ಕೃತಕ ನೆರೆಗೆ ನದಿ ಒತ್ತುವರಿ ಕಾರಣ, ಕ್ರಮ ಕೈಗೊಳ್ಳದ ,ಅಧಿಕಾರಿಗಳ ವಿರುದ್ದ ಆಕ್ರೋಶ: ಗಡಾಯಿಕಲ್ಲು ಶುಲ್ಕ  ವಸೂಲಿ ,ಗ್ರಾಮ ಪಂಚಾಯತ್ ಗೂ ಪಾಲು ನೀಡಿ : ಉಜಿರೆ, ಸುರ್ಯ , ಕೇಳ್ತಾಜೆ, ಇಂದಬೆಟ್ಟು,  ಮೂಲಕ ಬಸ್ ಸಂಚಾರಕ್ಕೆ ಒತ್ತಾಯ: ನಡ ಗ್ರಾಮ ಸಭೆ, ಚರಂಡಿ , ರೇಶನ್ ಕಾರ್ಡ್ , ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಗ್ರಾಮಸ್ಥರ ಚರ್ಚೆ:

 

ಬೆಳ್ತಂಗಡಿ: ನಡ ಗ್ರಾಮ ಪಂಚಾಯತ್ 2026-27ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಆಗಸ್ಟ್ 4 ರಂದು  ಗ್ರಾಮ ಪಂಚಾಯತ್ ಸಭಾಭವನದಲ್ಲಿ ಆಡಳಿತಾಧಿಕಾರಿ ರಮೇಶ್ ಪಿ .ಕೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಹಕಾರಿ ಅಭಿವೃದ್ಧಿ ಅಧಿಕಾರಿ ಪ್ರತಿಮಾ ಅವರು ಮಾರ್ಗದರ್ಶಿ ಅಧಿಕಾರಿಯಾಗಿ ಸಭೆ ಮುನ್ನಡೆಸಿದರು. ಕಾರ್ಯದರ್ಶಿ ಕಿರಣ್ ಎಂ ಅವರು ವಾರ್ಡ್ ಸಭೆಯಲ್ಲಿ ಬಂದ ವರದಿಯನ್ನು ಮಂಡಿಸಿ ಸಭೆಯ ಅನುಮೋದನೆ ಪಡೆದರು.

16 ಲಕ್ಷ ಅನುದಾನ ಬಂದರೂ ಸ್ಮಶಾನ ಕಾಮಗಾರಿ ಅರ್ಧಕ್ಕೆ ನಿಲುಗಡೆ
ಸಭೆಯಲ್ಲಿ ಮಾತನಾಡಿದ ಗ್ರಾಮಸ್ಥ ಪ್ರವೀಣ್ ನಡ, ಕನ್ಯಾಡಿ ಗ್ರಾಮಕ್ಕೆ ಬೇಕಾದ ಸ್ಮಶಾನಕ್ಕೆ ಸರ್ಕಾರದಿಂದ 16 ಲಕ್ಷ ರೂ. ಅನುದಾನ ಬಂದಿದ್ದರೂ ಗುತ್ತಿಗೆದಾರರು ಕಳಪೆ ಮಟ್ಟದ ಕಾಮಗಾರಿ ನಡೆಸಿ ಅರ್ಧಕ್ಕೆ ನಿಲ್ಲಿಸಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಅದೇ ರೀತಿ ನಡ ಗ್ರಾಮ ಪಂಚಾಯತ್ ಕಟ್ಟಡದ ಕಾಮಗಾರಿಯೂ ಅರ್ಧಕ್ಕೆ ನಿಂತಿದ್ದು, ಯಾವುದೇ ಪ್ರಗತಿ ಕಾಣುತ್ತಿಲ್ಲ ಎಂದು ದೂರಿದರು. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಉನ್ನತ ಅಧಿಕಾರಿಗಳಿಗೆ ಲಿಖಿತ ದೂರು ನೀಡಲಾಗಿದೆ ಎಂದು ತಿಳಿಸಿದರು.

