ಶ್ರೀ ಅಯ್ಯಪ್ಪ ಸೇವಾ ಸಮಿತಿ ನಾವೂರು: 40ನೇ ವರ್ಷದ ಶ್ರೀ ಅಯ್ಯಪ್ಪ ದೀಪೋತ್ಸವ: “ಹರಿವರಾಸನಂ” ಗೀತೆಯ ಶತಾಬ್ಧಿ ಕಾರ್ಯಕ್ರಮ:ಪಂದಳ ರಾಜ ಶ್ರೀ ಶಶಿಕುಮಾರ ವರ್ಮ ಭಾಗಿ:

 

 

ಬೆಳ್ತಂಗಡಿ: ಶ್ರೀ ಅಯ್ಯಪ್ಪ ಸೇವಾ ಸಮಿತಿ ನಾವೂರು, ಇದರ ವತಿಯಿಂದ 40ನೇ ವರ್ಷದ ಶ್ರೀ ಅಯ್ಯಪ್ಪ ದೀಪೋತ್ಸವ ಹಾಗೂ ಹರಿವರಾಸನಂ ಗೀತೆಯ ಶತಾಬ್ಧಿ ಕಾರ್ಯಕ್ರಮ ಡಿ 27 ರಂದು ನಾವೂರು ಶ್ರೀ ಗುರುಕೃಪಾ ಭಜನಾ ಮಂದಿರದ ವಠಾರದಲ್ಲಿ ವಿಜೃಂಭಣೆಯಿಂದ ಜರುಗಲಿದೆ. ಎಂದು ನಾವೂರು ಶ್ರೀ ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಡಾ.ಪ್ರದೀಪ್ ತಿಳಿಸಿದರು.ಅವರು ಬೆಳ್ತಂಗಡಿಯಲ್ಲಿ ಮಂಗಳವಾರ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮವು ಹಲವಾರು ಧಾರ್ಮಿಕ , ಸಾಮಾಜಿಕ, ಶೈಕ್ಷಣಿಕ, ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದೆ. ಪ್ರಸ್ತುತ ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸಾರ್ವಜನಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ಭಗವದ್ಗೀತೆ ಮತ್ತು ವಿಷ್ಣು ಸಹಸ್ರನಾಮ ಪಾಠ ಪಠಣವನ್ನು ನಡೆಸುತ್ತಿದೆ. ಶ್ರೀ ಗೋಪಾಲಕೃಷ್ಣ ದೇವಸ್ಥಾನ ಮತ್ತು ಶ್ರೀ ಗುರುಕೃಪಾ ಭಜನಾ ಮಂದಿರದಲ್ಲಿರುವ ಶ್ರೀ ಅಯ್ಯಪ್ಪ ಸೇವಾ ಸಮಿತಿಗೆ ಅವಿನಾಭವ ಸಂಬಂಧ ಇದೆ.ಈ ಎಲ್ಲಾ ಚಟುವಟಿಕೆಗಳಿಗೆ ಒಂದು ಹಿರಿಮೆ ಗರಿಮೆ ಎನ್ನುವಂತೆ ಸುಮಾರು 40 ವರ್ಷಗಳ ಇತಿಹಾಸ ಇರುವ ಶ್ರೀ ಅಯ್ಯಪ್ಪ ಸೇವಾ ಸಮಿತಿ ಸದ್ದಿಲ್ಲದೆ ತನ್ನ ಕಾರ್ಯಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ಇಲ್ಲಿ ಪ್ರತಿ ವರ್ಷ 50 ಕ್ಕಿಂತಲೂ ಹೆಚ್ಚು ಅಯ್ಯಪ್ಪ ವೃತಧಾರಿಗಳು ಮಾಲೆ ಧರಿಸಿ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡುತಿದ್ದಾರೆ. ಪ್ರಸ್ತುತ 40 ನೇ ವರ್ಷದ ಶ್ರೀ ಅಯ್ಯಪ್ಪ ದೀಪೋತ್ಸವ ಆಚರಿಸುವ ಸುಸಂದರ್ಭದಲ್ಲಿ ಹರಿವರಾಸನಂ ಗೀತೆಯ ಶತಾಬ್ಧಿ ಆಚರಣೆಯನ್ನೂ ಮಾಡುತ್ತಿರುವುದು ನಮ್ಮ ಸುಯೋಗ. ನಾವೂರಿನ ಸೇಸಪ್ಪ ಮೂಲ್ಯ, ಗುರುಸ್ವಾಮಿ ಇವರ 50ನೇ ವರ್ಷದ ಮತ್ತು ಶ್ರೀಧರ ಗುಡಿಗಾರ, ಗುರುಸ್ವಾಮಿಯವರ 18ನೇ ವರ್ಷದ ಶಬರಿಮಲೆ ಯಾತ್ರೆ ಮಾಡುತ್ತಿರುವುದು ನಮಗೆಲ್ಲ ಸಂತೋಷವಾಗುತ್ತಿದೆ. ಮುಖ್ಯವಾಗಿ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ ಪವಿತ್ರವಾದ ಭಕ್ತಿಗೀತೆಯಾದ “ಹರಿವರಾಸನಂ” ಗೀತೆಯ ಶತಾಬ್ಧಿ ಆಚರಣೆಯನ್ನು ನಾವೂರಿನಲ್ಲಿ ಮಾಡುವ ಅವಕಾಶ ನಮ್ಮೆಲ್ಲರ ಪಾಲಿಗೆ ಒದಗಿ ಬಂದ ಹೆಮ್ಮೆಯ ವಿಷಯವಾಗಿದೆ. ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮಕ್ಕೆ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಗೆ ಪಂದಳದ ಅರಸು ಮನೆತನದ ಅರಸರು ಸಪತ್ನೀಕರಾಗಿ ಪ್ರಥಮ ಬಾರಿಗೆ ಆಗಮಿಸುತಿದ್ದಾರೆ. ಇವರನ್ನು ಭವ್ಯ ಮೆರವಣಿಗೆಯೊಂದಿಗೆ ಬರಮಾಡಿಕೊಳ್ಳುವ ಕಾರ್ಯಕ್ರಮ ನಡೆಯಲಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ತ, ಅ, ಸೇ, ಸಮಿತಿ ಅಧ್ಯಕ್ಷ ಶ್ರೀಧರ ಗುಡಿಗಾರ, ಗೌರವಾಧ್ಯಕ್ಷ ಕುಂಜಿರ ಗುರುಸ್ವಾಮಿ, ಪ್ರಧಾನ ಕಾರ್ಯದರ್ಶಿ ಹರೀಶ್ ಕಾರಿಂಜ, ಗಣೇಶ್ ಗೌಡ ನಾವೂರು, ಉಪಸ್ಥಿತರಿದ್ದರು.

