ಅಮೆರಿಕಾದ 46ನೇ ಅಧ್ಯಕ್ಷರಾಗಿ ಜೋ‌ ಬೈಡನ್ ಆಯ್ಕೆ: ಶ್ವೇತಭವನದ ಚುನಾವಣಾ ಕದನ ಕುತೂಹಲಕ್ಕೆ ತೆರೆ

ವಾಷಿಂಗ್ಟನ್: ರೋಮಾಂಚನ ಮೂಡಿಸುತ್ತಿದ್ದ ಅಮೆರಿಕದ ಅಧ್ಯಕ್ಷೀಯ ಚುನಾವಣಾ ಫಲಿತಾಂಶದ ಕದನ‌ ಕುತೂಹಲಕ್ಕೆ ತೆರೆ ಬಿದ್ದಿದ್ದು, ಡೆಮಾಕ್ರೆಟಿಕ್ ಪಕ್ಷದ 77 ವರ್ಷ ವಯಸ್ಸಿನ ಜೋಸೆಫ್ ರಾಬಿನೇಟ್ ಬೈಡನ್ ಜೂನಿಯರ್ (ಜೋ ಬೈಡನ್) ಅಮೆರಿಕಾದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬೈಡನ್ ಈ ತಿಂಗಳ ಕೊನೆಗೆ ತಮ್ಮ 78ನೇ ಹುಟ್ಟುಹಬ್ಬವನ್ನೂ ಆಚರಿಸಿಕೊಳ್ಳಲಿದ್ದಾರೆ. ಉಪಾಧ್ಯಕ್ಷರಾಗಿ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಆಯ್ಕೆಯಾಗಿದ್ದಾರೆ.
ಈ ಮೂಲಕ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರಿಗೆ ಮುಖಬಂಗವಾಗಿದೆ. ಬೈಡನ್ 290 ಸ್ಥಾನಗಳನ್ನು ಗೆದ್ದುಕೊಂಡು ವಿಜಯಿಯಾಗಿದ್ದಾರೆ. ಬೈಡನ್ ಅವರು ಬರಾಕ್ ಒಬಾಮ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅಮೇರಿಕಾದ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.


ಸ್ಪಷ್ಟ ಬಹುಮತಕ್ಕೆ 270 ಸ್ಥಾನಗಳ ಅಗತ್ಯವಿದ್ದು, ಮುನ್ನಡೆಯನ್ನು ಉಳಿಸಿಕೊಂಡಿದ್ದ ಬೈಡನ್ ಗೆ ಜಯ ಲಭಿಸಿದೆ. ಉಳಿದಂತೆ ಲಿಬರ್ಟೇರಿಯನ್ (ಸ್ವತಂತ್ರವಾದಿ) ಪಕ್ಷದ ಅಭ್ಯರ್ಥಿ ಜೋ ಜಾರ್ಗೆನ್ಸನ್, ಗ್ರೀನ್(ಹಸಿರು) ಪಕ್ಷದ ಹೋವೇ ಹಾಕಿನ್ಸ್ ಹಾಗೂ ಇತರರು ಕನಿಷ್ಠ ಮತಗಳೊಂದಿಗೆ ಸೋಲು ಕಾಣುವಂತಾಯಿತು.
ಅಧ್ಯಕ್ಷೀಯ ಚುನಾವಣೆಯಲ್ಲಿ ಮಂಗಳವಾರ 10 ಕೋಟಿಗೂ ಅಧಿಕ ಮತದಾರರು ಮತ ಚಲಾಯಿಸಿದ್ದರು. ನಿರ್ಣಾಯಕ ಎನಿಸಿದ ಫ್ಲೋರಿಡಾ, ಜಾರ್ಜಿಯಾ ಮತ್ತು ಓಹಿಯೊದಲ್ಲಿ ತುರುಸಿನ ಸ್ಪರ್ಧೆ ಕಂಡುಬಂದಿತ್ತು.
ಕನೆಕ್ಟಿಕಟ್ , ಡೆಲವರ್, ಇಲಿನೋಯಿಸ್ , ಮೆರಿಲ್ಯಾಂಡ್ , ಮೆಸೆಚುಸೆಟ್ಸ್ , ನ್ಯೂಜೆರ್ಸಿ, ನ್ಯೂಯಾರ್ಕ್ , ರೋಡ್ ದ್ವೀಪ , ವರ್ಮೊಂಟ್ ಮತ್ತು ವರ್ಜೀನಿಯಾ ಮೊದಲಾದ ರಾಜ್ಯಗಳಲ್ಲಿ ಬೈಡನ್ ಗೆದ್ದಿದ್ದಾರೆ.

error: Content is protected !!