ಇದಕ್ಕೆ ಉತ್ತರಿಸಿದ ಪಿಡಿಒ ತಾರಾನಾಥ್ ನ್ಯಾಕ್, ಗುತ್ತಿಗೆದಾರರಿಗೆ ಒಂದು ತಿಂಗಳ ಕಾಲಾವಕಾಶ ನೀಡಿ ಕಾಮಗಾರಿ ಪೂರ್ಣಗೊಳಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು. ನಿಗದಿತ ಅವಧಿಯಲ್ಲಿ ಕೆಲಸ ಮುಗಿಸದಿದ್ದರೆ ಗುತ್ತಿಗೆ ರದ್ದು ಮಾಡಿ ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ರಸ್ತೆ, ಅಂಗನವಾಡಿ, ತಡೆಗೋಡೆ – ವರ್ಷಗಳಿಂದ ಬಗೆಹರಿಯದ ಸಮಸ್ಯೆ
ಕಾಂಕ್ರೀಟ್ ರಸ್ತೆಗೆ ಒತ್ತಾಯ: ಮಾತನಾಡಿದ ಗ್ರಾಮಸ್ಥರು, ಮಳೆ ಬಂದಾಗಲೆಲ್ಲಾ ರಸ್ತೆಗಳು ಹಾಳಾಗುತ್ತಿವೆ. ಆದ್ದರಿಂದ ಡಾಂಬರೀಕರಣ ಮಾಡದೇ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಬೇಕು ಎಂದು ಪಂಚಾಯತ್ ಮತ್ತು ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿದರು.

ಕೆಲ್ತಾಜೆಯಲ್ಲಿ ಪ್ರತಿ ಮಳೆಗೆ ನೀರು ಅಂಗನವಾಡಿಯೊಳಗೆ ಬರುವುದರಿಂದ .ಚಿಕ್ಕ ಮಕ್ಕಳಿಗೆ ಸಮಸ್ಯೆಯಾಗುತ್ತಿದೆ.ಅದಲ್ಲದೆ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಓಡಾಡಲು ತೊಂದರೆಯಾಗುತ್ತಿದೆ. ಚಿಕ್ಕ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಇದಕ್ಕೆ ಶಾಶ್ವತ ಪರಿಹಾರ ಮಾಡಬೇಕು..ಧರ್ಮಸ್ಥಳದಿಂದ ಉಜಿರೆ, ಸುರ್ಯ ,ಕೆಲ್ತಾಜೆ, ಇಂದಬೆಟ್ಟು ವರೆಗೆ ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಬಸ್ ವ್ಯವಸ್ಥೆಗೆ ಕಲ್ಪಿಸಬೇಕು ಇದರಿಂದ ದಿನನಿತ್ಯ ಶಾಲೆಗೆ ತೆರಳುವ ನೂರಾರು ವಿದ್ಯಾರ್ಥಿಗಳಿಗೆ , ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಎಂದು ವಿಠಲ ಶೆಟ್ಟಿ ಬೊಲ್ಲೊಟ್ಟು ಸಭೆಯಲ್ಲಿ ಆಗ್ರಹಿಸಿದರು.

