ಡೆತ್ ನೋಟ್ ಬರೆದಿಟ್ಟು, ಅಪ್ರಾಪ್ತೆ ಆತ್ಮಹತ್ಯೆ, ಯುವಕನ ವಿರುದ್ಧ ಪೋಕ್ಸೋ ಕೇಸ್ ದಾಖಲು ಗರ್ಭಿಣಿಯಾಗಿದ್ದ ಬಾಲಕಿ, ಪೋಷಕರಿಂದ ದೂರು ದಾಖಲು, ಆರೋಪಿ ಪತ್ತೆಗೆ ಪೊಲೀಸರ ಶೋಧ

 

 

 

ಮಂಗಳೂರು:  ಅಪ್ರಾಪ್ತ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ  ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.. ಈ ಘಟನೆಗೆ ಸಂಬಂಧಿಸಿದಂತೆ ಆರೋಪಿ ಯುವಕನ ವಿರುದ್ಧ ಪೋಕ್ಸೊ (POCSO) ಕಾಯ್ದೆ, ಅತ್ಯಾಚಾರ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ತಿಳಿಸಿದ್ದಾರೆ.

ಘಟನೆಯ ವಿವರ: ಏಪ್ರಿಲ್​ 23 ರಂದು ಸಂಜೆ ಸುಮಾರು 4 ಗಂಟೆಯ ವೇಳೆಗೆ 17 ವರ್ಷದ ಬಾಲಕಿ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೂ ಮುನ್ನ ಬಾಲಕಿಯು ತನ್ನ ಪೋಷಕರಿಗೆ ಡೆತ್‌ನೋಟ್ ಒಂದನ್ನು ಬರೆದಿಟ್ಟಿದ್ದು, ಅದರಲ್ಲಿ ನಾನು ಒಂದು ತಪ್ಪು ಮಾಡಿದ್ದೇನೆ, ಅವನು ಈಗ ಸಂತೋಷವಾಗಿದ್ದಾನೆ. ಅವನು ಹಿಂದೂ ಸಂಘಟನೆಗಳ ಜೊತೆಗಿದ್ದರೂ ಸಹ, ಆ ಸಂಘಟನೆಗಳು ನನಗೆ ಯಾವುದೇ ಸಹಾಯ ಮಾಡಲಿಲ್ಲ ಎಂದು ಉಲ್ಲೇಖಿಸಿದ್ದಾಳೆ ಎನ್ನಲಾಗಿದೆ.

ಘಟನೆ ನಡೆದ ಬಳಿಕ ಅಂದು ರಾತ್ರಿ 11 ಗಂಟೆಯ ಸುಮಾರಿಗೆ ಬಾಲಕಿಯ ಪೋಷಕರು ಸುರತ್ಕಲ್ ಪೊಲೀಸ್ ಠಾಣೆಗೆ ಬಂದು ಲಿಖಿತ ದೂರು ನೀಡಿದ್ದಾರೆ. ಮೃತ ಬಾಲಕಿಯು ಗರ್ಭಿಣಿಯಾಗಿದ್ದಳು ಮತ್ತು ಆಕೆಯ ಈ ಆತ್ಮಹತ್ಯೆಗೆ ಯುವಕನೇ ನೇರ ಕಾರಣ ಎಂದು ಪೋಷಕರು ದೂರಿನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಪೋಷಕರ ದೂರಿನ ಆಧಾರದ ಮೇಲೆ ತಡರಾತ್ರಿ 1 ಗಂಟೆಯ ಸುಮಾರಿಗೆ ಸುರತ್ಕಲ್ ಪೊಲೀಸರು ಆರೋಪಿಯ ವಿರುದ್ಧ ಪೋಕ್ಸೊ ಕಾಯ್ದೆ, ಅತ್ಯಾಚಾರ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಗಳ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತ ಬಾಲಕಿಯ ಮರಣೋತ್ತರ ಪರೀಕ್ಷೆ ಈಗಾಗಲೇ ಪೂರ್ಣಗೊಂಡಿದ್ದು, ಡಿಎನ್‌ಎ (DNA) ತಪಾಸಣೆಗಾಗಿ ವೈದ್ಯರು ಭ್ರೂಣದ ಮಾದರಿಯನ್ನು ಸಂಗ್ರಹಿಸಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಯನ್ನು ಬಂಧಿಸಲು ಪೊಲೀಸರ ವಿಶೇಷ ತಂಡವೊಂದನ್ನು ನಿಯೋಜಿಸಲಾಗಿದ್ದು, ಆರೋಪಿಯ ಪತ್ತೆಗಾಗಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸ್ ಕಮೀಷನರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!