
ಬೆಳ್ತಂಗಡಿ : ಮೊಗ್ರು ಗ್ರಾಮದ ಜೈ ಶ್ರೀರಾಮ ಸೇವಾ ಟ್ರಸ್ಟ್ (ರಿ.) ಅಲೆಕ್ಕಿ–ಮುಗೇರಡ್ಕ ಇದರ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ರಾಮ ಶಿಶು ಮಂದಿರದ 5ನೇ ವರ್ಷದ ಶ್ರೀ ಕೃಷ್ಣೋತ್ಸವವು ಸೆ. 6ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ನಡೆಯಿತು.
ಮಕ್ಕಳ ಧಾರ್ಮಿಕ ಹಾಗೂ ಆಧುನಿಕ ಶಿಕ್ಷಣಕ್ಕೆ ಪೂರಕವಾಗಿ, ನವಶಕ್ತಿ ಗುರುವಾಯನಕೆರೆಯ ಕಾಶಿ ಶೆಟ್ಟಿ ಅವರ ಸ್ಮರಣಾರ್ಥ ನಿರ್ಮಿಸಲಾದ “ಕಾಶಿ ಶೆಟ್ಟಿ ವಿದ್ಯಾ ಮಂದಿರ” ಹಾಗೂ ಶಾಸಕ ಹರೀಶ್ ಪೂಂಜ ಅವರ ನೆರವಿನಿಂದ ಮಕ್ಕಳ ಅನ್ನಯಜ್ಞಕ್ಕಾಗಿ ನಿರ್ಮಿಸಲಾದ ಅಡುಗೆ ಕೋಣೆಯ ಉದ್ಘಾಟನಾ ಕಾರ್ಯಕ್ರಮವೂ ಇದೇ ಸಂದರ್ಭದಲ್ಲಿ ನೆರವೇರಿತು.
ಕಟ್ಟಡವನ್ನು ಉದ್ಘಾಟಿಸಿದ ನವಶಕ್ತಿ ಗುರುವಾಯನಕೆರೆಯ ಶಶಿಧರ ಶೆಟ್ಟಿ ಮಾತನಾಡಿ, ಸುಮಾರು ರೂ. 7 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣಗೊಂಡಿದ್ದು, ಶ್ರೀ ರಾಮ ಶಿಶು ಮಂದಿರದಲ್ಲಿ ಮಕ್ಕಳಿಗೆ ನೀಡಲಾಗುತ್ತಿರುವ ಧಾರ್ಮಿಕ ಶಿಕ್ಷಣ ಹಾಗೂ ಉತ್ತಮ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತಮ್ಮ ತಾಯಿ ಕಾಶಿ ಶೆಟ್ಟಿ ಅವರ ಸ್ಮರಣಾರ್ಥ ಈ ಕಾರ್ಯಕ್ಕೆ ನೆರವು ನೀಡಿದ್ದು, ಶ್ರೀ ರಾಮ ಶಿಶು ಮಂದಿರದ ಮುಂದಿನ ಅಭಿವೃದ್ಧಿ ಕಾರ್ಯಗಳಿಗೂ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಮಕ್ಕಳ ಆಟೋಟ ಚಟುವಟಿಕೆಗಳಿಗೆ ಅಗತ್ಯವಿರುವ ಸೂಕ್ತ ವ್ಯವಸ್ಥೆ ಕಲ್ಪಿಸುವುದಾಗಿಯೂ ತಿಳಿಸಿದರು.
ಜೈ ಶ್ರೀರಾಮ ಸೇವಾ ಟ್ರಸ್ಟ್ (ರಿ.) ಅಲೆಕ್ಕಿ–ಮುಗೇರಡ್ಕದ ಗೌರವಾಧ್ಯಕ್ಷ ಉದಯ ಭಟ್ ಕೊಳಬ್ಬೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ಪಣೆಕ್ಕರ, ಮುಗೇರಡ್ಕ ಮೂವರು ದೈವಗಳ ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಗೌಡ ಅಂತರ, ನಿವೃತ್ತ ಸೈನಿಕ ದೇವಪ್ರಸಾದ್ ಗೌಡ ಬರೆಮೇಲು, ಜೈ ಶ್ರೀರಾಮ ಟ್ರಸ್ಟ್ (ರಿ.) ಅಧ್ಯಕ್ಷ ಅಶೋಕ ಬರುಂಗುಡೇಲು ಹಾಗೂ ಮಹಿಳಾ ಮಂಡಲ ಅಧ್ಯಕ್ಷೆ ದೇಜಶ್ರೀ ಕೀಲಾರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಿವೃತ್ತ ಸೈನಿಕ ದೇವಪ್ರಸಾದ್ ಗೌಡ ಬರೆಮೇಲು ಅವರನ್ನು ಸನ್ಮಾನಿಸಲಾಯಿತು.
ಬೆಳಗ್ಗೆ ಗಣಪತಿ ಹೋಮದೊಂದಿಗೆ ಕಾರ್ಯಕ್ರಮ ಆರಂಭಗೊಂಡು, ಶ್ರೀ ಬಾಲಕೃಷ್ಣ ತೊಟ್ಟಿಲ ಸಂಭ್ರಮ, ಶ್ರೀಕೃಷ್ಣ ಹಾಗೂ ಬಾಲಕೃಷ್ಣ ವೇಷಧಾರಣೆ ಮತ್ತು ರಾಧಾಕೃಷ್ಣ ಸ್ಪರ್ಧೆಗಳು ನಡೆದವು. ಮಕ್ಕಳಿಗಾಗಿ ವಿಶೇಷ ಆಕರ್ಷಣೆಯಾಗಿ ಶ್ರೀಕೃಷ್ಣ ಮತ್ತು ರಾಧೆಯರ ವೇಷಭೂಷಣ ಹಾಗೂ ನೃತ್ಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮಕ್ಕಳ, ಪೋಷಕರ ಹಾಗೂ ಸಾರ್ವಜನಿಕರಿಗಾಗಿ ವಿವಿಧ ಮೊಸರು ಕುಡಿಕೆ ಮತ್ತು ಆಟೋಟ ಸ್ಪರ್ಧೆಗಳು ನಡೆಯಿತು.
ದಿವ್ಯಶ್ರೀ ಪದ್ಮುಂಜ ಪ್ರಾರ್ಥನೆ ನೆರವೇರಿಸಿದರು. ಶ್ರೀಮತಿ ಪುಷ್ಪಲತಾ ಮಾತಾಜಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ನವ್ಯಶ್ರೀ ಧನ್ಯವಾದ ಅರ್ಪಿಸಿದರು. ಭರತೇಶ್ ಗೌಡ ಪುಣ್ಕೆದಡಿ ಕಾರ್ಯಕ್ರಮ ನಿರೂಪಿಸಿದರು.
ಟ್ರಸ್ಟಿಗಳು, ಪದಾಧಿಕಾರಿಗಳು, ಸರ್ವ ಸದಸ್ಯರು, ಪೋಷಕರು ಹಾಗೂ ಮಾತಾಜಿಯವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ನೆರೆದಿದ್ದ ಎಲ್ಲರಿಗೂ ಸಿಹಿತಿಂಡಿ ಹಾಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಭಿಮಾನಿಗಳು, ಪೋಷಕರು ಹಾಗೂ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.