ಪೌರ ಕಾರ್ಮಿಕರ ಸವಲತ್ತು ನಿರಾಕರಿಸಿದರೆ ಕಠಿಣ ಕಾನೂನು ಕ್ರಮ: ಪಿ. ರಘು

 

 

 

ಬೆಳ್ತಂಗಡಿ: ಪೌರ ಕಾರ್ಮಿಕರಿಗೆ ದೊರೆಯಬೇಕಾದ ಗೃಹಭಾಗ್ಯ, ನಿವೇಶನ ಸೇರಿದಂತೆ ಸಂವಿಧಾನಬದ್ಧ ಸವಲತ್ತುಗಳನ್ನು ನಿರಾಕರಿಸಿದರೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ. ರಘು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಸೋಮವಾರ ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ಪಟ್ಟಣ ಪಂಚಾಯತ್ ಪೌರ ಕಾರ್ಮಿಕರು ಹಾಗೂ ಗ್ರಾಮ ಪಂಚಾಯತ್‌ಗಳ ಸ್ವಚ್ಛತಾ ಕಾರ್ಮಿಕರ ಅಹವಾಲುಗಳನ್ನು ಸ್ವೀಕರಿಸಿ ಅವರು ಮಾತನಾಡಿದರು.

ಬೆಳ್ತಂಗಡಿ ಪಟ್ಟಣ ಪಂಚಾಯತ್ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್ ಸುದೆಮುಗೇರು ಮಾತನಾಡಿ, ಪಟ್ಟಣ ಪಂಚಾಯತ್‌ನಲ್ಲಿ ಪೌರ ಕಾರ್ಮಿಕರಿಗೆ ಗೃಹಭಾಗ್ಯ ಯೋಜನೆ ಜಾರಿಯಾಗುತ್ತಿಲ್ಲ ಎಂದು ದೂರಿದರು. ಸಂಘದ ಕಾರ್ಯದರ್ಶಿ ಚಂದ್ರಭೋವಿ ಮಾತನಾಡಿ, ಹಲವು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಸ್ವಂತ ಜಮೀನು ಇಲ್ಲ. ನಿವೇಶನಕ್ಕಾಗಿ ಮನವಿ ಮಾಡುತ್ತಿದ್ದರೂ ಕಳೆದ ಐದು ವರ್ಷಗಳಿಂದ ಅಧಿಕಾರಿಗಳು ‘ಇಂದು, ನಾಳೆ’ ಎಂದು ಸತಾಯಿಸುತ್ತಿದ್ದಾರೆ ಎಂದು ಅಹವಾಲು ಸಲ್ಲಿಸಿದರು.

ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಆಯೋಗದ ಅಧ್ಯಕ್ಷ ಪಿ. ರಘು, ಸರ್ಕಾರದ ಗೃಹಭಾಗ್ಯ ಯೋಜನೆಯನ್ನು ಜಾರಿಗೊಳಿಸದ ಹಾಗೂ ಅರ್ಹ ಪೌರ ಕಾರ್ಮಿಕರಿಗೆ ನಿವೇಶನ ಒದಗಿಸದ ಕುರಿತು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕೆ. ರಾಜೇಶ್, ಆಡಳಿತಾಧಿಕಾರಿ ಹಾಗೂ ತಹಶೀಲ್ದಾರ್ ಎಸ್.ಎನ್. ನರಗುಂದ ಅವರನ್ನು ತರಾಟೆಗೆ ತೆಗೆದುಕೊಂಡರು. ಇಂತಹ ನಿರ್ಲಕ್ಷ್ಯವನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಪೌರ ಕಾರ್ಮಿಕರಿಗೆ ತಿಂಗಳಿಗೆ ಕೇವಲ ಒಂದು ಸೋಪ್ ನೀಡುತ್ತಿರುವ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಅವರು, ಇಂತಹ ಪ್ರಕರಣಗಳು ಮತ್ತೊಮ್ಮೆ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇದೇ ವೇಳೆ, ಕಾನೂನುಬಾಹಿರವಾಗಿ ಪಟ್ಟಣ ಪಂಚಾಯತ್ ಸದಸ್ಯೆಯ ಪತಿಯನ್ನು ಸ್ಯಾನಿಟೈಜರ್ ಗುಮಾಸ್ತನಾಗಿ ನೇಮಕ ಮಾಡಿರುವ ಕುರಿತು ಮಾಹಿತಿ ಪಡೆದ ಅಧ್ಯಕ್ಷರು, ತಕ್ಷಣ ಅವರನ್ನು ಸೇವೆಯಿಂದ ಕೈಬಿಟ್ಟು ಅರ್ಹತೆಯ ಆಧಾರದಲ್ಲಿ ಪೌರ ಕಾರ್ಮಿಕರನ್ನು ನೇಮಕ ಮಾಡುವಂತೆ ಮುಖ್ಯಾಧಿಕಾರಿಗೆ ಸೂಚಿಸಿದರು.

