ಅವರದು.ಈ ಬಗ್ಗೆ ಪ್ರಜಾಪ್ರಕಾಶಕ್ಕೆ ಪ್ರತಿಕ್ರಿಯಿಸಿದ ಸಚಿನ್ ಬೀಢೆಯವರು ನಾನೊಮ್ಮೆ ಅಮರನಾಥ್‌ ಯಾತ್ರೆಗೆ ಹೋಗಿದ್ದೆ, ಅಲ್ಲಿ ಸೈನಿಕರು ಕೈಯಲ್ಲಿ ಎಕೆ 47 ಹಿಡಿದು ಯಾತ್ರಿಗಳನ್ನು ತಮ್ಮ ಮಕ್ಕಳಂತೆ ಜೋಪಾನ ಮಾಡುತ್ತಿದ್ದರು. ಇದೆಲ್ಲ ಯಾರಿಗಾಗಿ, ಸೈನಿಕರನ್ನು ಖುಷಿಯ ಸಮಯದಲ್ಲಿ ನಾವ್ಯಾರೂ ನೆನಯುವುದಿಲ್ಲ. ಕಷ್ಟ ಬಂದಾಗ ಅವರ ಬಳಿ ಓಡುತ್ತೇವೆ. ಹಾಗಾಗಿ ಸೈನಿಕರಿಗಾಗಿ ಏನಾದರೂ ಮಾಡಬೇಕೆಂದು ಈ ವನ ನಿರ್ಮಿಸಿದ್ದೇನೆ ಎಂದು ಸೈನಿಕರ ಮೇಲಿನ ತಮ್ಮ ಅಭಿಮಾನವನ್ನು ತೆರೆದಿಡುತ್ತಾರೆ . ಕಾರ್ಗಿಲ್‌ ಯುದ್ಧದ ಸಮಯದಲ್ಲಿ ತಂದೆ ಪ್ರಧಾನ ಮಂತ್ರಿಗಳ ಕಾರ್ಗಿಲ್‌ ಫಂಡ್‌ಗೆ ಹಣ ಕಳುಹಿಸಿಕೊಡುತಿದ್ದರು.

ಚಿಕ್ಕಂದಿನಿಂದಲೇ ನನಗೆ ಸೈನಿಕರ ಮೇಲೆ ಅಪಾರವಾದ ಗೌರವ ಹಾಗೂ ಅಭಿಮಾನ ನಾನು ಸೇನೆಯನ್ನು ಸೇರಲೂ ಪ್ರಯತ್ನಿಸಿದೆ ಆದರೆ ಅದು ಕೈಗೂಡಲಿಲ್ಲ. ಆದರೂ ಸೈನಿಕರ ತ್ಯಾಗ ನನ್ನ ಮನದಲ್ಲಿ ಅಚ್ಚಳಿಯದೆ ಉಳಿದು, ಈ ವನ ನಿರ್ಮಿಸಲು ಪ್ರೇರಣೆಯಾಯಿತು. 15 ರಿಂದ 18 ಲಕ್ಷ ರೂ ಆದಾಯ ಬರುವ ಹಿರಿಯರ ನೆಲದಲ್ಲಿ ಕಾರ್ಗಿಲ್‌ ವನ ಮಾಡುತ್ತೇನೆ ಅಂತಿಯಾ ಎಂಬ ಮಾತುಗಳ ನಡುವೆಯೂ ಮನೆಯವರ ಒಪ್ಪಿಗೆಯಂತೆ ಕಾರ್ಗಿಲ್‌ ದಿನದಂದು ವನವನ್ನು ಮಾಜಿ ಸೈನಿಕರ ಹಸ್ತದಿಂದ ಲೋಕಾರ್ಪಣೆಗೊಳಿಸಲಾಗಿದೆ ದಿನಾ ಇಲ್ಲಿ ಬಂದು ಸಸಿಗಳನ್ನು ನೋಡುತಿದ್ದೇನೆ ಈ ವನಕ್ಕೆ ಬಂದಾಗ ಅದೇನೋ ತುಂಬಾ ಖುಷಿಯಾಗುತ್ತ ಇದೆ ಸೈನಿಕರೇ ನನ್ನ ಬಳಿ ಇರುವಂತಹ ಅನುಭವವಾಗುತ್ತದೆ ಎಂದು ತನ್ನ ಅಭಿಪ್ರಾಯ ಹಂಚಿಕೊಂಡರು.
ಈ ಪ್ರದೇಶದಲ್ಲಿ ರಬ್ಬರ್‌ ಗಿಡಗಳಿದ್ದವು, ಅವುಗಳನ್ನು ತೆರವುಗೊಳಿಸಿ ಹಲಸು, ಹೆಬ್ಬಲಸು, ಸಾಗುವಾನಿ, ಮಹಾಗನಿ, ನೇರಳೆ, ನೆಲ್ಲಿ, ಕಹಿಬೇವು, ಹೆನ್ನರಳೆ ಯಂತಹ ಪಶ್ಚಿಮ ಘಟ್ಟದ ಸ್ಥಳೀಯ ತಳಿಗಳನ್ನು ವನದಲ್ಲಿ ನೆಟ್ಟಿದ್ದಾರೆ. ಇಷ್ಟು ವಿಶಾಲವಾದ ಪ್ರದೇಶವನ್ನು ಯಾವುದೇ ತರಹದ ವಾಣಿಜ್ಯ ಕೆಲಸಗಳಿಗೆ ಬಳಸದೆ ಕಾರ್ಗಿಲ್‌ ಯೋಧರ ನೆನಪಿಗಾಗಿ ಮೀಸಲಿಟ್ಟಿರುವುದು ವಿಶೇಷ. ರಕ್ಷಾ ಬಂಧನದಂದು ಕೊರೊನಾ ವಾರಿಯರ್ಸ್ ಗಳಾಗಿ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರನ್ನು ಕರೆಸಿ ವೃಕ್ಷಗಳಿಗೆ ರಾಖಿ ಕಟ್ಟಿಸಿ ‘ವೃಕ್ಷಾ ಬಂಧನʼ ಎಂಬ ವಿಶೇಷವಾದ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದ್ದರು. ಇವರ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತಿದೆ.

error: Content is protected !!