ಬೆಂಗಳೂರು: ನಟ ದರ್ಶನ್ ಕೊಲೆ ಆರೋಪದಲ್ಲಿ ಜೈಲು ಸೇರಿದ ಬಳಿಕ ಅನೇಕ ಸ್ಯಾಂಡಲ್ ವುಡ್ ನಟ, ನಟಿಯರು ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳೋದಿಲ್ಲ ಎಂದು ಹೇಳಿದ್ದಾರೆ. ಹಾಗಂತ ಅವರು ಎಲ್ಲೂ ನಟ ದರ್ಶನ್ ಅರೆಸ್ಟ್ ಆದ ಕಾರಣ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ಹೇಳಿಲ್ಲ. ಈ ಮಧ್ಯೆ ಕನ್ನಡ ಚಿತ್ರರಂಗದಲ್ಲಿ ಅಭಿನಯ ಚಕ್ರವರ್ತಿ ಎಂದೇ ಖ್ಯಾತಿಯಾದ ನಟ ಕಿಚ್ಚ ಸುದೀಪ್ ಅವರು ಸೆಪ್ಟೆಂಬರ್ 2 ರಂದು ತಮ್ಮ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಲು ಸಜ್ಜಾಗಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು “ವರ್ಷಗಳುರುಳಿದಂತೆ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಿದೆ. ಅದು ಬಹಳ ಖುಷಿಯ ವಿಷಯ. ಕಳೆದ ವರ್ಷದ ಸೆಲೆಬ್ರೇಶನ್‌ನಲ್ಲಿ ಸ್ವಲ್ಪ ಗೊಂದಲವಾಯ್ತು, ತೊಂದರೆಗಳಾಗಿದ್ದವು. ಪೊಲೀಸರು ಮತ್ತು ಅಕ್ಕಪಕ್ಕದ ಮನೆಯವರು ವಿನಂತಿ ಮಾಡಿದ್ದರು. ನನ್ನಿಂದ ಯಾರಿಗೂ ತೊಂದರೆ ಆಗುವುದು ನನಗಿಷ್ಟವಿಲ್ಲ. ಈ ಬಾರಿ ಜಯನಗರದ ಎಂಇಎಸ್ ಗ್ರೌಂಡ್‌ನಲ್ಲಿ ಸಿಗೋಣ. ಬೆಳಗ್ಗೆ 11.30ರವರೆಗೂ ಅಲ್ಲೇ ಇರಲಿದ್ದೇನೆ” ಎಂದು ತಿಳಿಸಿದರು.
ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕರು ಬದಲಾಗುವ ಬಗ್ಗೆ ಮಾತನಾಡಿರುವ ಅವರು “ಬಿಗ್ ಬಾಸ್ ಬಗ್ಗೆ ನನಗೆ ಕ್ಲ್ಯಾರಿಟಿ ಇಲ್ಲ. ಪ್ರೋಟೋಕಾಲ್ ಇರುತ್ತದೆ. ಅವರದ್ದೇ ಆದ ಒಂದು ಪ್ಲ್ಯಾನಿಂಗ್ ಇರುತ್ತದೆ” ಎಂದು ತಿಳಿಸಿದರು. ಇನ್ನೂ ಡಾಕ್ಟರೇಟ್ ತಿರಸ್ಕರಿಸಿರುವ ಮಾತನಾಡಿದ ಅವರು, “ಡಾಕ್ಟರೇಟ್ ತೆಗೆದುಕೊಳ್ಳುವಂಥ ಕೆಲಸ ನಾನೇನೂ ಮಾಡಿಲ್ಲ. ಸಿನಿಮಾ ಮಾಡಿದ್ದೇನಷ್ಟೇ. ಸಾಧನೆ ಮಾಡಿದ್ದೇನೆಂದನಿಸಿದಾಗ ನಾನೇ ಪತ್ರ ಬರೆದು ಕೇಳಿಕೊಳ್ಳುತ್ತೇನೆ. ನಾನು ಮಾಡಬೇಕಿರುವುದು ಇನ್ನೂ ಬಹಳಷ್ಟಿದೆ. ಆಮೇಲೆ ನೋಡೋಣ” ಎಂದಿದ್ದಾರೆ.
ಮ್ಯಾಕ್ಸ್ ಸಿನಿಮಾ ಆದ್ಮೇಲೆ ಕೆಲ ಸಿನಿಮಾಗಳು ಲೈನ್‌ನಲ್ಲಿವೆ. ಆದ್ರೆ ಯಾವ ಸಿನಿಮಾ ಶುರು ಮಾಡ್ತೇನೆಂಬುದು ಗೊತ್ತಿಲ್ಲ ಎಂದಿರುವ ಅವರು ದರ್ಶನ್ ಬಗ್ಗೆಯೂ ಮಾತನಾಡಿದ್ದಾರೆ.
“ನಟ ದರ್ಶನ್ ಅವರಿಗೆ ಅಭಿಮಾನಿಗಳಿದ್ದಾರೆ. ಕುಟುಂಬವಿದೆ. ನಾವು ಮಾತನಾಡಿ ನೋವು ಕೊಡೋದು ಬೇಡ. ರಾಜಕೀಯವಾಗಿ ಮಾತನಾಡುತ್ತಿದ್ದೇನೆ ಎಂದುಕೊಳ್ಳಬೇಡಿ. ಕಾನೂನನ್ನು ನಂಬಬೇಕಿದೆ. ನಾವು ಮಾಧ್ಯಮಗಳನ್ನು ನೋಡಿ ವಿಷಯ ತಿಳಿದುಕೊಳ್ಳುತ್ತಿದ್ದೇವೆ” ಎಂದು ಹೇಳಿದ್ದಾರೆ