ರಸ್ತೆ ಅಭಿವೃದ್ಧಿಗೆ ದಶಕದ ಮನವಿ: ಸ್ಪಂದನೆ ಇಲ್ಲದೆ ಚುನಾವಣೆ ಬಹಿಷ್ಕಾರದ ಎಚ್ಚರಿಕೆ ಪ್ರಧಾನಿಗೂ ಮೂರು ಬಾರಿ ಪತ್ರ ಬರೆದರೂ ರಸ್ತೆ ಸಮಸ್ಯೆ ಬಗೆಹರಿಯಲಿಲ್ಲ; ಪಟ್ರಮೆಯಲ್ಲಿ ಗ್ರಾಮಸ್ಥರ ಆಕ್ರೋಶ

 

 

ಬೆಳ್ತಂಗಡಿ: ರಸ್ತೆ ಅಭಿವೃದ್ಧಿಗಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಪಟ್ರಮೆ ಗ್ರಾಮದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಮೂಲಭೂತ ರಸ್ತೆ ಸಮಸ್ಯೆ ಬಗೆಹರಿಯದಿದ್ದರೆ ಮುಂದಿನ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿರುವ ಗ್ರಾಮಸ್ಥರು, ಈ ಕುರಿತು ಗ್ರಾಮದಲ್ಲಿ ಬ್ಯಾನರ್ ಅಳವಡಿಸಿದ್ದಾರೆ.

ಪಟ್ರಮೆ ಗ್ರಾಮದ ಸಂಕೇಶ–ಮಣಿಯೇರು–ಪಟ್ರಮೆ ಸಂಪರ್ಕಿಸುವ ಸುಮಾರು 2.5 ಕಿ.ಮೀ. ರಸ್ತೆ ಹಾಗೂ ಪಟ್ರಮೆ–ಬರ್ಕುಳ–ಶೀಮುಳ್ಳು ಸಂಪರ್ಕಿಸುವ ಸುಮಾರು 3 ಕಿ.ಮೀ. ರಸ್ತೆ ಹಲವು ವರ್ಷಗಳಿಂದ ಡಾಮರು ಕಾಣದೆ ಹದಗೆಟ್ಟಿದೆ. ರಸ್ತೆಯುದ್ದಕ್ಕೂ ಕಲ್ಲು, ಹೊಂಡಗಳು ನಿರ್ಮಾಣವಾಗಿದ್ದು, ವಾಹನ ಸಂಚಾರ ಮಾತ್ರವಲ್ಲದೆ ಕಾಲ್ನಡಿಗೆಯಲ್ಲಿಯೂ ಸಂಚರಿಸುವುದು ಕಷ್ಟಕರವಾಗಿದೆ. ಮಳೆಗಾಲದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದ್ದು, ಕೆಲ ದಿನಗಳ ಕಾಲ ವಾಹನ ಸಂಚಾರವೇ ಸ್ಥಗಿತಗೊಳ್ಳುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ದಶಕದಿಂದ ಮನವಿ, ಇನ್ನೂ ಪರಿಹಾರವಿಲ್ಲ

ರಸ್ತೆ ಅಭಿವೃದ್ಧಿಗಾಗಿ ಗ್ರಾಮಸ್ಥರು ಕಳೆದ ಒಂದು ದಶಕಕ್ಕೂ ಹೆಚ್ಚು ಅವಧಿಯಿಂದ ಶಾಸಕರು, ಸಂಸದರು ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದಾರೆ. ಹಲವು ಬಾರಿ ಮನವಿ ಸಲ್ಲಿಸಿದ ಸಂದರ್ಭಗಳಲ್ಲಿ ರಸ್ತೆ ಅಭಿವೃದ್ಧಿಪಡಿಸುವ ಭರವಸೆ ದೊರೆತಿದ್ದರೂ, ಕಾಮಗಾರಿ ಮಾತ್ರ ಆರಂಭವಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪ.

ರಸ್ತೆ ಹದಗೆಟ್ಟಿರುವುದರಿಂದ ಗ್ರಾಮಸ್ಥರ ದೈನಂದಿನ ಬದುಕಿನ ಮೇಲೆಯೇ ಪರಿಣಾಮ ಬೀರಿದೆ. ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಉದ್ಯೋಗಕ್ಕೆ ತೆರಳುವವರು ಹಾಗೂ ವಯೋವೃದ್ಧರು ನಿತ್ಯವೂ ಸಮಸ್ಯೆ ಎದುರಿಸುವಂತಾಗಿದೆ. ಅಗತ್ಯ ವಸ್ತುಗಳನ್ನು ತರಲು ಕೂಡ ಗ್ರಾಮಸ್ಥರು ಪರದಾಡಬೇಕಾಗಿದೆ.

