ಬೆಳ್ತಂಗಡಿ : ಕೆಲಸ ಮಾಡುತ್ತಿದ್ದ ವೇಳೆ ಮರ ಕತ್ತರಿಸುವ ಯಂತ್ರ ಆಯತಪ್ಪಿ ಕುತ್ತಿಗೆಗೆ ಸಿಲುಕಿ ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಡಿ. 20 ರಂದು ಬೆಳ್ತಂಗಡಿಯ ಸಾವ್ಯದಲ್ಲಿ ನಡೆದಿದೆ.
ಡಿ.19 ರಂದು ಬೆಳಗ್ಗೆ 11:30ಕ್ಕೆ ಸಾವ್ಯ ಗ್ರಾಮದ ಸಾವ್ಯ ಹೊಸಮನೆ ಎಂಬಲ್ಲಿ ಪ್ರಶಾಂತ್ ಪೂಜಾರಿ ಮತ್ತು ಸಹೋದರ ಪ್ರಮೋದ್ ಪೂಜಾರಿ ಕಟ್ಟಿಂಗ್ ಮಿಷಿನ್ ಮೂಲಕ ಮರ ಕಡಿಯುತ್ತಿದ್ದರು. ಈ ವೇಳೆ ಹಿಡಿತ ತಪ್ಪಿ ಪ್ರಶಾಂತ್ ಪೂಜಾರಿ ಕಟ್ಟಿಂಗ್ ಮಿಷಿನ್ ಸಮೇತ ನೆಲಕ್ಕೆ ಬಿದ್ದಿದ್ದಾರೆ. ಚಾಲನಾ ಸ್ಥಿತಿಯಲ್ಲಿದ್ದ ಕಟ್ಟಿಂಗ್ ಮೆಷಿನಿನ ಗರಗಸ ಆಕಸ್ಮಿಕವಾಗಿ ಪ್ರಶಾಂತ್ ಕುತ್ತಿಗೆಯ ಬಳಿ ತಾಗಿ ಗಂಭೀರ ಗಾಯವಾಗಿತ್ತು. ತಕ್ಷಣ ಅವರನ್ನು ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆ.ಎಮ್.ಸಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿತ್ತು. ಆದರೆ ಪ್ರಶಾಂತ್ ಪೂಜಾರಿ (36) ಚಿಕಿತ್ಸೆ ಸ್ಪಂದಿಸದೇ ಡಿ.20ರಂದು ಬೆಳಗ್ಗಿನ ಜಾವ ಸುಮಾರು 2 ಗಂಟೆಗೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಪ್ರಶಾಂತ್ ಸಹೋದರ ಪ್ರಮೋದ್ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.