ಪಟ್ಟಣ ಪಂಚಾಯತ್‌ನ ಸ್ವಚ್ಛತಾ ವಾಹನ, ಶೌಚಾಲಯ ಹಾಗೂ ಡ್ರೈನೇಜ್ ಸ್ವಚ್ಛತಾ ವಾಹನಗಳ ಚಾಲಕರು ಕೂಡ ತಮ್ಮ ವಿವಿಧ ಸಮಸ್ಯೆಗಳನ್ನು ಅಧ್ಯಕ್ಷರ ಗಮನಕ್ಕೆ ತಂದರು.

ಸ್ವಚ್ಛತಾ ಕಾರ್ಮಿಕರಿಗೆ ಕಡಿಮೆ ವೇತನ

ಗ್ರಾಮ ಪಂಚಾಯತ್‌ಗಳಲ್ಲಿ ದುಡಿಯುತ್ತಿರುವ ಸ್ವಚ್ಛತಾ ಕಾರ್ಮಿಕರಿಗೆ ತಿಂಗಳಿಗೆ ಕೇವಲ 12–13 ದಿನ ಕೆಲಸ ನೀಡಲಾಗುತ್ತಿದ್ದು, ನಾಲ್ಕೈದು ಸಾವಿರ ರೂಪಾಯಿ ಮಾತ್ರ ವೇತನ ನೀಡಲಾಗುತ್ತಿದೆ. ಇಎಸ್‌ಐ, ಪಿಎಫ್, ಆರೋಗ್ಯ ವಿಮೆ ಸೇರಿದಂತೆ ಯಾವುದೇ ಸೌಲಭ್ಯಗಳನ್ನು ನೀಡಲಾಗುತ್ತಿಲ್ಲ ಎಂದು ಸಾಮಾಜಿಕ ಹೋರಾಟಗಾರ ಶೇಖರ್ ಲಾಯಿಲ ಅಧ್ಯಕ್ಷರ ಗಮನಕ್ಕೆ ತಂದರು.

ಸ್ವಚ್ಛತಾ ಕಾರ್ಮಿಕರಿಗೆ ಕಾನೂನುಬದ್ಧ ವೇತನ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಅವರ ನೆಮ್ಮದಿಯ ಬದುಕಿಗೆ ಅವಕಾಶ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.

ಈ ಬಗ್ಗೆ ಮಾತನಾಡಿದ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ (ಆಡಳಿತ) ಗಣೇಶ್ ಶೆಟ್ಟಿ ಹಾಗೂ ಸ್ವಚ್ಛ ಭಾರತ್ ಮಿಷನ್‌ನ ನೋಡೆಲ್ ಅಧಿಕಾರಿ ಪ್ರಿಯಾ ಹೆಗ್ಡೆ, ಗ್ರಾಮ ಪಂಚಾಯತ್‌ಗಳ ಸ್ವಚ್ಛತಾ ಕಾರ್ಯವನ್ನು ಸರ್ಕಾರದ ನಿಯಮಾವಳಿಗಳಂತೆ ಸಂಜೀವಿನಿ ಒಕ್ಕೂಟ ನಿರ್ವಹಿಸುತ್ತಿದ್ದು, ದುಡಿಯುತ್ತಿರುವ ಕಾರ್ಮಿಕರಿಗೆ ಸಂಜೀವಿನಿ ಒಕ್ಕೂಟವೇ ವೇತನ ನೀಡುತ್ತಿದೆ ಎಂದು ತಿಳಿಸಿದರು.