ಸುರ್ಯ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ಹರಿಯುತ್ತಿದೆ. ಸುರ್ಯ ಕುಮೇರು ಭಾಗದಲ್ಲಿ ಮಣ್ಣು ಕುಸಿದು ಮನೆಯ ಅಂಗಳಕ್ಕೆ ಬಿದ್ದಿದೆ. ತಡೆಗೋಡೆ ನಿರ್ಮಾಣಕ್ಕೆ. ಅನುದಾನ ಮಂಜೂರುಗೊಂಡಿದೆ ಎನ್ನುವ ಮಾಹಿತಿ ಇದೆ‌. 4 ವರ್ಷವಾದರೂ ಕಾಮಗಾರಿ ನಡೆದಿಲ್ಲ ತಕ್ಷಣ ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥ ಅರುಣ್ ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರಿಗಳ ಗೈರು ಹಾಜರಿಗೆ ಶ್ಯಾಮ್ ಸುಂದರ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ ಗ್ರಾಮ ಸಭೆಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗೈರು ಹಾಜರಾಗುತ್ತಿದ್ದಾರೆ. ಇಲಾಖೆಯ ಮಾಹಿತಿ ಸರಿಯಾಗಿ ಸಿಗದಿದ್ದರೆ ಗ್ರಾಮ ಸಭೆಯನ್ನು ಮಾಡಿ ಪ್ರಯೋಜನವಿಲ್ಲ ಎಂದು ಕಿಡಿಕಾರಿದರು.
ಲಕ್ಷ ಲಕ್ಷ ಸಂಬಳವನ್ನು ತೆಗೆದುಕೊಂಡು ಗ್ರಾಮದ ಸಮಸ್ಯೆ ಬಂದಾಗ ಇಲಾಖೆಯ ಅಧಿಕಾರಿಗಳು ಗ್ರಾಮ ಸಭೆಗೆ ಬರುವುದಿಲ್ಲ. ವಿಶೇಷವಾಗಿ ಲೋಕೋಪಯೋಗಿ ಇಲಾಖೆಯಿಂದ ಅನೇಕ ಸಮಸ್ಯೆ ಉಂಟಾಗಿದೆ. ಅಧಿಕಾರಿಗಳನ್ನು ತಕ್ಷಣ ಗ್ರಾಮ ಸಭೆಯಲ್ಲಿ ಭಾಗವಹಿಸಲು ತಿಳಿಸಿ ಎಂದು ಪಟ್ಟು ಹಿಡಿದರು. ನದಿಗಳನ್ನು ಅತಿಕ್ರಮಣ ಮಾಡಿರುವುದರಿಂದ ಕೃತಕ ನೆರೆ ಉಂಟಾಗುತ್ತದೆ. ಉಳ್ಳವರು ಏನು ಮಾಡಿದರೂ ನಡೆಯುತ್ತದೆ, ಅದರೆ ಬಡವರು ಚಿಕ್ಕ ಮನೆ ಕಟ್ಟಿದರೂ ಅವರ ಮೇಲೆ ಕಾನೂನು ಕ್ರಮ ತಗೊಳ್ಳುವ ಅಧಿಕಾರಿಗಳು, ಈ ಬಗ್ಗೆ ಮೌನ ಯಾಕೆ. ಅಲ್ಲಲ್ಲಿ ನದಿ ಒತ್ತುವರಿ ಮಾಡಿಕೊಂಡು ನೀರಿನ ಹರಿವನ್ನೆ ಬದಲಾಯಿಸಿದ್ದಾರೆ. ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಹಾಗಾದರೆ ಬಡವರಿಗೆ ನ್ಯಾಯ ಕೊಡುವವರು ಯಾರು ಎಂದು ಸಭೆಯಲ್ಲಿ ಪ್ರಶ್ನಿಸಿದರು.

ಅಪಾಯಕಾರಿ ಮರ ಮತ್ತು ಹಳೆಯ ವಿದ್ಯುತ್ ಕಂಬ: ಗ್ರಾಮದ ಹಲವೆಡೆ ವಿದ್ಯುತ್ ತಂತಿಗೆ ತಾಗಿಕೊಂಡಿರುವ ಅಪಾಯಕಾರಿ ಮರಗಳು ಇವೆ. ಮಳೆಗಾಲದಲ್ಲಿ ಅವಘಡ ಸಂಭವಿಸುವ ಭೀತಿ ಇದೆ. ಅದೇ ರೀತಿ ಹಳೆಯ ಕಬ್ಬಿಣದ ವಿದ್ಯುತ್ ಕಂಬಗಳು ತುಕ್ಕು ಹಿಡಿದಿವೆ. ಇವುಗಳನ್ನು ತಕ್ಷಣ ತೆರವು ಮಾಡಿ ಸಿಮೆಂಟ್ ಕಂಬ ಅಳವಡಿಸಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆ ಮತ್ತು ಮೆಸ್ಕಾಂ ಇಲಾಖೆಯನ್ನು ಒತ್ತಾಯಿಸಿದರು.

ಕಸ್ತೂರಿ ರಂಗನ್ ವ್ಯಾಪ್ತಿ ವಿರೋಧ:

ನಡ ಗ್ರಾಮದ ಕೆಲವು ಮನೆಗಳು ಕಸ್ತೂರಿ ರಂಗನ್ ವ್ಯಾಪ್ತಿಗೆ ಸೇರಿವೆ ಎಂಬ ಮಾಹಿತಿ ಇದೆ. ಇದರಿಂದ ರೈತರು ಮತ್ತು ಗ್ರಾಮಸ್ಥರಿಗೆ ತೊಂದರೆಯಾಗಲಿದೆ. ನಡ ಗ್ರಾಮವನ್ನು ಕಸ್ತೂರಿ ರಂಗನ್ ವ್ಯಾಪ್ತಿಯಿಂದ ಸಂಪೂರ್ಣವಾಗಿ ಹೊರಗಿಡಬೇಕು ಎಂದು ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಇದಕ್ಕೆ ಅರಣ್ಯ ಇಲಾಖೆ ಅಧಿಕಾರಿ, “ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ” ಎಂದು ಉತ್ತರಿಸಿದರು.

