ಕಡಬ: ಆ್ಯಸಿಡ್ ದಾಳಿಗೆ ಒಳಗಾದ ಮೂವರು ವಿದ್ಯಾರ್ಥಿನಿಯರನ್ನು ಇಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಮೂವರು ವಿದ್ಯಾರ್ಥಿನಿಯರು ಸದ್ಯ ಎ.ಜೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಡಾ.ನಾಗಲಕ್ಷ್ಮಿ ಚೌಧರಿ ಸಂತ್ರಸ್ತೆಯರಿಗೆ ಹಾಗೂ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಈ ಘಟನೆಯ ಬಗ್ಗೆ ಡಿಸಿ ಕಚೇರಿಯಲ್ಲಿ ಎಲ್ಲ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ಕರೆದಿದ್ದೇನೆ. ಮೂವರು ವಿದ್ಯಾರ್ಥಿನಿಯರೂ ಅಪಾಯದಿಂದ ಪಾರಾಗಿದ್ದಾರೆ.
ಆರೋಪಿ ಆ್ಯಸಿಡ್ ಅನ್ನು ಪ್ಲಾಸ್ಟಿಕ್ ಬಾಟಲ್ನಲ್ಲಿ ತಂದಿದ್ದರಿಂದ ಅದರ ಸುಡುವ ಪ್ರಮಾಣವನ್ನು ಸ್ವಲ್ಪ ಬಾಟಲ್ ಹೀರಿಕೊಂಡಿತ್ತು. ಹೀಗಾಗಿ ವಿದ್ಯಾರ್ಥಿನಿಯರ ಮೇಲೆ ಗಂಭೀರ ಪರಿಣಾಮ ಉಂಟುಮಾಡಿಲ್ಲ. ಸಂತ್ರಸ್ತೆಯರಲ್ಲಿ ಒಬ್ಬಳು 20%, ಮತ್ತೊಬ್ಬಳು 12% ಹಾಗೂ 10% ಗಿಂತ ಕಡಿಮೆ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ವಿದ್ಯಾರ್ಥಿನಿಯರ ನಗು, ಅಳುವನ್ನು ನೋಡಿದೆ. ಅವರ ಮನಸ್ಥೈರ್ಯಕ್ಕೆ ಮೆಚ್ಚಲೇಬೇಕು. ಅವರು ‘ನಾವು ಮತ್ತೆ ಕನ್ನಡ ಪರೀಕ್ಷೆ ಬರೆಯಬೇಕಾ’ ಎಂದು ಕೇಳಿದ್ದಾರೆ. ಇದರ ಬಗ್ಗೆ ಚಿಂತಿಸಬೇಡಿ ಎಂದು ಹೇಳಿದ್ದೇನೆ. ಪರಿಹಾರವಾಗಿ ಸರ್ಕಾರ ತಕ್ಷಣ ವಿದ್ಯಾರ್ಥಿನಿಯರಿಗೆ ತಲಾ 4 ಲಕ್ಷ ರೂಪಾಯಂತೆ ನೀಡಲಿದೆ. ಬಳಿಕ 20 ಲಕ್ಷ ರೂಪಾಯಿ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆಗೆ ನೀಡಲಾಗುವುದು. ಸಂತ್ರಸ್ತೆಯರಿಗೆ ಯಾವುದೇ ಕೊರತೆಯಾಗಬಾರದು. ಈ ಸಂದರ್ಭದಲ್ಲಿ ಅವರ ಚಿಕಿತ್ಸೆಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನೂ ಇಲಾಖೆ ನೋಡಿಕೊಳ್ಳಬೇಕು. ನಾನೂ ಜೊತೆಗಿದ್ದೇನೆ. ಸರ್ಕಾರದಿಂದ ಸಿಗಬೇಕಾದ ಎಲ್ಲಾ ಪರಿಹಾರವನ್ನು ನಾನು ನೋಡಿಕೊಳ್ಳುತ್ತೇನೆ” ಎಂದರು.