ಮಂಗಳೂರು: ದೀಪಾವಳಿಗೆ ಇನ್ನೇನು ಕೆಲವೆ ದಿನಗಳು ಬಾಕಿ ಇದೆ. ಮನೆ ಅಲಂಕಾರದ ಯೋಜನೆಗಳು ತಯಾರಾಗುತ್ತಿದೆ. ಆಧುನಿಕತೆಗೆ ಹೊಂದಿಕೊಂಡ ಜನಜೀವನ ಹಳೆಯ ಸಂಪ್ರದಾಯಗಳನ್ನು ಮರೆತು ಪಾಶ್ಚಿಮಾತ್ಯ ಸಂಸ್ಕೃತಿಗೆ ಒಗ್ಗಿಕೊಳ್ಳುತ್ತಿರುವುದು ವಿಪರ್ಯಾಸ. ಅದರಲ್ಲೂ ದೀಪಾವಳಿ ಸಂದರ್ಭದಲ್ಲಿ ಮನೆ ಹೊರಗೆ ನೇತಾಡುತ್ತಿದ್ದ ಸಾಂಪ್ರದಾಯಿಕ ಗೂಡುದೀಪಗಳು ಮರೆಯಾಗಿ ವಿದ್ಯುತ್ ಬೆಳಕಿನ ದೀಪಗಳು ಮಿನುಗುತ್ತಿದೆ. ಹೀಗಾಗಿ ಹಳೆಯ ಸಂಪ್ರದಾಯಕ್ಕೆ ಮತ್ತೆ ಮರುಜೀವ ನೀಡಲು ಕಳೆದ 25 ವರ್ಷಗಳಿಂದ ‘ನಮ್ಮಕುಡ್ಲ’ ಗೂಡುದೀಪ ಸ್ಪರ್ಧೆ ನಡೆಸಲಾಗುತ್ತಿದೆ
ಅ.30ರಂದು ಕುದ್ರೋಳಿಯಲ್ಲಿ ‘ನಮ್ಮಕುಡ್ಲ’ ಗೂಡುದೀಪ ಸ್ಪರ್ಧೆ ನಡೆಯಲಿದೆ. ಸಾಂಪ್ರದಾಯಿಕ, ಆಧುನಿಕ ಮತ್ತು ಪ್ರತಿಕೃತಿ ಎಂಬ ಮೂರು ವಿಭಾಗದಲ್ಲಿ ಸ್ಪರ್ಧೆ ನಡೆಸಲಾಗುತ್ತಿದ್ದು, ಈ ಬಾರಿಯೂ ಈ ಮೂರೂ ವಿಭಾಗದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ.
‘ನಮ್ಮಕುಡ್ಲ’ ಗೂಡುದೀಪ ಸ್ಪರ್ಧೆಯ ನಿಯಮಗಳು ಹೀಗಿವೆ
ಸಾಂಪ್ರದಾಯಿಕ ವಿಭಾಗ : ಬಣ್ಣದ ಕಾಗದ, ಗ್ಲಾಸ್ ಪೇಪರ್ ಅಥವಾ ಬಟ್ಟೆಯಿಂದ ಗೂಡುದೀಪ ತಯಾರು ಮಾಡಿರಬೇಕು. ಗೂಡುದೀಪಕ್ಕೆ ಬಾಲ ಇರಬೇಕು ಹಾಗೂ ಅದು ನೇತು ಹಾಕುವಂತಿರಬೇಕು. ಗೂಡುದೀಪದ ಒಳಗಿನ ಬೆಳಕು ಹೊರಗೆ ಕಾಣುವಂತೆ ತಯಾರಿಸಬೇಕು. ಇದರಲ್ಲಿ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಅಥವಾ ಯಾವುದೇ ಆಧುನಿಕ ಪರಿಕರಗಳನ್ನು ಬಳಸುವಂತಿಲ್ಲ. ಬೇಗಡೆಯನ್ನು ಉಪಯೋಗಿಸಲು ಅವಕಾಶ ಇದೆ. ಗೂಡುದೀಪ ಶುದ್ಧವಾಗಿ ಸಾಂಪ್ರದಾಯಿಕವಾಗಿಯೇ ಇರಬೇಕು.
ಆಧುನಿಕ ವಿಭಾಗ : ಆಧುನಿಕ ಗೂಡುದೀಪದಲ್ಲಿ ಯಾವುದೇ ಆಧುನಿಕ ಪರಿಕರಗಳನ್ನು ಬಳಸಬಹುದಾಗಿದೆ. ಆದರೆ, ಸಾಂಪ್ರದಾಯಿಕ ಗೂಡುದೀಪದಂತೆ ಇದೂ ಕೂಡ ನೇತು ಹಾಕುವಂತೆ ಇರಬೇಕು. ಗೂಡುದೀಪದಲ್ಲಿ ಗೂಡು ಇರುವುದು ಕಡ್ಡಾಯವಾಗಿದ್ದು, ಪ್ರತಿಕೃತಿಯ ಹೋಲಿಕೆ ಇರಬಾರದು.
ಪ್ರತಿಕೃತಿ ವಿಭಾಗ : ಇದರಲ್ಲಿ ಯಾವುದೇ ಕಲಾತ್ಮಕ ರಚನೆಗೆ ಅವಕಾಶವಿದೆ. ಯಾವುದೇ ಆಧುನಿಕ ಪರಿಕರಗಳನ್ನು ಇದರಲ್ಲಿ ಬಳಕೆ ಮಾಡಬಹುದಾಗಿದೆ. ಆದಷ್ಟು ಹೊಸತನವನ್ನು ಅಳವಡಿಸಿಕೊಂಡು ಪ್ರತಿಕೃತಿಯ ರಚನೆ ಇರಬೇಕು.
ಮೂರು ವಿಭಾಗದಲ್ಲೂ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರಿಗೆ ಚಿನ್ನದ ಪದಕ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಬೆಳ್ಳಿಯ ಪದಕ ನೀಡಲಾಗುತ್ತದೆ.