ಸಾಂದರ್ಭಿಕ ಚಿತ್ರ
ನವದೆಹಲಿ: ನಾಲ್ಕನೇ ಮಗುವೂ ಹೆಣ್ಣು ಮಗು ಆಯಿತು ಎಂದು ಹೆತ್ತ ತಾಯಿಯೇ ತನ್ನ 6 ದಿನದ ಕಂದಮ್ಮನನ್ನು ಹತ್ಯೆ ಮಾಡಿರುವ ಘಟನೆ ಪಶ್ಚಿಮ ದೆಹಲಿಯ ಖಯಾಲ್ ಪ್ರದೇಶದಲ್ಲಿ ನಡೆದಿದೆ.
ಶಿಶು ಕಣ್ಮರೆಯಾಗಿದೆ ಎಂಬ ದೂರಿನ ಮೇರೆಗೆ ಬೆಳಗಿನ ಜಾವ 5.30ರ ಸುಮಾರಿಗೆ ಸ್ಥಳಕ್ಕೆ ಬಂದ ಪೊಲೀಸರು ಮೊದಲು ತಾಯಿ ಶಿವಾನಿಯನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಆಕೆ ಹಿಂದಿನ ರಾತ್ರಿ ತಾನು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಬಂದಿದ್ದು, ಮಧ್ಯರಾತ್ರಿ ಎರಡು ಗಂಟೆಗೆ ಮಗುವಿಗೆ ಹಾಲು ಕುಡಿಸಿ ಮಲಗಿಸಿದ್ದೆ. ಬೆಳಗ್ಗೆ 4.30ಕ್ಕೆ ಎಚ್ಚರವಾದಾಗ ಮಗು ಇರಲಿಲ್ಲ ಎಂದು ತಿಳಿಸಿದ್ದಾರೆ. ಬಳಿಕ ತಾಯಿ ಶಿವಾನಿ, ಶಸ್ತ್ರಚಿಕಿತ್ಸೆಯ ಹೋಲಿಗೆ ತೆಗೆಯಲು ಆಸ್ಪತ್ರೆಗೆ ಹೋಗಬೇಕಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಆಕೆಯ ನಡೆ ಪೊಲೀಸರಿಗೆ ಅನುಮಾನ ಮೂಡಿಸಿದ್ದರೂ ವೈದ್ಯಕೀಯ ಕಾರಣದಿಂದ ಆಕೆಗೆ ಹೋಗಲು ಅನುಮತಿ ನೀಡಿದ್ದರು.
ಘಟನೆ ಸಂಬಂಧ ಪೊಲೀಸರು ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿ ದೃಶ್ಯಗಳನ್ನು ಜಾಲಾಡಿದ್ದಾರೆ. ಶೋಧದ ವೇಳೆ ನೆರೆ ಮನೆಯ ಛಾವಣಿ ಮೇಲೆ ಬ್ಯಾಗ್‌ವೊಂದು ಪತ್ತೆಯಾಗಿದ್ದು, ಅದರಲ್ಲಿ ಮಗು ಇರುವುದು ಕಂಡು ಬಂದಿತ್ತು. ತಕ್ಷಣಕ್ಕೆ ಮಗುವನ್ನು ಆಸ್ಪತ್ರೆಗೆ ಕರೆತರಲಾಯಿತ್ತಾದರೂ ಅಷ್ಟೊತ್ತಿಗಾಗಲೇ ಮಗು ಅಸುನೀಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ತಂಡವೊಂದು ಶಿವಾನಿ ಅವರನ್ನು ತೀವ್ರ ತಪಾಸಣೆಗೆ ಒಳಪಡಿಸಿದಾಗ ಕೃತ್ಯವನ್ನು ತಾಯಿಯೇ ಎಸಗಿರುವುದು ಬಹಿರಂಗಗೊಂಡಿದೆ. ಮೃತಪಟ್ಟಿರುವ ಮಗುವು ತನ್ನ ನಾಲ್ಕನೇ ಮಗುವಾಗಿದ್ದು, ಈಗಾಗಲೇ ಎರಡು ಕೂಸುಗಳು ಸಾವನ್ನಪ್ಪಿವೆ. ಸಾಮಾಜಿಕ ಕಳಂಕದ ಕಾರಣದಿಂದ ಈ ಕೃತ್ಯ ಎಸಗಿದ್ದಾಗಿ ಆಕೆ ಒಪ್ಪಿಕೊಂಡಿದ್ದಾಳೆ.
ಮಗುವಿಗೆ ಹಾಲು ಕುಡಿಸುವಾಗ ಶಿವಾನಿ ಮಗುವನ್ನು ಸಾಯಿಸಿ, ಪಕ್ಕದ ಮನೆಯ ಛಾವಣಿ ಮೇಲೆ ಎಸೆದಿದ್ದಾಳೆ. ಈ ವಿಷಯ ಕುಟುಂಬಕ್ಕೆ ಗೊತ್ತಾದರೆ ಏನಾಗಲಿದೆ ಎಂಬ ಆತಂಕದಿಂದ ಮಗು ಕಣ್ಮರೆ ಆಗಿದೆ ಎಂದು ನಾಟಕವಾಡಿದ್ದಾಗಿ ತಿಳಿಸಿದ್ದಾಳೆ. ಪ್ರಕರಣದ ಸಂಬಂಧ ತಾಯಿ ಶಿವಾನಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಮಗುವಿನ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.