ಬೆಳ್ತಂಗಡಿ: ಉತ್ತಮ ವಿದ್ಯಾಭ್ಯಾಸ ಹಾಗೂ ಸಾಧನೆಗಳನ್ನು ಮಾಡುವ ಮೂಲಕ ವಿದ್ಯಾರ್ಥಿಗಳು ಸಮಾಜ ಗುರುತಿಸುವಂತಹ ಕೆಲಸವನ್ನು ಮಾಡಬೇಕು. ಬಡ ವಿದ್ಯಾರ್ಥಿಗಳಿಗೆ ದಾನಿಗಳು ನೀಡುವ ಪ್ರೋತ್ಸಾಹ ಧನದ ಪ್ರೇರಣೆಯಿಂದ ತಾವೂ ಬಡ ವಿದ್ಯಾರ್ಥಿಗಳಿಗೆ ಸಹಾಯಹಸ್ತ ಚಾಚುವಂತಹ ಕೆಲಸವನ್ನು ಮುಂದಿನ ದಿನಗಳಲ್ಲಿ ಮಾಡಬೇಕು ಎಂದು ಯೂನಿಯನ್ ಬ್ಯಾಂಕ್ ಅಫ್ ಇಂಡಿಯಾದ ಉಪಪ್ರಾದೇಶಿಕ ಮುಖ್ಯಸ್ಥ ಹಾಗೂ ಒಲಿಂಪಿಯನ್ ಅರ್ಜುನ ಪ್ರಶಸ್ತಿ ಪುರಸ್ಕೃತ ಸತೀಶ್ ರೈ ಹೇಳಿದರು.
ಅವರು ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘ, ವತಿಯಿಂದ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಹಾಗೂ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಅರ್ಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈಗಾಗಲೇ ವಿದ್ಯಾಭ್ಯಾಸಕ್ಕಾಗಿ ಸರ್ಕಾರ ಹತ್ತು ಹಲವು ಯೋಜನೆಗಳನ್ನು ತಂದಿದೆಯಲ್ಲದೆ ಶಿಕ್ಷಣ ಸಾಲ ಸೌಲಭ್ಯದ ಮೂಲಕವೂ ಶಿಕ್ಷಣವನ್ನು ಮುಂದುವರಿಸಬಹುದು. ಈಗಾಗಲೇ ಬ್ಯಾಂಕ್ ಗಳು ವಿದ್ಯಾಭ್ಯಾಸ ಸಾಲವನ್ನು ಮಕ್ಕಳಿಗೆ ವಿತರಿಸುವ ಕೆಲಸವನ್ನು ಮಾಡುತ್ತಿವೆ. ಅದ್ದರಿಂದ ಈ ಸಾಲದ ಬಗ್ಗೆ ಸರಿಯಾದ ಮಾಹಿತಿಗಳನ್ನು ಪಡೆದುಕೊಂಡು ಅತ್ಯುತ್ತಮ ಶಿಕ್ಷಣವನ್ನು ಪಡೆದು ಉತ್ತಮ ಸಮಾಜವನ್ನು ನಿರ್ಮಿಸುವಲ್ಲಿ ಪ್ರಮುಖವಾದ ಪಾತ್ರ ವಹಿಸಬೇಕು ಎಂದರು.