ಗಡಾಯಿಕಲ್ಲು ಶುಲ್ಕ ವಿವಾದ:

ನಡ ಗ್ರಾಮದ ಗಡಾಯಿಕಲ್ಲು ಹೋಗುವ ರಸ್ತೆ ಪಂಚಾಯತ್ ವ್ಯಾಪ್ತಿಗೆ ಸೇರಿದೆ ಸಾರ್ವಜನಿಕ ರಸ್ತೆಯಾಗಿದೆ. ಅಲ್ಲಿಗೆ ಹೋಗುವ ಪ್ರವಾಸಿಗರಿಂದ ಅರಣ್ಯ ಇಲಾಖೆ ಹಣ ವಸೂಲಿ ಮಾಡುತ್ತಿದೆ. ಆದರೆ ಇದರಿಂದ ಗ್ರಾಮಕ್ಕೆ ಮತ್ತು ಜನರಿಗೆ ಯಾವುದೇ ಕೊಡುಗೆ ಇಲ್ಲ. ಆದ್ದರಿಂದ ನಡ ಮತ್ತು ಕನ್ಯಾಡಿ ಗ್ರಾಮದ ಜನರಿಗೆ ಉಚಿತವಾಗಿ ಪ್ರವೇಶ ನೀಡಬೇಕು ಅದಲ್ಲದೇ ವಿವಿಧ ಅಭಿವೃದ್ದಿಗಾಗಿ ಅರ್ಧ ಪಾಲನ್ನು ಪಂಚಾಯತ್ ಗೆ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ನಡ ಗ್ರಾಮದಲ್ಲಿ ಮಳೆ ಮಾಪನ ಯಂತ್ರ ಸರಿಯಿಲ್ಲದ ಕಾರಣ ರೈತರಿಗೆ ಬೆಳೆ ವಿಮೆಯಲ್ಲಿ ತಾರತಮ್ಯವಾಗಿದೆ. ಇದರಿಂದ ರೈತರ ಜೀವನದ ಜೊತೆ ಚೆಲ್ಲಾಟವಾಡಲಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆ ಎಂದು ರೈತರು ಆರೋಪಿಸಿದರು.

SSLC ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿನಿಯನ್ನು ಗ್ರಾಮದ ಪರವಾಗಿ ಗೌರವಿಸಲಾಯಿತು.ನಡ ಕನ್ಯಾಡಿ ಭಾಗದಲ್ಲೂ ಮುಂದಿನ ಗ್ರಾಮ ಸಭೆಯನ್ನು ಆಯೋಜಿಸಬೇಕು, ಆ ಭಾಗದ ಸಮಸ್ಯೆಗಳಿಗೂ ಅಧಿಕಾರಿಗಳು ಸ್ಪಂದಿಸಬೇಕು ಎಂದು ಪ್ರಭಾಕರ ನಾಯ್ಕ ಸಭೆಯಲ್ಲಿ ತಿಳಿಸಿದರು.ನಡ ಕನ್ಯಾಡಿ ಭಾಗದ ಪಡಿತರ ಚೀಟಿ ಹೊಂದಿರುವವರಿಗೆ ನಡ ಕನ್ಯಾಡಿಯಲ್ಲಿ ಸೊಸೈಟಿಯಲ್ಲಿ ರೇಶನ್ ಸಿಗುವಂತೆ ವ್ಯವಸ್ಥೆ ಮಾಡುವಂತೆ ಪ್ರವೀಣ್ ವಿಜಿ ಆಹಾರ ಇಲಾಖೆಗೆ ಮನವಿ ಮಾಡಿದರು.
ಸಭೆಯಲ್ಲಿ ಸಂತೋಷ್ , ಬಾಲಕೃಷ್ಣ ಗೌಡ, ವಿಜಯ ಗೌಡ , ಸೇರಿದಂತೆ ಇತರ ಗ್ರಾಮಸ್ಥರು ಗ್ರಾಮಗಳ ವಿವಿಧ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಲ್ಲಿ ಚರ್ಚಿಸಿದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಾರಾನಾಥ್ ನ್ಯಾಕ್ ಸ್ವಾಗತಿಸಿದರು. ಸಿಬ್ಬಂದಿ ಮೀನಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ಭಾರತಿ ಅವರು ಪಂಚಾಯತ್ ಜಮಾ-ಖರ್ಚಿನ ಲೆಕ್ಕವನ್ನು ಪ್ರಸ್ತಾಪಿಸಿದರು.

error: Content is protected !!