ಮಧ್ಯಪ್ರವೇಶಿಸಿದ ಶೇಖರ್ ಲಾಯಿಲ, ತಾಲೂಕಿನ ಬಹುತೇಕ ಗ್ರಾಮ ಪಂಚಾಯತ್‌ಗಳಲ್ಲಿ, ಅದರಲ್ಲೂ ವೇಣೂರು ಗ್ರಾಮ ಪಂಚಾಯತ್‌ನಲ್ಲಿ ಮೂರು–ನಾಲ್ಕು ತಿಂಗಳ ಹಿಂದೆ ಸ್ವಚ್ಛತಾ ಕಾರ್ಮಿಕರಿಗೆ ₹11,700 ವೇತನ ನೀಡಲಾಗುತ್ತಿತ್ತು. ಇದೀಗ ಸಂಜೀವಿನಿ ಒಕ್ಕೂಟದ ಮೂಲಕ ಅದೇ ಕಾರ್ಮಿಕರಿಗೆ ಕೇವಲ ₹7,000 ವೇತನ ನೀಡಲಾಗುತ್ತಿದೆ. ಬೆಲೆ ಏರಿಕೆಗೆ ಅನುಗುಣವಾಗಿ ವೇತನ ಪರಿಷ್ಕರಣೆ ಮಾಡದಿದ್ದರೆ ಸ್ವಚ್ಛತಾ ಕಾರ್ಮಿಕರು ಜೀವನ ನಡೆಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಆಯೋಗದ ಅಧ್ಯಕ್ಷ ಪಿ. ರಘು, ಸ್ವಚ್ಛತಾ ಕಾರ್ಮಿಕರ ಕಾನೂನು ಹಾಗೂ ಸೇವಾ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರಲು ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುವುದು. ಮುಖ್ಯಮಂತ್ರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ನಗರಾಭಿವೃದ್ಧಿ ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸುವುದಾಗಿ ತಿಳಿಸಿದರು.

ಹಲವು ಅಹವಾಲುಗಳು

13 ವರ್ಷಗಳಿಂದ ದುಡಿಯುತ್ತಿರುವ ತಮ್ಮನ್ನು ಕಡೆಗಣಿಸಿ ಬೇರೆಯವರನ್ನು ಪಂಚಾಯತ್ ಸಿಬ್ಬಂದಿ ಎಂದು ಜಿಲ್ಲಾ ಪಂಚಾಯತ್‌ಗೆ ಕಳುಹಿಸುವ ಮೂಲಕ ಅನ್ಯಾಯ ಮಾಡಲಾಗಿದೆ ಎಂದು ಧರ್ಮಸ್ಥಳ ಪಂಚಾಯತ್‌ನ ದಿನೇಶ್ ಅಳಲು ತೋಡಿಕೊಂಡರು.

ಕುಕ್ಕೇಡಿ ಪಂಚಾಯತ್‌ನ ರೇಣುಕಾ ಮಾತನಾಡಿ, ತಾನೊಬ್ಬಳೇ ಚಾಲಕ ಹಾಗೂ ಲೋಡರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕೆಲಸದ ಒತ್ತಡ ಹೆಚ್ಚಾಗಿದೆ ಎಂದು ತಿಳಿಸಿದರು.

ವೇಣೂರು ಪಂಚಾಯತ್‌ನಲ್ಲಿ ದುಡಿಯುತ್ತಿದ್ದ ಶೀನ ಅವರನ್ನು ಯಾವುದೇ ಕಾರಣ ನೀಡದೆ ಕೆಲಸದಿಂದ ಕೈಬಿಡಲಾಗಿದೆ ಎಂಬ ಅಹವಾಲೂ ಅಧ್ಯಕ್ಷರ ಮುಂದೆ ಕೇಳಿಬಂತು.

ಸ್ವಚ್ಛತಾ ಕಾರ್ಮಿಕರು ಹಾಗೂ ಪೌರ ಕಾರ್ಮಿಕರ ಎಲ್ಲ ಸಮಸ್ಯೆಗಳನ್ನು ಗಂಭೀರವಾಗಿ ಆಲಿಸಿದ ಪಿ. ರಘು, ಸಮಸ್ಯೆಗಳನ್ನು ನಿಯಮಾನುಸಾರ ಶೀಘ್ರವಾಗಿ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ, ತಹಶೀಲ್ದಾರ್ ಎಸ್.ಎನ್. ನರಗುಂದ, ಮುಖ್ಯಾಧಿಕಾರಿ ಕೆ. ರಾಜೇಶ್, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಧನಂಜಯ, ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ (ಆಡಳಿತ) ಗಣೇಶ್ ಶೆಟ್ಟಿ ಹಾಗೂ ಸ್ವಚ್ಛ ಭಾರತ್ ಮಿಷನ್‌ನ ನೋಡೆಲ್ ಅಧಿಕಾರಿ ಪ್ರಿಯಾ ಹೆಗ್ಡೆ ಉಪಸ್ಥಿತರಿದ್ದರು.

error: Content is protected !!