ಪ್ರಧಾನಿಗೆ ಮೂರು ಬಾರಿ ಪತ್ರ

ರಸ್ತೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಪಟ್ರಮೆ ನಿವಾಸಿ ಗಿರೀಶ್ ಎಂ. ಮಣಿಯೇರು ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೂರು ಬಾರಿ ಪತ್ರ ಬರೆದಿದ್ದಾರೆ.

ಮೊದಲ ಬಾರಿ ಪತ್ರ ಬರೆದಾಗ ಪ್ರಧಾನಮಂತ್ರಿ ಕಚೇರಿಯಿಂದ ಸ್ಪಂದನೆ ದೊರೆತಿದ್ದು, ಬಳಿಕ ಸಮಸ್ಯೆಯ ಕುರಿತು ಜಿಲ್ಲಾ ಪಂಚಾಯಿತಿಗೆ ಮಾಹಿತಿ ನೀಡಲಾಗಿತ್ತು ಎನ್ನಲಾಗಿದೆ. ಆದರೆ ಇದಾದ ಬಳಿಕವೂ ರಸ್ತೆ ಅಭಿವೃದ್ಧಿಯಾಗಲಿಲ್ಲ. ಈ ಹಿನ್ನೆಲೆಯಲ್ಲಿ ಗಿರೀಶ್ ಅವರು ಮತ್ತೊಮ್ಮೆ ಪ್ರಧಾನಿಗೆ ಪತ್ರ ಬರೆದರೂ ನಿರೀಕ್ಷಿತ ಫಲ ದೊರೆಯಲಿಲ್ಲ. ಮೂರನೇ ಬಾರಿ ಪತ್ರ ಬರೆದಾಗಲೂ ಸ್ಪಂದನೆ ದೊರೆತಿದ್ದರೂ, ರಸ್ತೆಯ ಸ್ಥಿತಿಯಲ್ಲಿ ಮಾತ್ರ ಬದಲಾವಣೆಯಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

60ಕ್ಕೂ ಅಧಿಕ ಕುಟುಂಬಗಳಿಗೆ ಸಂಕಷ್ಟ

ಈ ರಸ್ತೆಗಳನ್ನು ಅವಲಂಬಿಸಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸುಮಾರು 20ಕ್ಕೂ ಹೆಚ್ಚು ಕುಟುಂಬಗಳು ಸೇರಿದಂತೆ 60ಕ್ಕೂ ಅಧಿಕ ಕುಟುಂಬಗಳು ರಸ್ತೆ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿವೆ.

ಮಳೆಗಾಲದಲ್ಲಿ ರಸ್ತೆಯ ಹೊಂಡಗಳಲ್ಲಿ ನೀರು ತುಂಬಿಕೊಳ್ಳುವುದರಿಂದ ವಾಹನ ಸಂಚಾರ ಮತ್ತಷ್ಟು ಕಷ್ಟಕರವಾಗುತ್ತದೆ. ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯುವುದೂ ಗ್ರಾಮಸ್ಥರಿಗೆ ಸವಾಲಾಗಿದೆ. ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಸಂದರ್ಭದಲ್ಲಿಯೂ ಸಮಸ್ಯೆ ಎದುರಾಗುತ್ತಿದೆ. ಮಳೆ ಹೆಚ್ಚಾದ ದಿನಗಳಲ್ಲಿ ವಾಹನಗಳು ಗ್ರಾಮಕ್ಕೆ ಬರಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ನಿವಾಸಿಗಳು ತಿಳಿಸಿದ್ದಾರೆ.

