ಬೆಳ್ತಂಗಡಿ: ಪ್ರಾಥಮಿಕ ಶಿಕ್ಷಣ ಮಟ್ಟದಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ನೀಡುವ ಸೂಕ್ತ ಮಾರ್ಗದರ್ಶನ, ಪ್ರೇರಣೆಯೇ ಮುಂದೆ ಅವರು ತಮ್ಮ ಭವಿಷ್ಯವನ್ನು ರೂಪಿಸುವ ಜತೆ ಸಾಧನೆಯನ್ನು ಮಾಡಲು ಸಾಧ್ಯ. ಪ್ರಾಥಮಿಕ ಶಿಕ್ಷಣದ ವ್ಯವಸ್ಥೆ ಪ್ರತಿಯೊಬ್ಬರನ್ನು ಪರಿವರ್ತನೆ ಮಾಡುತ್ತದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಭಾನುವಾರ ಕೊಯ್ಯೂರಿನ ಆದೂರ್‌ಪೆರಾಲ್ ಪಂಚದುರ್ಗಾ ಸಭಾಭವನದಲ್ಲಿ ಹುಟ್ಟೂರ ಅಭಿನಂದನಾ ಸಮಿತಿ ವತಿಯಿಂದ ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ಕೊಯ್ಯೂರಿನ ಸಾಧಕರನ್ನು ಗೌರವಿಸಿ, ಮಾತನಾಡಿದರು.
ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳಲ್ಲಿ ಸುಸಜ್ಜಿತ ಕೊಠಡಿ, ಕ್ರೀಡಾಂಗಣ, ಪ್ರಯೋಗಾಲಯ, ಶೌಚಾಲಯ ಮೊದಲಾದ ಮೂಲಭೂತ ಸೌಕರ್ಯಗಳಿದ್ದರೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ. ಊರವರ ಸಹಕಾರದಿಂದ ಮಾದರಿ ಶಾಲಾ-ಕಾಲೇಜುಗಳನ್ನು ನಿರ್ಮಾಣ ಮಾಡಲು ಸಾಧ್ಯ. ಗ್ರಾಮೀಣ ಭಾಗದ ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಶಿಕ್ಷಕರಿದ್ದು ಸಾಧಕರನ್ನು ಸಮಾಜಕ್ಕೆ ನೀಡುತ್ತಿದೆ. ಶಿಕ್ಷಕರ ಪ್ರಾಮಾಣಿಕ ಪ್ರಯತ್ನಗಳೇ ಶೇ. ನೂರು ಫಲಿತಾಂಶದ ಜತೆಗೆ ರಾಷ್ಟ್ರ ಮಟ್ಟದ ಪ್ರತಿಭೆಗಳು ಅನಾವರಣಗೊಳ್ಳುತ್ತಾರೆ ಎಂದರು.
ನಡದಂತಹ ಗ್ರಾಮೀಣ ಶಾಲೆಯಲ್ಲಿ ಕೊಯ್ಯೂರಿನ ಯಾಕುಬ್ ಅವರು ಗಣಿತ ಪ್ರಯೋಗಾಲಯವನ್ನು ನಿರ್ಮಿಸಿ, ಇಂದು ಅರ್ಹವಾಗಿಯೇ ರಾಷ್ಟ್ರ ಪುರಸ್ಕೃತ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೇಂದ್ರ ಸರಕಾರ ಇಂತಹ ಗ್ರಾಮೀಣ ಪ್ರದೇಶದ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸ ಆಗುತ್ತಿದೆ. ತಮ್ಮ ವೃತ್ತಿ ಬದುಕಿನಲ್ಲಿ ಪ್ರಾಮಾಣಿಕ ಸೇವೆ ಮಾಡಿದರೆ ನಿವೃತ್ತಿ ನಂತರವೂ ಸಮಾಜ ಗುರುತಿಸುತ್ತದೆ ಎಂಬುದಕ್ಕೆ ಶಿಕ್ಷಕಿ ಜಾಹ್ನವಿಯವರೇ ಸಾಕ್ಷಿ. ಅವರಿಗೆ ಇದಕ್ಕಿಂತ ದೊಡ್ಡ ಪ್ರಶಸ್ತಿ ಬೇಕಾಗಿಲ್ಲ ಎಂದ ಅವರು, ಗ್ರಾಮೀಣ ಪ್ರದೇಶದ ಪ್ರತಿಭೆಗಳಾದ ರಾಷ್ಟ್ರ ಮಟ್ಟದ ಕ್ರೀಡಾಸಾಧಕಿ ಮುನ್ಸಿರಭಾನು ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ 4ನೇ ಸ್ಥಾನ ಪಡೆದ ಶೈವಿ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರೇರಣೆ. ಗ್ರಾಮೀಣ ಪ್ರದೇಶದ ಈ ಪ್ರತಿಭೆಗಳು ವಿಧ್ಯಾರ್ಥಿ ಜೀವನದಲ್ಲಿ ಸಾಧನೆ ಮಾಡಬಹುದು ತೋರಿಸಿಕೊಟ್ಟಿದ್ದಾರೆ. ಮುನ್ಸಿರಾಭಾನುರವರ ಮುಂದಿನ ಶಿಕ್ಷಣ ಹಾಗೂ ಕ್ರೀಡಾ ವ್ಯವಸ್ಥೆಗೆ ಶಾಸಕನ ನೆಲೆಯಲ್ಲಿ ಪೂರ್ಣ ಪ್ರಮಾಣದ ಸಹಕಾರ ನೀಡುತ್ತೇನೆ. ಶೈವಿಯವರ ಮುಂದಿನ ಶಿಕ್ಷಣಕ್ಕಾಗಿ ರೂ. 25 ಸಾವಿರ ರೂ. ನೀಡುವುದಾಗಿ ಪ್ರಕಟಿಸಿದರು.
