
ಬೆಳ್ತಂಗಡಿ: ಬೆಳಾಲು ಗ್ರಾಮದ
ಮಿನಂದೇಲು ಎಂಬಲ್ಲಿ ದ್ವಿಚಕ್ರ ವಾಹನವೊಂದು ಜೂ.12ರಂದು ನಡು ರಸ್ತೆಯಲ್ಲಿ ಹೊತ್ತಿ ಉರಿದ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಬಾಲಕ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಬುಧವಾರ ನಡೆದಿದೆ.
ಬೆಳಾಲು ನಿವಾಸಿ ನಿವೃತ್ತ ಮಾಜಿ ಸೈನಿಕ ಮೋಹನ್ ಗೌಡ ಕಾಡಂಡ ಅವರ ಪುತ್ರ ಉಜಿರೆಯ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯೊಂದರ ವಿದ್ಯಾರ್ಥಿ ದಿಯಾನ್ (7) ಮೃತಪಟ್ಟ ಬಾಲಕ.
ಮೋಹನ್ ಗೌಡ ಅವರು ದಿಯಾನ್ ನನ್ನು ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ತಾಂತ್ರಿಕ ದೋಷದಿಂದ ಬೆಂಕಿ ಹತ್ತಿಕೊಂಡು ಬಾಲಕನಿಗೆ ತೀವ್ರತರದ ಸುಟ್ಟ ಗಾಯಗಳಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತ ಬಾಲಕನಿಗೆ ತಂದೆ,ತಾಯಿ ಹಾಗೂ ಸಹೋದರಿ ಇದ್ದಾರೆ.
ಮೋಹನ್ ಗೌಡ ಕಾಡಂಡ ಅವರು ಭಾರತೀಯ ಭೂಸೇನೆಯಲ್ಲಿ 24 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಏ.5 ರಂದು ಹುಟ್ಟೂರಿಗೆ ಆಗಮಿಸಿದ್ದರು. ಅವರು ಜೂ.12ರಂದು ತನ್ನ ಪುತ್ರನನ್ನು ಸ್ಕೂಟರ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಘಟನೆ ಸಂಭವಿಸಿತ್ತು. ಮೋಹನ್ ಗೌಡ ಕಾಡಂಡ ಅವರಿಗೂ ಗಾಯಗಳಾಗಿದ್ದು, ಅವರು ಚೇತರಿಸಿಕೊಂಡಿದ್ದಾರೆ.