 

 

ಕಾರ್ಯಕ್ರಮಗಳು

ಡಿ 27 ರಂದು ಬೆಳಿಗ್ಗೆ ಗಂಟೆ 7.30 ರಿಂದ ಗಣಹೋಮ, 10 ಗಂಟೆಯಿಂದ ಭಜನಾ ಕಾರ್ಯಕ್ರಮ,ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಸಂಜೆ 5.30 ರಿಂದ ಇಂದಬೆಟ್ಟು ಶ್ರೀ ಅರ್ಧನಾರೀಶ್ವರ ದೇವಸ್ಥಾನದಿಂದ ಭಜನೆಯ ಮೂಲಕ ಪಾಲಶಕೊಂಬು ಮೆರವಣಿಗೆ, ರಾತ್ರಿ 8 ರಿಂದ ಶಬರಿಮಲ ಅಯ್ಯಪ್ಪ ಸೇವಾ ಸಮಾಜಂ ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ ಹರಿವರಾಸನಂ ಗೀತೆಯ ಶತಾಬ್ಧಿ ಕಾರ್ಯಕ್ರಮ.

ಧಾರ್ಮಿಕ ಸಭೆ

ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ವಜ್ರದೇಹಿ ಮಠ ಗುರುಪುರ ಇವರ ಆಶೀರ್ವಚನದೊಂದಿಗೆ ಪಂದಳರಾಜ ಶ್ರೀ ಶಶಿಕುಮಾರ ವರ್ಮ ಹಾಗೂ ಅವರ ಧರ್ಮಪತ್ನಿ ಶ್ರೀ ಕ್ಷೇತ್ರ ಶಬರಿಮಲೆ ಇವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಅಧ್ಯಕ್ಷತೆಯನ್ನು ನಾವೂರು ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಡಾ.ಪ್ರದೀಪ್ ಎ.ಇವರು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಬರಿಮಲ ಅಯ್ಯಪ್ಪ ಸೇವಾ ಸಮಾಜಂ ದ.ಕ ಜಿಲ್ಲಾಧ್ಯಕ್ಷ ಶ್ರೀ ಗಣೇಶ್ ಪೊದುವಾಳ್, ಬೆಳ್ತಂಗಡಿ ಶಾಸಕ ಶ್ರೀ ಹರೀಶ್ ಪೂಂಜ,ವಿಧಾನ ಪರಿಷತ್ ಶಾಸಕರುಗಳಾದ ಶ್ರೀ ಹರೀಶ್ ಕುಮಾರ್,ಶ್ರೀ ಪ್ರತಾಪ್ ಸಿಂಹ ನಾಯಕ್, ಶ್ರೀ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ, ಉದ್ಯಮಿಗಳು ಬರೋಡ, ಶ್ರೀ ಪ್ರಕಾಶ್ ಪಿ.ಎಸ್. ಪ್ರಾಂತ ಸಹ ಕಾರ್ಯವಾಹರು, ಶ್ರೀಮತಿ ಸುನಂದ ಅಧ್ಯಕ್ಷರು ಗ್ರಾಮ ಪಂಚಾಯತ್ ನಾವೂರು, ಶ್ರೀ ಹರೀಶ್ ಸಾಲಿಯಾನ್ ಅಧ್ಯಕ್ಷರು ಸಿ.ಎ. ಬ್ಯಾಂಕ್ , ಬಂಗಾಡಿ, ಭಾಗವಹಿಸಲಿದ್ದಾರೆ.ರಾತ್ರಿ 9.30 ರಿಂದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಮುಲ್ಕಿ ಇವರಿಂದ “ಶಿವದೂತೆ ಗುಳಿಗೆ” ತುಳು ಯಕ್ಷಗಾನ ಬಯಲಾಟ ನಡೆಯಲಿದೆ.

ರಾತ್ರಿ 10 ಗಂಟೆಗೆ ಅಗ್ನಿ ಪ್ರತಿಷ್ಠೆ 12 ಗಂಟೆಗೆ ತನ್ನೀರಪ್ಪ ಸೇವೆ, ಡಿ 28 ಪ್ರಾತಃ ಕಾಲ 3 ಗಂಟೆಗೆ ದೇವಿ ದರ್ಶನ, 4 ಗಂಟೆಗೆ ಅಗ್ನಿ ಸೇವೆ, 5 ಗಂಟೆಗೆ ಅದೃಷ್ಟ ಚೀಟಿ ಡ್ರಾ 6 ಗಂಟೆಗೆ ಮಹಾ ಪೂಜೆ ಪ್ರಸಾದ ವಿತರಣೆ ನಡೆಯಲಿದೆ.

error: Content is protected !!