ಹುಬ್ಬಳ್ಳಿ ನೇಹಾ ಹಿರೇಮಠ  ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಕೊಲೆ: ಪ್ರೀತಿ ನಿರಾಕರಣೆ ಯುವತಿಯ ಮನೆಗೆ ನುಗ್ಗಿ ಹತ್ಯೆಗೈದ ಯುವಕ:

 

 

 

ಹುಬ್ಬಳ್ಳಿ: ಪ್ರೀತಿ ನಿರಾಕರಿಸಿದ ಕಾರಣಕ್ಕಾಗಿ ಕೋಪಗೊಂಡ ಯುವಕ ಯುವತಿಯ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಹುಬ್ಬಳ್ಳಿಯ ವೀರಾಪುರ ಗುಡಿಓಣಿ ನಿವಾಸಿ ಅಂಜಲಿ ಅಂಬಿಗೇರ (20) ಹತ್ಯೆಯಾದ ಯುವತಿ. ವಿಶ್ವ ಅಲಿಯಾಸ್ ಗಿರೀಶ್ ಸಾವಂತ (21) ಕೊಲೆ ಆರೋಪಿ ಎಂದು ತಿಳಿದುಬಂದಿದೆ.
ಆರೋಪಿ ವಿಶ್ವ ಕಳೆದ ಕೆಲವು ದಿನಗಳಿಂದ ಅಂಜಲಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ. ಆದರೆ ಆಕೆ ಪ್ರೀತಿ ನಿರಾಕರಿಸಿದ್ದಾಳೆ. ಇಂದು ಬೆಳಗ್ಗೆ ಗುಡಿಓಣಿಯಲ್ಲಿನ ಮನೆಯಲ್ಲಿ ಯುವತಿಯು ಮಲಗಿದ್ದ ವೇಳೆಯಲ್ಲೇ ತೆರಳಿದ್ದಾನೆ. ಬಳಿಕ ಮನೆಯವರೊಂದಿಗೆ ಜಗಳವಾಡಿ ಯುವತಿಗೆ ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಪೊಲೀಸ್ ಕಮೀಷನರ್ ಹೇಳಿಕೆ: ”

ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ವೀರಾಪುರ ಓಣಿಯಲ್ಲಿರುವ ಮನೆಗೆ ಬಂದ ಯುವಕ ಚಾಕು ಇರಿದು ಯುವತಿಯ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಯಾವ ವಿಚಾರಕ್ಕೆ ಕೊಲೆಯಾಗಿದೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು. ಪ್ರೀತಿ ವಿಚಾರಕ್ಕೆ ಕೊಲೆಯಾಗಿದೆಯೇ ಎಂಬ ಬಗ್ಗೆಯೂ ಪರಿಶೀಲಿಸಲಾಗುತ್ತದೆ. ಆರೋಪಿಯ ಬಂಧನಕ್ಕೆ ಪೊಲೀಸ್​​ ತಂಡ ರಚಿಸಲಾಗಿದೆ” ಎಂದು ಹುಬ್ಬಳ್ಳಿ-ಧಾರವಾಡ ಪ್ರಭಾರಿ ಪೊಲೀಸ್ ಕಮೀಷನರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ ತಿಳಿಸಿದರು.
ನೇಹಾ ಕೊಲೆ ರೀತಿಯ ಬೆದರಿಕೆ ಹಾಕಿದ್ದ ಯುವಕ!:

ಮೃತ ಯುವತಿಯ ಸಹೋದರಿ ಮಾತನಾಡಿ, ”ಬೆಳಗ್ಗೆ ‌5 ಗಂಟೆಯ ಸುಮಾರಿಗೆ ಮನೆಗೆ ಬಂದ ಯುವಕ ನನ್ನ ಸಹೋದರಿಯನ್ನು ಹೊರಗಡೆ ಕರೆದು, ಜೊತೆಗೆ ಬರುವಂತೆ ಹೇಳಿದ್ದಾನೆ. ಅಜ್ಜಿ ಹಾಗು ತಂಗಿಯನ್ನು ಬಿಟ್ಟು ಬರುವುದಿಲ್ಲ ಎಂದು ಆಕೆ ತಿಳಿಸಿದಳು. ಇದರಿಂದ ಕೋಪಗೊಂಡು ಚಾಕುವಿನಿಂದ ಕತ್ತು, ಎದೆ ಹಾಗೂ ಹೊಟ್ಟೆ ಭಾಗಕ್ಕೆ ಇರಿದು‌ ಕೊಲೆ ಮಾಡಿದ್ದಾನೆ. ಈ ಹಿಂದೆಯೂ ಜೊತೆಗೆ ಮೈಸೂರಿಗೆ ಬರುವಂತೆ ಬೆದರಿಕೆ ಹಾಕಿದ್ದ. ಬರದೇ ಇದ್ದರೆ ನೇಹಾ ಕೊಲೆ ರೀತಿಯಲ್ಲೇ ಆಗಲಿದೆ ಎಂದು ಬೆದರಿಸಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕು” ಎಂದು ಹೇಳಿದರು.

error: Content is protected !!