ನಾನು ಶಾಸಕನಾಗಿ ಎರಡೂವರೆ ವರ್ಷದಲ್ಲಿ ಕೊಯ್ಯೂರು ಗ್ರಾಮಕ್ಕೆ ಸುಮಾರು 35 ಕೋ.ರೂ. ಅನುದಾನವನ್ನು ನೀಡಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಶಾಲೆಯ ಸಭಾಂಗಣ ಹಾಗೂ ರಸ್ತೆಗೆ ಬೇಡಿಕೆಯನ್ನಿಟ್ಟಿದ್ದು, ಮುಂಬರುವ ದಿನದಲ್ಲಿ ಅದನ್ನು ಮಾಡಿಸಿಕೊಡುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಕೃಷಿ ವಿಭಾಗದ ಪ್ರಬಂಧಕ ಬಾಲಕೃಷ್ಣ ಪೂಜಾರಿ ಬಜೆ ಅಭಿನಂದನಾ ಭಾಷಣ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಯ್ಯೂರು ಸಿಎ ಬ್ಯಾಂಕಿನ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಭಟ್ ಅಂಕಸಾಲೆ ವಹಿಸಿದ್ದರು. ವೇದಿಕೆಯಲ್ಲಿ ಜಿ.ಪಂ. ಸಾ.ಸ್ಥಾಯಿ ಸಮಿತಿ ಅಧ್ಯಕ್ಷೆ ಮಮತಾ ಎಂ.ಶೆಟ್ಟಿ, ತಾ.ಪಂ. ಸದಸ್ಯ ಪ್ರವೀಣ್ ಗೌಡ, ಎಸ್‌ಡಿಎಂಸಿ ಉಪಾಧ್ಯಕ್ಷ ದಾಮೋದರ ಗೌಡ ಉಪಸ್ಥಿತರಿದ್ದರು.
ಪ್ರಸಕ್ತ ವರ್ಷದ ರಾಷ್ಟ್ರ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯಿಂದ ಪುರಸ್ಕೃತರಾದ ಬೆಳ್ತಂಗಡಿ ತಾಲೂಕು ನಡ ಸರಕಾರಿ ಪ್ರೌಢ ಶಾಲಾ ಗಣಿತ ಶಿಕ್ಷಕ ಯಾಕೂಬ್ ಕೊಯ್ಯೂರು, 2019-20 ಶೈಕ್ಷಣಿಕ ವರ್ಷದಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ 4ನೇ ಸ್ಥಾನ ಗಳಿಸಿದ ಕೊಯ್ಯೂರು ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಬಿ. ಶೈವಿ, ಮುಖ್ಯೋಪಾಧ್ಯಾಯರಾಗಿ ನಿವೃತ್ತಿ ಹೊಂದಿದ ಕೊಯ್ಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಜಾಹ್ನವಿ ಹಾಗೂ ನೆಟ್‌ಬಾಲ್‌ನಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಮುನ್ಸಿರಾಭಾನು ಅವರನ್ನು ಹುಟ್ಟೂರ ಅಭಿನಂದನಾ ಸಮಿತಿಯಿಂದ ಗೌರವಿಸಿ, ಸನ್ಮಾನಿಸಲಾಯಿತು.
ಪ್ರಗತಿಪರ ಕೃಷಿಕ ಪ್ರಚಂಡಭಾನು ಭಟ್ ಸ್ವಾಗತಿಸಿ, ಪ್ರಸ್ತಾವಿಸಿದರು. ಕೊಯ್ಯೂರು ಪ್ರೌಢಶಾಲಾ ಮುಖ್ಯಶಿಕ್ಷಕ ಬಾಲಕೃಷ್ಣ ತಚ್ಚಮೆ ಸನ್ಮಾನಿತರನ್ನು ಪರಿಚಯಿಸಿದರು. ಎಸ್‌ಡಿಎಂ ಪ್ರಾಧ್ಯಾಪಕ ಡಾ.ದಿವಾ ಕೊಕ್ಕಡ ಕಾರ್ಯಕ್ರಮ ನಿರ್ವಹಿಸಿದರು.