‘ಮಿಸ್ ಟೀನ್ ಗ್ಲೋಬಲ್ ವರ್ಲ್ಡ್ ಇಂಡಿಯಾ ಓಶಿಯಾನ 2024’ ಕಿರೀಟ ಮಂಗಳೂರಿನ ಈಶಿಕಾ ಶೆಟ್ಟಿ ಮುಡಿಗೆ..!

ಮಂಗಳೂರು: ಗ್ಲೋಬಲ್ ಇಂಡಿಯಾ ಎಂಟರ್‌ಟೈನ್​​ಮೆಂಟ್ ಪ್ರೊಡಕ್ಷನ್ ಮತ್ತು ಆಲಿ ಶರ್ಮಾ ಜಂಟಿಯಾಗಿ ಪ್ರಸ್ತುತಪಡಿಸಿರುವ ಮಿಸ್ಸಸ್/ಮಿಸ್ಟರ್ ಮತ್ತು ಮಿಸ್ ಹಾಗೂ ಮಿಸ್ ಟೀನ್ ಗ್ಲೋಬಲ್ ವರ್ಲ್ಡ್ ಸೌಂದರ್ಯ ಸ್ಪರ್ಧೆಯಲ್ಲಿ ಮಂಗಳೂರಿನ ಈಶಿಕಾ ಶೆಟ್ಟಿ ‘ಮಿಸ್ ಟೀನ್ ಗ್ಲೋಬಲ್ ವರ್ಲ್ಡ್ ಇಂಡಿಯಾ ಓಶಿಯಾನ 2024’ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.


ದೆಹಲಿಯ ಬಾಲಕಟೋರ ಸ್ಟೇಡಿಯಂನಲ್ಲಿ ಫೆಬ್ರವರಿ 27ರಂದು ನಡೆದ ಸ್ಪರ್ಧೆಯಲ್ಲಿ ದೇಶದ ನಾನಾ ರಾಜ್ಯಗಳ ಒಟ್ಟು 65 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು. ಈ ಪೈಕಿ ಈಶಿಕಾ ಶೆಟ್ಟಿ ಪ್ರಥಮ ಪ್ರಶಸ್ತಿ ಪಡೆದಿದ್ದಾರೆ.

2022ರಲ್ಲಿ ಮಂಗಳೂರಿನಲ್ಲಿ ನಡೆದ ಸೌದರ್ಯ ಸ್ಪರ್ಧೆಯಲ್ಲಿ ಮಿಸ್‌ ಟೀನ್ ಮಂಗಳೂರು ಆಗಿಯೂ ಹಾಗೂ 2023ರಲ್ಲಿ ಬೆಂಗಳೂರಿನಲ್ಲಿ ಎನ್.ಬಿ ಮಾಡೆಲಿಂಗ್ ಮ್ಯಾನೇಜ್ಮೆಂಟ್ ನಡೆಸಿರುವ ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಟೀನ್ ಕರ್ನಾಟಕ 2023ರ ಪ್ರಶಸ್ತಿ ಜಯಿಸಿದ್ದರು.

ಈ ಬಗ್ಗೆ ಮಾತನಾಡಿದ ಈಶಿಕಾ ಶೆಟ್ಟಿ, ” ಸ್ಪರ್ಧೆಯಲ್ಲಿ 65 ಮಂದಿ ಸ್ಪರ್ಧಿಗಳಿದ್ದರು. ಕರ್ನಾಟಕದಿಂದ ನಾನೊಬ್ಬಳೇ ಭಾಗಿಯಾಗಿದ್ದೆ. ಹೆಮ್ಮೆ ಅನ್ನಿಸುತ್ತಿದೆ. ನನಗೆ ಕ್ರಿಯೇಟಿವ್ ಪರ್ಸನ್ ಆಗಬೇಕು ಎಂಬ ಆಸಕ್ತಿ ಇತ್ತು. ಶಾಲಾ ದಿನಗಳಿಂದಲೇ ನಾಟಕದಲ್ಲಿ ಆಸಕ್ತಿ ಇತ್ತು. ಮಾಡಲಿಂಗ್ ಬಗ್ಗೆಯೂ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದೆ. 2022ರಲ್ಲಿ ಮಿಸ್ ಟೀನ್ ಮಂಗಳೂರು, 2023ರಲ್ಲಿ ಮಿಸ್ ಟೀನ್ ಕರ್ನಾಟಕ ರನ್ನರ್‌ ಅಪ್ ಆಗಿ ಹೊರಹೊಮ್ಮಿದ್ದೇನೆ. ನನಗೆ ಇನ್ನಷ್ಟು ಸಾಧನೆ ಮಾಡಬೇಕೆಂಬ ಕನಸಿದೆ” ಎಂದು ತಿಳಿಸಿದ್ದಾರೆ.

ಕಾವೂರಿನ ಶಿವನಗರದಲ್ಲಿ ವಾಸವಾಗಿರುವ ಈಶಿಕಾ ಶೆಟ್ಟಿ, ಮಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ಎ.ಎಸ್.ಐ ಆಗಿರುವ ಶರತ್ ಕುಮಾರ್ ಶೆಟ್ಟಿ ಹಾಗೂ ಶ್ವೇತಾ ಶರತ್ ಶೆಟ್ಟಿ ದಂಪತಿಯ ಪ್ರಥಮ ಪುತ್ರಿ. ಶಾರದಾ ವಿದ್ಯಾಲಯ ಮತ್ತು ಬೆಸೆಂಟ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಪ್ರಸಕ್ತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಬಾಲ್ಯದಿಂದಲೂ ಶಿಕ್ಷಣದ ಜೊತೆ ನಟನೆ, ನೃತ್ಯ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು ಈಗಾಗಲೇ ಹಲವು ಸಾಧನೆಗಳನ್ನು ಮಾಡಿದ್ದಾರೆ. ಸಾಧಕಿಯನ್ನು ಹಲವು ಸಂಘ-ಸಂಸ್ಥೆಗಳೂ ಸನ್ಮಾನಿಸಿ ಗೌರವಿಸಿವೆ.

ಬಾಲಿವುಡ್‌ನ ಖ್ಯಾತ ಚಿತ್ರನಟಿ ಶಿಲ್ಪಾ ಶೆಟ್ಟಿ ಮತ್ತು ಖ್ಯಾತ ಮಾಡೆಲ್, ಮೆಂಟರ್ ಜತಿನ್ ಕಿರ್ಬಾತ್ ಅವರು ಅಂತಿಮ ಸುತ್ತಿನ ಜ್ಯೂರಿಯಾಗಿ ಭಾಗವಹಿಸಿದ್ದರು.

 

error: Content is protected !!