ಡಿಸಿ ಮನ್ನಾ ಭೂಮಿ ಇತ್ಯರ್ಥಕ್ಕೆ ಸರ್ಕಾರದ ಭರವಸೆ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿ ಅಗತ್ಯ ಆದೇಶ ಹೊರಡಿಸುವುದಾಗಿ ಕಂದಾಯ ಸಚಿವರ ಭರವಸೆ:

 

 

 

 

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಶಕಗಳಿಂದ ಬಾಕಿ ಉಳಿದಿರುವ ಡಿಸಿ ಮನ್ನಾ ಭೂಮಿ ಸಮಸ್ಯೆಯನ್ನು ಶೀಘ್ರವಾಗಿ ಇತ್ಯರ್ಥಪಡಿಸುವಂತೆ ದಲಿತ ಸಂಘಟನೆಗಳು ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರದ ಮಟ್ಟದಲ್ಲಿ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿಷಯವನ್ನು ಮಂಡಿಸಿ, ಅಗತ್ಯ ಅನುಮೋದನೆ ಪಡೆದು ಡಿಸಿ ಮನ್ನಾ ಭೂಮಿ ಮಂಜೂರಾತಿಗೆ ಸರ್ಕಾರದ ಆದೇಶ ಹೊರಡಿಸುವುದಾಗಿ ಕಂದಾಯ ಸಚಿವರು ಭರವಸೆ ನೀಡಿದ್ದಾರೆ ಎಂದು ಜಿಲ್ಲಾ ದಲಿತ ಸಂಘಟನೆಗಳ ಜಿಲ್ಲಾ ಸಮನ್ವಯ ಸಮಿತಿ ಉಪಾಧ್ಯಕ್ಷ ಬಿ.ಕೆ. ವಸಂತ ಹೇಳಿದರು.ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 35 ವರ್ಷಗಳಿಂದ ಭೂರಹಿತ ಪರಿಶಿಷ್ಟ ಜಾತಿ ಸಮುದಾಯದವರಿಗೆ ಡಿಸಿ ಮನ್ನಾ ಭೂಮಿ ಮಂಜೂರು ಮಾಡಬೇಕೆಂಬ ಬೇಡಿಕೆ ಮುಂದಿಟ್ಟುಕೊಂಡು ವಿವಿಧ ದಲಿತ ಸಂಘಟನೆಗಳು ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಧರಣಿ, ಪ್ರತಿಭಟನೆ ಸೇರಿದಂತೆ ಹಲವು ಹಂತದ ಹೋರಾಟಗಳನ್ನು ನಡೆಸುತ್ತಿವೆ.

ಈ ಹಿನ್ನೆಲೆಯಲ್ಲಿ 2017ರಲ್ಲಿ ಜಿಲ್ಲೆಯ ವಿವಿಧ ದಲಿತಪರ ಸಂಘಟನೆಗಳು ತಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ‘ದಲಿತ ಸಂಘಟನೆಗಳ ಸಮನ್ವಯ ಸಮಿತಿ’ ರಚಿಸಿಕೊಂಡು, ಜಿಲ್ಲಾ ಕೇಂದ್ರದಲ್ಲಿ ‘ನಮ್ಮ ಭೂಮಿ ನಮ್ಮ ಹಕ್ಕು’ ಎಂಬ ಘೋಷಣೆಯೊಂದಿಗೆ ಬೃಹತ್ ಭೂ ಹೋರಾಟ ನಡೆಸಿದ್ದವು.

2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಡಿಸಿ ಮನ್ನಾ ಭೂಮಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕವೂ ಸಮಸ್ಯೆ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಹಾಗೂ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಪದಾಧಿಕಾರಿಗಳು ಸಚಿವರು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ವಿಷಯವನ್ನು ತರಲಾಗಿತ್ತು.

ಈ ಕುರಿತು ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸಮಸ್ಯೆ ಇತ್ಯರ್ಥಪಡಿಸುವ ಭರವಸೆ ದೊರೆತಿದ್ದರೂ, ತಾಂತ್ರಿಕ ಹಾಗೂ ಕಾನೂನು ಸಂಬಂಧಿತ ಕಾರಣಗಳಿಂದ ವಿಷಯ ಬಾಕಿ ಉಳಿದಿತ್ತು .

