ಬೆಳ್ತಂಗಡಿ: ತಾಲೂಕಿನ ಕೇಂದ್ರಭಾಗದಲ್ಲಿ ಸಾಮೂಹಿಕವಾಗಿ ದೀಪಾವಳಿ ಆಚರಣೆ, ಗೋಪೂಜೆ ಮಾಡಿದ್ದು ಸಾವಿರ ದೀವಿಗೆಗಳ ಮೂಲಕ ಬೆಳ್ತಂಗಡಿ ಬೆಳಕಿನಿಂದ ಕಂಗೊಳಿಸುತ್ತಿದ್ದಂತೆ ಭಾಸವಾಯಿತು. ಸಾರ್ವಜನಿಕವಾಗಿ ಗೋಪೂಜೆಯನ್ನೂ ನೆರವೇರಿಸಿದ್ದು ಹೊಸ ತಲೆಮಾರಿಗೆ ಸಂಪ್ರದಾಯ ಸಾರುವ ಪ್ರಯತ್ನಕ್ಕೆ ಜನಮೆಚ್ಚುಗೆ ವ್ಯಕ್ತವಾಯಿತು.
ಎರಡು ದಿನಗಳಿಂದ ಇಡೀ ಪಟ್ಟಣವನ್ನೇ ಸಿಂಗರಿಸಿ, ನಗರಾಲಂಕಾರವನ್ನು ಬಿ.ಜೆ.ಪಿ. ತಾಲೂಕು ಯುವ ಮೋರ್ಚಾ ವತಿಯಿಂದ ಮಾಡಲಾಗಿದ್ದು, ಹಬ್ಬದ ಕಳೆ ಉಂಟುಮಾಡಿತ್ತು. ದೋಸೆ ಹಬ್ಬವೂ ನಡೆದಿದ್ದು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಸುಮಾರು ಹತ್ತು ಸಾವಿರ ದೋಸೆ ಹಂಚಿಕೆ:
ಶನಿವಾರ ಬೆಳಗ್ಗಿನಿಂದ ಸಂಜೆಯವರೆಗೆ ಆಯೋಜಿಸಿದ್ದ ದೀಪಾವಳಿ ದೋಸೆ ಹಬ್ಬದಲ್ಲಿ ಸುಮಾರು ಹತ್ತು ಸಾವಿರ ದೋಸೆಗಳನ್ನು ಸಾರ್ವಜನಿಕರು ಸವಿದು ಹಬ್ಬದ ಸಂತಸವನ್ನು ಅನುಭವಿಸಿದ್ದಾರೆ. ನಿರೀಕ್ಷೆಗೂ ಮೀರಿ ಸಾರ್ವಜನಿಕರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಟ್ಟಣಕ್ಕೆ ಆಗಮಿಸಿದ್ದ ಜನಸಾಮಾನ್ಯರು ಬಸ್ ನಿಲ್ದಾಣ ಬಳಿ ದೋಸೆ ರುಚಿ ಸವಿದರು.
ದೋಸೆ ಹೊಯ್ದ ಶಾಸಕರು:
ದೋಸೆ ಹಬ್ಬದ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಬಿ.ಜೆ.ಪಿ. ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಉದ್ಯಮಿ ಶಶಿಧರ್ ಶೆಟ್ಟಿ ನವಶಕ್ತಿ ಮೊದಲಾದವರು ದೋಸೆ ಹೊಯ್ಯುವ ಮೂಲಕ ದೋಸೆ ಹಬ್ಬಕ್ಕೆ ಚಾಲನೆ ನೀಡುವ ಜೊತೆಗೆ ಆಯೋಜಕನ್ನು ಹುರಿದುಂಬಿಸಿದಂತೆ ಕಂಡುಬಂದಿತು.
ಸಾವಿರ ದೀವಿಗೆಗಳ ರಂಗು:
ಸರಕಾರಿ ಬಸ್ ನಿಲ್ದಾಣ ಬಳಿ ಶನಿವಾರ ಸಂಜೆ ಸಾವಿರ ಹಣತೆಗಳನ್ನು ಬೆಳಗುವ ಮೂಲಕ ಅರ್ಥಪೂರ್ಣವಾಗಿ ಹಬ್ಬಾಚರಣೆ ನಡೆಯಿತು. ದೀಪಗಳ ಮೂಲಕ ತಾವರೆ ಚಿಹ್ನೆಯನ್ನು ಮೂಡಿಸಲಾಯಿತು. ಆದರೂ ದೂರದಿಂದ ವೀಕ್ಷಿಸುವವರಿಗೆ ಹಣತೆಗಳ ಪ್ರಕಾಶಮಾನವಾದ ಬೆಳಕು ಪಟ್ಟಣದಲ್ಲಿ ಹರಡಿದಂತೆ ಕಂಡುಬಂತು.
