ರವಿ ಅಸ್ತಂಗತ: ಹಿರಿಯ ಪತ್ರಕರ್ತ, ಲೇಖಕ ರವಿ ಬೆಳಗೆರೆ ಇನ್ನಿಲ್ಲ

 

ಬೆಂಗಳೂರು: ಹೃದಯಾಘಾತದಿಂದ ಹಿರಿಯ ಪತ್ರಕರ್ತ ರವಿ ಬೆಳಗೆರೆ ನಿಧನರಾಗಿದ್ದಾರೆ. ಗುರುವಾರ ತಡರಾತ್ರಿ ಹಾಯ್ ಬೆಂಗಳೂರ್ ಕಚೇರಿಯಲ್ಲೇ ಅವರಿಗೆ ಹೃದಯಾಘಾತವಾಗಿದೆ. ಕೂಡಲೆ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗಿಲ್ಲ.
ರಾತ್ರಿ 12 ಗಂಟೆ ಹಾಯ್ ಬೆಂಗಳೂರು ಆಫೀಸ್ ನಲ್ಲಿ ಹೃದಯಾಘಾತವಾಗಿದೆ. ನಂತರ ಅಪೋಲೋ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.‌ ಬೆಂಗಳೂರಿನ ಪ್ರಾರ್ಥನಾ ಶಾಲೆಯಲ್ಲಿ ರವಿ ಬೆಳಗೆರೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಶುಕ್ರವಾರ ಬೆಳ್ಳಗ್ಗೆ 9 ಗಂಟೆಯಿಂದ ರವಿ ಬೆಳಗೆರೆ ಅವರ ಅಂತಿಮ‌ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ರವಿ ಬೆಳಗೆರೆ ಇಬ್ವರು ಪತ್ನಿಯರು, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
1958 ಮಾ. 15ರಂದು ಬಳ್ಳಾರಿಯಲ್ಲಿ ಜನಿಸಿದ ಬೆಳಗೆರೆ, ಶಿಕ್ಷಣವನ್ನ ಬಳ್ಳಾರಿಯಲ್ಲಿ ಮುಗಿಸಿದ್ದ ರವಿಬೆಳಗೆರೆ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ್ದರು. ನಂತರ ಲಂಕೇಶ್ ಪತ್ರಿಕೆಯಲ್ಲಿ ಕೆಲಸ ಆರಂಭಿಸಿದ್ದರು.1995 ರಲ್ಲಿ ಹಾಯ್ ಬೆಂಗಳೂರು ವಾರ ಪತ್ರಿಕೆ ಪ್ರಾರಂಭಿಸಿದರು. ಕ್ರೈಂ ಡೈರಿ ಕಾರ್ಯಕಮದ ನಿರೂಪಕರಾಗಿಯೂ ರವಿ ಬೆಳಗೆರೆ ಅವರು ಜನರಿಗೆ ಚಿರಪರಿಚಿತರಾದರು. ಪತ್ರಿಕಾರಂಗದ ಹಲವು ವಿಭಾಗದಲ್ಲಿ ಕೆಲಸ ಮಾಡಿದ್ದಾರೆ‌. ಯುವ ಜನತೆಗಾಗಿ ಓ ಮನಸೆ ಪಾಕ್ಷಿಕ ಆರಂಭಿಸಿ, ಜನಮನ್ನಣೆಗೆ ಪಾತ್ರವಾಗಿತ್ತು. ಕರ್ಮವೀರ, ಕಸ್ತೂರಿ, ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಕೆಲಸ ಮಾಡಿದ್ದ ರವಿಬೆಳಗೆರೆ ಭಾವನ ಆಡಿಯೋ, ಭಾವನ ಪ್ರಕಾಶನ , ಪ್ರಾರ್ಥನಾ ಶಾಲೆಯ ಸಂಸ್ಥಾಪಕರಾಗಿದ್ದರು. ಕಿರುತೆರೆಯಲ್ಲಿಯೂ ಬೆಳಗೆರೆ ಕಾಣಿಸಿಕೊಂಡಿದ್ದು, ಅವರ ನಿರೂಪಣೆ ಮೆಚ್ಚುಗೆಗೆ ಪಾತ್ರವಾಗಿತ್ತು. ಬಿಗ್ ಬಾಸ್ ಕೊನೆಯ ಸೀಸನ್ ನಲ್ಲಿಯೂ ಬೆಳಗೆರೆ ಭಾಗವಹಿಸಿದ್ದರು.
ಅವರ ಸರ್ಪ ಸಂಬಂಧ, ಭೀಮಾತೀರದ ಹಂತಕರು, ನೀ ಹಿಂಗ ನೋಡಬೇಡ ನನ್ನ, ಡಿ ಕಂಪನಿ, ರಾಜ್ ಲೀಲಾ ವಿನೋದ ಸೇರಿದಂತೆ ಹಲವು ಕೃತಿಗಳನ್ನು ಬರೆದು, ತಮ್ಮ ಬರವಣಿಗೆಯ ಮೂಲಕ ಓದುಗರಿಗೆ ಹತ್ತಿರವಾಗಿದ್ದರು.‌

error: Content is protected !!