
ಬೆಳ್ತಂಗಡಿ: ತಾಲೂಕಿನ ಕುವೆಟ್ಟು ಹಾಗೂ ಮಡಂತ್ಯಾರು ಗ್ರಾಮ ಪಂಚಾಯತ್‌ಗಳು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ಏಳು ಗ್ರಾಮ ಪಂಚಾಯತ್‌ಗಳಿಗೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ಧಿಡೀರ್ ಭೇಟಿ ನೀಡಿ ವಿವಿಧ ಕಡತಗಳನ್ನು ಪರಿಶೀಲಿಸುತ್ತಿರುವ ಘಟನೆ ಸೆ. 8ರಂದು ನಡೆದಿದೆ.
ಬೆಳ್ತಂಗಡಿ ತಾಲೂಕಿನ ಕುವೆಟ್ಟು ಮತ್ತು ಮಡಂತ್ಯಾರು ಗ್ರಾಮ ಪಂಚಾಯತ್‌ಗಳಿಗೆ ಲೋಕಾಯುಕ್ತ ಅಧಿಕಾರಿಗಳು ಬೆಳಗ್ಗೆ ಸುಮಾರು 10 ಗಂಟೆಗೆ ಭೇಟಿ ನೀಡಿ ಕಚೇರಿಯಲ್ಲಿರುವ ವಿವಿಧ ಕಡತಗಳನ್ನು ಪರಿಶೀಲಿಸುತಿದ್ದಾರೆ. ಅಲ್ಲದೆ, ಪಂಚಾಯತ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದ ಅಗತ್ಯ ಮಾಹಿತಿಗಳನ್ನು ಪಡೆದುಕೊಂಡರು.
ಲೋಕಾಯುಕ್ತ ಕೇಂದ್ರ ಕಚೇರಿಗೆ ಸಾರ್ವಜನಿಕರಿಂದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ, ತನಿಖೆಯ ಮುಂದುವರಿದ ಭಾಗವಾಗಿ ಅಧಿಕಾರಿಗಳು ಗ್ರಾಮ ಪಂಚಾಯತ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ವೇಳೆ ಪಂಚಾಯತ್‌ನ ವಿವಿಧ ದಾಖಲೆಗಳು ಹಾಗೂ ಆಡಳಿತಾತ್ಮಕ ವಿಚಾರಗಳ ಕುರಿತು ಅಧಿಕಾರಿಗಳು ಮಾಹಿತಿ ಕಲೆ ಹಾಕಿದರು.
ಉಡುಪಿ ಜಿಲ್ಲೆಯ ಲೋಕಾಯುಕ್ತ ಇನ್‌ಸ್ಪೆಕ್ಟರ್ ಮಂಜುನಾಥ್ ಶಂಕರಹಳ್ಳಿ ಅವರ ನೇತೃತ್ವದಲ್ಲಿ ರಾಘವೇಂದ್ರ ಸಾಲಿಗ್ರಾಮ, ಆದರ್ಶ್, ಅರುಣ್ ಕುಮಾರ್, ಸೂರಜ್ ಕಾಪು ಸೇರಿದಂತೆ ಇನ್ನಿತರ ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದ್ದಾರೆ. ಪರಿಶೀಲನೆ ಸಂಜೆವರೆಗೂ ಮುಂದುವರಿಯುವ ಸಾಧ್ಯತೆ ಇದೆ.
ಜಿಲ್ಲೆಯ ಏಳು ಗ್ರಾಪಂಗಳಲ್ಲಿ ಪರಿಶೀಲನೆ
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಪೆರ್ಮುದೆ ಗ್ರಾಮ ಪಂಚಾಯತ್, ಬಂಟ್ವಾಳ ತಾಲೂಕಿನ ಪುದು, ಮಾಣಿ, ಗೊಳ್ತಮಜಲು ಹಾಗೂ ಅಡ್ಯಾರ್ ಗ್ರಾಮ ಪಂಚಾಯತ್‌ಗಳು ಮತ್ತು ಬೆಳ್ತಂಗಡಿ ತಾಲೂಕಿನ ಕುವೆಟ್ಟು ಹಾಗೂ ಮಡಂತ್ಯಾರು ಗ್ರಾಮ ಪಂಚಾಯತ್‌ಗಳು ಸೇರಿದಂತೆ ಒಟ್ಟು ಏಳು ಗ್ರಾಮ ಪಂಚಾಯತ್‌ಗಳಿಗೆ ಕಾರವಾರ, ಉಡುಪಿ ಹಾಗೂ ಮಂಗಳೂರು ವಿಭಾಗದ ಲೋಕಾಯುಕ್ತ ಅಧಿಕಾರಿಗಳ ತಂಡಗಳು ಏಕಕಾಲದಲ್ಲಿ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.