ಅರ್ಥಪೂರ್ಣ ಗೋಪೂಜೆ:
ಹಳ್ಳಿಗಳಿಗಷ್ಟೇ ಗೋಪೂಜೆ ಸೀಮಿತವಾಗಿದ್ದು, ಈ ಬಾರಿ ತಾಲೂಕಿನ ಕೇಂದ್ರ ಭಾಗದಲ್ಲಿ ಗೋಧೂಳಿ ಸಂದರ್ಭದಲ್ಲಿ ಗೋಪೂಜೆಯನ್ನು ನೆರವೇರಿಸಿರುವುದು, ಪಟ್ಟಣದ ಮಂದಿಗೆ ಸಾಂಪ್ರದಾಯಿಕ ಹಬ್ಬಾಚರಣೆಯ ನೆನಪು ಮೂಡುವಂತೆ ಮಾಡಿತು. ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಗೋಪೂಜೆ ನೆರವೇರಿಸಿದರೆ, ಮಹಿಳೆಯರು ಗೋವುಗಳಿಗೆ ಆರತಿ ಎತ್ತುವ ಮೂಲಕ ತುಳುವರ ‘ತುಡರ್ ಪರ್ಬ’ವನ್ನು ಅರ್ಥಗರ್ಭಿತವಾಗಿ ಆಚರಿಸುವಂತಾಯಿತು.
ಗೌಮಯ ಹಣತೆ (ಕಾಮಧೇನು ದೀಪಾವಳಿ) ಹಣತೆ:
ರಾಷ್ಟ್ರೀಯ ಕಾಮಧೇನು ಆಯೋಗ ಈ ಬಾರಿಯ ದೀಪಾವಳಿಯನ್ನು ಗೋಮಯ ಹಣತೆ ಉರಿಸುವ ಮೂಲಕ ‘ಕಾಮಧೇನು ದೀಪಾವಳಿ’ ಆಚರಿಸಬೇಕೆಂದು ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣ ಹಾಗೂ ಮಾಹಿತಿ ತಂತ್ರಜ್ಞಾನ ಪ್ರಕೋಷ್ಠ ಆರಂಭಿಸಿರುವ ಅಭಿಯಾನದ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕರಾದ ಅಜಿತ್ ಕುಮಾರ್ ಉಳ್ಳಾಲ್ ದೋಸೆ ಹಬ್ಬಕ್ಕೆ ಆಗಮಿಸಿದ್ದರು. ಶಾಸಕ ಹರೀಶ್ ಪೂಂಜ ಅವರು ಸ್ವಾಗತಿಸಿದರು. ಈ ವೇಳೆ ಸಂಚಾಲಕರು ಶಾಸಕರಿಗೆ ಗೋಮಯ ದೀಪಗಳನ್ನು ನೀಡಿದರು. ಈ ಮೂಲಕ ಗೋಮಯ ದೀವಿಗೆಯನ್ನು ಸಭಾ ಕಾರ್ಯಕ್ರಮದ ಸಂದರ್ಭದಲ್ಲಿ ಬೆಳಗುವಂತಾಯಿತು.
ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಸೀತರಾಮ ಬೆಳಾಲು, ಪ.ಪಂ. ಅಧ್ಯಕ್ಷೆ ರಜನಿಕುಡ್ವ, ಯುವ ಮೋರ್ಚಾ ಅಧ್ಯಕ್ಷರಾದ ಯಶವಂತ್ ಗೌಡ, ಬೆಳ್ತಂಗಡಿ ಮಂಡಲ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಸಂಚಾಲಕರಾದ ಸುಪ್ರೀತ್ ಜೈನ್, ಸದಸ್ಯರಾದ ರಂಜಿತ್, ಅಶೋಕ್ ಸಪಲ್ಯ, ನಿಶಾನ್ ಬಂಗೇರ ಧರ್ಮಸ್ಥಳ ಯುವ ಮೋರ್ಚಾದ ಓಂಕಾರ್ ಜೈನ್ ಮೊದಲಾದವರು ಉಪಸ್ಥಿತರಿದ್ದರು.