
ಬೆಳ್ತಂಗಡಿ: ತಾಲೂಕಿನ ಉಜಿರೆ, ಲಾಯಿಲ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಆರು ಗ್ರಾಮ ಪಂಚಾಯತ್‌ಗಳಿಗೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ದಿಢೀರ್ ಭೇಟಿ ನೀಡಿ, ವಿವಿಧ ಕಡತಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಬೆಳ್ತಂಗಡಿ ತಾಲೂಕಿನ ಉಜಿರೆ ಹಾಗೂ ಲಾಯಿಲ ಗ್ರಾಮ ಪಂಚಾಯತ್‌ಗಳಿಗೆ ಲೋಕಾಯುಕ್ತ ಅಧಿಕಾರಿಗಳು ಬೆಳಗ್ಗೆ ಸುಮಾರು 10.30ರ ವೇಳೆಗೆ ಭೇಟಿ ನೀಡಿದ್ದು, ಪಂಚಾಯತ್ ಕಚೇರಿಯಲ್ಲಿರುವ ವಿವಿಧ ಕಡತಗಳು ಹಾಗೂ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ, ಪಂಚಾಯತ್ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ.
ಲೋಕಾಯುಕ್ತ ಕೇಂದ್ರ ಕಚೇರಿಗೆ ಸಾರ್ವಜನಿಕರಿಂದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ, ತನಿಖೆಯ ಮುಂದುವರಿದ ಭಾಗವಾಗಿ ಈ ದಿಢೀರ್ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಅಧಿಕಾರಿಗಳು ಗ್ರಾಮ ಪಂಚಾಯತ್‌ಗಳಲ್ಲಿನ ಆಡಳಿತಾತ್ಮಕ ದಾಖಲೆಗಳು, ಕಡತಗಳು ಹಾಗೂ ಸಂಬಂಧಿತ ವಿಚಾರಗಳ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.
ಲಾಯಿಲ ಗ್ರಾಮ ಪಂಚಾಯತ್‌ಗೆ ಉಡುಪಿ ಜಿಲ್ಲೆಯ ಲೋಕಾಯುಕ್ತ ವಿಭಾಗದ ಡಿವೈಎಸ್‌ಪಿ ಹಾಲಮೂರ್ತಿ ಅವರ ನೇತೃತ್ವದಲ್ಲಿ ನಾಗರಾಜ್ ಸನಿಲ್, ಪ್ರಸನ್ನ, ಅಬ್ದುಲ್ ಜಲಾಲ್ ಹಾಗೂ ಸುದೀಪ್ ಅವರನ್ನೊಳಗೊಂಡ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.
ಇದೇ ವೇಳೆ, ಉಜಿರೆ ಗ್ರಾಮ ಪಂಚಾಯತ್‌ಗೆ ಉಡುಪಿ ಜಿಲ್ಲೆಯ ಲೋಕಾಯುಕ್ತ ವಿಭಾಗದ ಇನ್ಸ್‌ಪೆಕ್ಟರ್ ಮಂಜುನಾಥ್ ಶಂಕರಹಳ್ಳಿ ಅವರ ನೇತೃತ್ವದಲ್ಲಿ ರಾಘವೇಂದ್ರ ಸಾಲಿಗ್ರಾಮ, ಆದರ್ಶ್, ಅರುಣ್ ಕುಮಾರ್ ಹಾಗೂ ಸೂರಜ್ ಕಾವು ಅವರನ್ನೊಳಗೊಂಡ ಅಧಿಕಾರಿಗಳ ತಂಡ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ.
ಲೋಕಾಯುಕ್ತ ಅಧಿಕಾರಿಗಳ ಈ ಪರಿಶೀಲನಾ ಕಾರ್ಯಾಚರಣೆ ಸಂಜೆವರೆಗೂ ಮುಂದುವರಿಯುವ ಸಾಧ್ಯತೆ ಇದೆ ಎಂದು ಮಾಹಿತಿ ಲಭ್ಯವಾಗಿದೆ.