ಮುಖ್ಯ ಆತಿಥಿಗಳಾಗಿ ಭಾಗವಹಿಸಿದ ಬೆಳ್ತಂಗಡಿ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಜಯರಾಮ ಶೆಟ್ಟಿ ಪಡಂಗಡಿ ಮಾತನಾಡಿ, ಈಗಾಗಲೇ ಹಲವು ದಾನಿಗಳ ಮೂಲಕ ಅರ್ಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸುವ ಕೆಲಸವನ್ನು ಬೆಳ್ತಂಗಡಿ ಬಂಟರ ಸಂಘ ಮಾಡುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳಿಗೆ ನೀಡಿದಂತಹ ಈ ಕೊಡುಗೆಯನ್ನು ನೆನಪಿನಲ್ಲಿ ಇಟ್ಟುಕೊಂಡು ಉತ್ತಮವಾದ ವಿದ್ಯಾಭ್ಯಾಸವನ್ನು ಪಡೆದು ಉನ್ನತ ಮಟ್ಟದ ಉದ್ಯೋಗವನ್ನು ಪಡೆದು ಮುಂದಿನ ದಿನಗಳಲ್ಲಿ ಬಡ ವಿದ್ಯಾರ್ಥಿಗಳಿಗೆ ಸಹಾಯಹಸ್ತ ನೀಡಬೇಕು ಎಂದರು. ರಘರಾಮ ಶೆಟ್ಟಿ “ಸಾಧನ” ಮಾತನಾಡಿ, ತಾಲೂಕಿನ ಕೆಲವು ಅರ್ಹ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವಂತಹ ಕೆಲಸವನ್ನು ಬಂಟರ ಸಂಘ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಮಕ್ಕಳಿಗೆ ವಿದ್ಯಾಭ್ಯಾಸ ಮುಂದುವರಿಸಲು ಪ್ರೋತ್ಸಾಹಿಸುವ ಕೆಲಸವನ್ನು ನಾವೆಲ್ಲ ಹಿರಿಯರು ಸೇರಿ ಮಾಡಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುಷ್ಪರಾಜ್ ಶೆಟ್ಟಿ ಅವರು ಮಾತನಾಡಿ, ಬಂಟರ ಸಂಘದಲ್ಲಿ ಕೊರೊನಾ ಸಂದರ್ಭದಲ್ಲೂ ಪ್ರತಿಭಾನ್ವಿತರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮ ಹಾಗೂ ಸುಮಾರು 120 ಅರ್ಹ ವಿದ್ಯಾರ್ಥಿಗಳಿಗೆ ತಲಾ 1500 ರಂತೆ ಪ್ರೋತ್ಸಾಹಧನ ವಿತರಣೆಯನ್ನು ಅಚ್ಚುಕಟ್ಟಾಗಿ ಮಾಡಿದ್ದೇವೆ. ಈ ಸಂದರ್ಭದಲ್ಲಿ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು. ಉತ್ತಮ ಸಮಾಜ ನಿರ್ಮಾಣದ ಜವಾಬ್ದಾರಿ ವಿದ್ಯಾರ್ಥಿಗಳಿಗಿದೆ ಸಮಾಜದಿಂದ ನಾವೆನು ಪಡದುಕೊಳ್ಳುತ್ತಿದ್ದೇವೆ ಎಂಬುವುದು ಮುಖ್ಯವಲ್ಲ ಸಮಾಜಕ್ಕಾಗಿ ನಾವೇನು ನೀಡಬಹುದು ಎನ್ನುವುದನ್ನು ಅರಿತುಕೊಂಡಿರಬೇಕು. ಕೊರೊನಾ ಸಂಕಷ್ಟದಲ್ಲಿ ಹತ್ತು ಹಲವು ಸಮಸ್ಯೆಗಳನ್ನು ನಾವು ಎದುರಿಸುತ್ತಿದ್ದೇವೆ. ಇದರ ಹೊರತಾಗಿಯೂ ಸಮಾಜದ ಅರ್ಹ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಬಂಟರ ಸಂಘ ಮಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸತೀಶ್ ರೈ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬಂಟರ ಸಂಘದ ಉಪಾಧ್ಯಕ್ಷ ರಾಜೇಶ್ ಶೆಟ್ಟಿ “ನವ ಶಕ್ತಿ” ,ವಿದ್ಯಾರ್ಥಿ ನಿಧಿ ಸಂಚಾಲಕ ಜಯರಾಮ ಶೆಟ್ಟಿ ಮುಂಡಾಡಿಗುತ್ತು, , ಮಹಿಳಾ ವಿಭಾಗದ ಅಧ್ಯಕ್ಷೆ ಸಾರಿಕ ಡಿ. ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಬಂಟರ ಸಂಘದ ಕಾರ್ಯದರ್ಶಿ ರಾಜು ಶೆಟ್ಟಿ ಬೇಂಗೆತ್ಯಾರ್ ಸ್ವಾಗತಿಸಿ. ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಪ್ರಸ್ತಾವನೆಗೈದರು. ಜತೆ ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯ್ಲ ವಂದಿಸಿದರು. ವಸಂತ ಶೆಟ್ಟಿ “ಶ್ರದ್ಧಾ” ನಿರೂಪಿಸಿದರು.