
ಮಂಡ್ಯ: ಕಾವೇರಿ ನದಿಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ವೇಳೆ ಕಾಲು ಜಾರಿ ನೀರಿನ ಬಲವಾದ ಸೆಳೆತಕ್ಕೆ ಸಿಲುಕಿದ ಪರಿಣಾಮ ಬೆಂಗಳೂರು ಮೂಲದ ಒಂದೇ ಕುಟುಂಬದ ನಾಲ್ವರು ಮಹಿಳೆಯರು ಮತ್ತು ಕಾರಿನ ಚಾಲಕ ಸೇರಿ ಐವರು ಮೃತಪಟ್ಟ ದಾರುಣ ಘಟನೆ ಬುಧವಾರ ಸಂಜೆ ಮಂಡ್ಯ: ಸಮೀಪದ ಪ್ರವಾಸಿ ತಾಣವಾದ ಮುತ್ತತ್ತಿಯ ಬಳಿ ನಡೆದಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಜಗದಪುರ ಗ್ರಾಮದ ನಿವಾಸಿಗಳಾದ ವಿಜಯಮ್ಮ (52), ಅವರ ಮಗಳು ಪ್ರಿಯಾಂಕಾ ಹಾಗೂ ಶ್ವೇತಾ (38), ಅವರ ಮಗಳು ಚೈತ್ರಾ (20) ಹಾಗೂ ಬೆಂಗಳೂರಿನ ಕಾರಿನ ಚಾಲಕ ಮಹೇಶ್ (30) ಮೃತರು ಎಂದು ಗುರುತಿಸಲಾಗಿದೆ.
ಇವರು ಕಬ್ಬಾಳು ದೇವಸ್ಥಾನದಲ್ಲಿ ಬೀಗರ ಔತಣ ಕೂಟದ ನಿಮಿತ್ತ ಆಗಮಿಸಿ ಪೂಜೆ ಸಲ್ಲಿಸಿದ ಬಳಿಕ ಮಳವಳ್ಳಿ ತಾಲೂಕಿನ ಮುತ್ತತ್ತಿ ಪ್ರವಾಸಿ ತಾಣಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ನಂತರ ಕಾವೇರಿ ನದಿಯಲ್ಲಿ ಸೆಲ್ಫಿ ಕ್ಲಿಕ್ಕಿಸುವ ವೇಳೆ ಅಕಸ್ಮಿಕವಾಗಿ ಕಾಲು ಜಾರಿ ನಾಲ್ವರು ಮಹಿಳೆಯರು ನದಿಗೆ ಬಿದ್ದಿದ್ದು, ನದಿಯ ವೇಗದ ಹರಿವು ಅವರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಅವರನ್ನು ರಕ್ಷಿಸಲು ಮುಂದಾದ ಕಾರಿನ ಚಾಲಕ ಮಹೇಶ್ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ನೀರಿನಲ್ಲಿ ಮುಳುಗಿದ್ದ ಮೃತದೇಹಗಳನ್ನು ನುರಿತ ಈಜುಗಾರರ ಸಹಾಯದಿಂದ ರಾತ್ರಿ ಸುಮಾರು 7 ಗಂಟೆಯ ವೇಳೆಗೆ ಹೊರತೆಗೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಬಳಿಕ ಮೃತದೇಹಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್, ಜಿಲ್ಲಾ ಪೊಲೀಸ್ ಅಧೀಕ್ಷಕಿ ವಿ.ಜೆ. ಶೋಭಾರಾಣಿ, ಡಿವೈಎಸ್ಪಿ ಯಶವಂತ್ ಕುಮಾರ್ ಹಾಗೂ ಹಲಗೂರು ಪೊಲೀಸ್ ಠಾಣೆಯ ಪಿಎಸ್ಐ ಲೋಕೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.