ಈ ಹಿನ್ನೆಲೆಯಲ್ಲಿ ಸಮನ್ವಯ ಸಮಿತಿಯ ಮುಖಂಡರು ಮಾಜಿ ಸಚಿವ ಬಿ. ರಮಾನಾಥ ರೈ, ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್, ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಅವರನ್ನು ಭೇಟಿಯಾಗಿ ಸಮಸ್ಯೆಯ ಕುರಿತು ಮನವರಿಕೆ ಮಾಡಿದ ವೇಳೆ ಈ ನಾಯಕರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೂ ವಿಷಯವನ್ನು ತಂದು, ಸಮಸ್ಯೆ ಇತ್ಯರ್ಥಪಡಿಸುವಂತೆ ಮನವಿ ಮಾಡಿದ್ದರು..

ಅದರ ಮುಂದುವರಿದ ಭಾಗವಾಗಿ ಕಂದಾಯ ಸಚಿವರು ಹಾಗೂ ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ್ ಅವರಿಗೆ ಡಿಸಿ ಮನ್ನಾ ಭೂಮಿ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವಂತೆ ಪತ್ರದ ಮೂಲಕ ಮನವಿ ಮಾಡಲಾಗಿತ್ತು. ಈ ಮನವಿಯ ಹಿನ್ನೆಲೆಯಲ್ಲಿ ಅಕ್ಟೋಬರ್ 1ರಂದು ದಕ್ಷಿಣ ಕನ್ನಡ ಜಿಲ್ಲೆಯ ಪರಿಶಿಷ್ಟ ಸಮುದಾಯದ ಮುಖಂಡರನ್ನು ಬೆಂಗಳೂರಿನ ವಿಧಾನಸೌಧದಲ್ಲಿರುವ ಕಚೇರಿಗೆ ಆಹ್ವಾನಿಸಿ, ಡಿಸಿ ಮನ್ನಾ ಭೂಮಿಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ಕಂದಾಯ ಸಚಿವರು ಪಡೆದುಕೊಂಡು ಕಂದಾಯ ಇಲಾಖೆಯ ಉನ್ನತ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮುಖಂಡರೊಂದಿಗೆ ಸಭೆ ನಡೆಸಿದಾಗ ಡಿಸಿ ಮನ್ನಾ ಭೂಮಿ ಮಂಜೂರಾತಿಗೆ ಸಂಬಂಧಿಸಿದ ಕೆಲವು ಕಾನೂನು ಹಾಗೂ ತಾಂತ್ರಿಕ ತೊಡಕುಗಳಿರುವುದು ಸಚಿವರ ಗಮನಕ್ಕೆ ಬಂದಿತು. ಈ ತೊಡಕುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿಷಯವನ್ನು ಮಂಡಿಸಿ, ಅಗತ್ಯ ಸಚಿವ ಸಂಪುಟ ಅನುಮೋದನೆ ಪಡೆದು ಡಿಸಿ ಮನ್ನಾ ಭೂಮಿ ಮಂಜೂರಾತಿಗೆ ಸರ್ಕಾರದ ಆದೇಶ ಹೊರಡಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ

ಅಲ್ಲದೆ, ಮಂಗಳೂರಿಗೆ ಖುದ್ದಾಗಿ ಆಗಮಿಸಿ ಭೂರಹಿತ ಪರಿಶಿಷ್ಟ ಫಲಾನುಭವಿಗಳಿಗೆ ಡಿಸಿ ಮನ್ನಾ ಭೂಮಿಯ ಹಕ್ಕುಪತ್ರಗಳನ್ನು ವಿತರಿಸುವುದಾಗಿಯೂ ಸಚಿವರು ಭರವಸೆ ನೀಡಿದ್ದಾರೆ. ಇದರಿಂದ ಹಲವು ವರ್ಷಗಳಿಂದ ಭೂಮಿಗಾಗಿ ಕಾಯುತ್ತಿರುವ ಭೂರಹಿತ ಪರಿಶಿಷ್ಟ ಕುಟುಂಬಗಳಲ್ಲಿ ಆಶಾಭಾವನೆ ಮೂಡಿದೆ .

ಅಕ್ಟೋಬರ್ 3ರಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಫರೀದ್ ಅವರು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಸಭೆ ನಡೆಸಿ ಡಿಸಿ ಮನ್ನಾ ಭೂಮಿ ಸಮಸ್ಯೆಯ ಕುರಿತು ಚರ್ಚಿಸಿದರು.