ಬೇಸಿಗೆಯಲ್ಲಿಯೂ ರಸ್ತೆ ಸಂಪೂರ್ಣ ಸುಗಮವಾಗಿರುವುದಿಲ್ಲ. ಹೊಂಡ-ಗುಂಡಿಗಳ ನಡುವೆ ವಾಹನ ಚಲಾಯಿಸುವುದರಿಂದ ವಾಹನಗಳಿಗೂ ಹಾನಿಯಾಗುತ್ತಿದೆ. ದ್ವಿಚಕ್ರ ವಾಹನ ಸವಾರರು ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಬೆಂಗಳೂರಿಗೆ ತೆರಳಿ ಸಚಿವರಿಗೂ ಮನವಿ

ರಸ್ತೆ ಸಮಸ್ಯೆ ಕುರಿತು ಸ್ಥಳೀಯ ಮಟ್ಟದಲ್ಲಿ ಹಲವು ಬಾರಿ ಮನವಿ ಸಲ್ಲಿಸಿದ ಬಳಿಕವೂ ಪರಿಹಾರ ದೊರೆಯದ ಹಿನ್ನೆಲೆಯಲ್ಲಿ ಕೆಲ ಗ್ರಾಮಸ್ಥರು ಬೆಂಗಳೂರಿಗೆ ತೆರಳಿ ಸಂಬಂಧಪಟ್ಟ ಸಚಿವರಿಗೂ ಮನವಿ ಸಲ್ಲಿಸಿದ್ದರು. ಶಾಸಕರು ಹಾಗೂ ಸಂಸದರಿಗೆ ಪತ್ರಗಳ ಮೂಲಕವೂ ಸಮಸ್ಯೆ ತಿಳಿಸಲಾಗಿತ್ತು. ಆದರೆ ಭರವಸೆ ಹಾಗೂ ಸ್ಪಂದನೆ ಹೊರತುಪಡಿಸಿ ರಸ್ತೆ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿಲ್ಲ ಎಂಬುದು ಗ್ರಾಮಸ್ಥರ ಅಸಮಾಧಾನ.

‘ಆಶ್ವಾಸನೆ ನಂಬುವ ಸ್ಥಿತಿಯಲ್ಲಿ ನಾವಿಲ್ಲ’

ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದರೂ ರಸ್ತೆ ಅಭಿವೃದ್ಧಿಯಾಗದ ಹಿನ್ನೆಲೆಯಲ್ಲಿ ಇನ್ನು ಮುಂದೆ ಕೇವಲ ಭರವಸೆಗಳನ್ನು ನಂಬುವುದಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ. ಈ ಹಿಂದೆ ಮತದಾನ ಬಹಿಷ್ಕಾರಕ್ಕೆ ಮುಂದಾದಾಗ ರಾಜಕೀಯ ಪಕ್ಷಗಳ ಮುಖಂಡರು ಗ್ರಾಮಸ್ಥರನ್ನು ಮನವೊಲಿಸಿದ್ದರು. ಆದರೆ ಈ ಬಾರಿ ರಸ್ತೆ ಅಭಿವೃದ್ಧಿ ಆಗುವವರೆಗೆ ಚುನಾವಣಾ ಬಹಿಷ್ಕಾರದ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ನಿವಾಸಿಗಳು ತಿಳಿಸಿದ್ದಾರೆ.

“ನಮ್ಮ ಸಹನೆಯೂ ಮುಗಿದಿದೆ. ಜನಪ್ರತಿನಿಧಿಗಳ ಆಶ್ವಾಸನೆಗಳನ್ನು ನಂಬುವ ಸ್ಥಿತಿಯಲ್ಲಿ ನಾವಿಲ್ಲ. ಈ ಹಿಂದೆ ಮತದಾನ ಬಹಿಷ್ಕಾರಕ್ಕೆ ಮುಂದಾದಾಗ ರಾಜಕೀಯ ಪಕ್ಷದವರು ಮನವೊಲಿಸಿದ್ದರು. ಆದರೆ ಈ ಬಾರಿ ಮತದಾನ ಬಹಿಷ್ಕಾರ ಮಾಡುವ ನಿರ್ಧಾರ ಕೈಗೊಂಡು ಬ್ಯಾನರ್ ಅಳವಡಿಸಿದ್ದೇವೆ. ರಸ್ತೆ ಸರಿಯಾಗುವವರೆಗೂ ಬ್ಯಾನರ್ ತೆಗೆಯುವುದಿಲ್ಲ.” ಎಂದು ಗಿರೀಶ್ ಎಂ ಮಣಿಯೇರು ಅಸಾಮಾಧಾನ ಹೊರಹಾಕಿದ್ದಾರೆ.

ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಂಡು ಗ್ರಾಮಸ್ಥರ ಹಲವು ವರ್ಷಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಸೇರಿದಂತೆ ಮತ್ತಷ್ಟು ಹೋರಾಟ ನಡೆಸುವ ಅನಿವಾರ್ಯತೆ ಎದುರಾಗಲಿದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

error: Content is protected !!