ಆಂಧ್ರಪ್ರದೇಶ: ಕೂತಲ್ಲಿ, ನಿಂತಲ್ಲಿ, ಮಲಗಿದ್ದಲ್ಲಿ, ಆಟ ಆಡೋ ಸಮಯದಲ್ಲಿ, ಕ್ಲಾಸ್ ರೂಂ ನಲ್ಲಿ ಹೀಗೆ ಎಲ್ಲೆಂದರಲ್ಲಿ ಜನ ಹೃದಯಾಘಾತದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿದೆ. ಆಂಧ್ರಪ್ರದೇಶದಲ್ಲಿ ಬಸ್ ಚಾಲಕರೊಬ್ಬರು ಹೃದಯಾಘಾತದಿಂದಲೇ ಸಾವನ್ನಪ್ಪಿದ್ದು ಆದರೆ ಬಸ್ ನಲ್ಲಿದ್ದ 40 ಪ್ರಯಾಣಿಕರನ್ನು ರಕ್ಷಿಸಿ ಉಸಿರುಚೆಲ್ಲಿದ್ದಾರೆ.
ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯಲ್ಲಿ ನಡೆದ ಘಟನೆ ಇದು. ರಾಯಪಲ್ಲಿ-ಚೀರಾಳ ಪಲ್ಲೆ ವೇಲುಕ್ ಆರ್ ಟಿಸಿ ಬಸ್ ಚಲಾಯಿಸುತ್ತಿದ್ದ ಚಾಲಕನಿಗೆ ಇದ್ದಕ್ಕಿದ್ದಂತೆ ಹೃದಯಾಘಾತವಾಗಿದೆ. ಬಸ್ ಬಾಪಟ್ಲ ಸಮೀಪದ ಕರ್ಲಪಾಲೆಂ ತಲುಪಿದಾಗ ಚಾಲಕ ಸಾಂಬಶಿವ ರಾವ್ ಅವರಿಗೆ ಹೃದಯಾಘಾತವಾಗಿತ್ತು. ಆ ವೇಳೆ ಬಸ್‌ನಲ್ಲಿ 40 ಮಂದಿ ಪ್ರಯಾಣಿಕರಿದ್ದರು.
ತಾನು ಅಸ್ವಸ್ಥಗೊಳ್ಳುತ್ತಿರುವ ಬಗ್ಗೆ ಚಾಲಕನಿಗೆ ಸೂಚನೆ ಸಿಕ್ಕಂತೆ ಚಾಲಕ ಬಸ್‌ನ ವೇಗ ಕಡಿಮೆ ಮಾಡಿ ನಿಲ್ಲಿಸಲು ಯತ್ನಿಸಿದ್ದಾರೆ. ಆದರೆ ಅಷ್ಟರಲ್ಲಿ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಬಸ್ ನಿಧಾನವಾಗಿ ಪಕ್ಕದ ಹೊಲಗಳಿಗೆ ನುಗ್ಗಿ ನಿಂತಿದೆ. ಈ ಸಂದರ್ಭ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಸೈಕಲ್ ಸವಾರನಿಗೆ ಬಸ್ ಡಿಕ್ಕಿ ಹೊಡೆದು ಸಣ್ಣಪುಟ್ಟ ಗಾಯಗಳಾಗಿವೆ.
ಅದೃಷ್ಟವಶಾತ್ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 40 ಪ್ರಯಾಣಿಕರು ಸುರಕ್ಷಿತವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.