ಮಂಗಳೂರು ಸಚಿವ ಸಂಪುಟ ಸಭೆಯಲ್ಲಿ ಸಮಸ್ಯೆ ಇತ್ಯರ್ಥವಾಗದಿರುವುದಕ್ಕೆ ಕೆಲವು ತಾಂತ್ರಿಕ ಸಮಸ್ಯೆಗಳು ಕಾರಣವಾಗಿವೆ ಎಂದು ಅವರು ಸಭೆಯಲ್ಲಿ ವಿವರಿಸಿದರು. ಈ ಕುರಿತು ಕಂದಾಯ ಸಚಿವರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಡಿಸಿ ಮನ್ನಾ ಭೂಮಿ ಮಂಜೂರಾತಿಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ದೊರೆತಿದೆ ಎಂದು ಅವರು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಪರಿಶಿಷ್ಟ ಸಮುದಾಯದ ಬಹುದಿನಗಳ ಬೇಡಿಕೆಯಾಗಿರುವ ಡಿಸಿ ಮನ್ನಾ ಭೂಮಿ ಸಮಸ್ಯೆ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಸಕಾರಾತ್ಮಕ ಸ್ಪಂದನೆ ದೊರಕಲು ಕಾರಣರಾದ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ .
ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್, ಮಾಜಿ ಸಚಿವ ಬಿ. ರಮಾನಾಥ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಫರೀದ್ ಅವರಿಗೆ ಸಮಿತಿ ಪರವಾಗಿ ಅಭಿನಂದನೆ ಸಲ್ಲಿಸಿದರು.ಗ್ರಾಮೀಣ ಕಾಂಗ್ರೆಸ್ ಎಸ್.ಸಿ.ಘಟಕದ ಅಧ್ಯಕ್ಷ ನೇಮಿರಾಜ್ , ಎಸ್.ಸಿ‌ ಘಟಕದ ಕಾರ್ಯದರ್ಶಿ ಪ್ರಭಾಕರ ಶಾಂತಿಕೋಡಿ, ಕೆ.ಡಿ.ಪಿ ಸದಸ್ಯ ಎಸ್. ಬೇಬಿ ಸುವರ್ಣ ಜಿಲ್ಲಾ ದಲಿತ ಸಂಘಟನೆಗಳ ಸಂಚಾಲಕ ಚೆನ್ನಕೇಶವ ಪ್ರತಿಕ್ರಿಯಿಸಿ

ದಶಕಗಳಿಂದ ಬಾಕಿ ಉಳಿದಿರುವ ಡಿಸಿ ಮನ್ನಾ ಭೂಮಿ ಸಮಸ್ಯೆಗೆ ಸಚಿವ ಸಂಪುಟದ ಅನುಮೋದನೆ ಪಡೆದು ಶೀಘ್ರದಲ್ಲಿ ಅಂತಿಮ ಪರಿಹಾರ ಕಲ್ಪಿಸಬೇಕು. ಅರ್ಹ ಭೂರಹಿತ ಪರಿಶಿಷ್ಟ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂದು ಒತ್ತಾಯಿಸಿದರು..ಮಾಜಿ ಜಿ.ಪಂ ಸದಸ್ಯರೊಬ್ಬರ ರಾಜೀನಾಮೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ  ಉತ್ತರಿಸಿದ ಮುಖಂಡರು ಯಾವುದೇ ಸಮಸ್ಯೆಗಳಿಗೆ ರಾಜೀನಾಮೆ ಪರಿಹಾರವಲ್ಲ ಎಂದರು.ಪತ್ರಿಕಾಗೋಷ್ಠಿಯಲ್ಲಿ

ಜಿಲ್ಲಾ ಕೆಪಿಸಿಸಿ ಮಾಧ್ಯಮ ವಕ್ತಾರ ಜಗನ್ನಾಥ ಲಾಯಿಲ, ಸಮನ್ವಯ ಸಮಿತಿ ಸದಸ್ಯ ರಮೇಶ್ ಆರ್, ಅಕ್ರಮ-ಸಕ್ರಮ ನಾಮನಿರ್ದೇಶಿತ ಸದಸ್ಯ ಶ್ರೀಧರ ಕಳೆಂಜ, ಎಸ್.ಸಿ ಘಟಕದ ಸದಸ್ಯರಾದ ನಾರಾಯಣ ಪುದುವೆಟ್ಟು, ಮಾಧವ ಶಿಶಿಲ, ಜ, ನಾಮನಿರ್ದೇಶಿತ ಆರೋಗ್ಯ ರಕ್ಷಾ ಸಮಿತಿ ಸದಸ್ಯ ವೆಂಕಣ್ಣ ಕೊಯ್ಯೂರು, ಕಾಂಗ್ರೆಸ್ ಎಸ್.ಸಿ ಘಟಕದ ಸದಸ್ಯ ಶ್ರೀನಿವಾಸ್ ಉಪಸ್ಥಿತರಿದ್ದರು.

error: Content is protected !!