
ಬೆಳ್ತಂಗಡಿ: ಮನುಷ್ಯ ಜನ್ಮ ಶ್ರೇಷ್ಠವಾಗಿದ್ದು, ದುಶ್ಚಟಗಳಿಂದ ದೂರವಿದ್ದು ಸತ್ಕಾರ್ಯಗಳನ್ನು ಮಾಡುವ ಮೂಲಕ ಜೀವನವನ್ನು ಪಾವನಗೊಳಿಸಬೇಕು. ಮನಸ್ಸು ಹಾಗೂ ಪಂಚೇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಸಾರ್ಥಕ ಜೀವನ ನಡೆಸಬೇಕು ಎಂದು ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ಶುಕ್ರವಾರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಂಟಿ ಆಶ್ರಯದಲ್ಲಿ ನಡೆದ ಗಾಂಧಿಸ್ಮೃತಿ ಮತ್ತು ನವಜೀವನ ಸಾಧನಾ ಸಮಾವೇಶದಲ್ಲಿ ಅವರು ಆಶೀರ್ವಚನ ನೀಡಿದರು.
ಋಷಿ-ಮುನಿಗಳು, ವೇದಗಳು, ಪುರಾಣಗಳು ಹಾಗೂ ಉಪನಿಷತ್ತುಗಳು ಸಾರ್ಥಕ ಜೀವನಕ್ಕೆ ಅಗತ್ಯವಾದ ಹಲವು ಮಾರ್ಗದರ್ಶನಗಳನ್ನು ನೀಡಿವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮಾನವ ಜನ್ಮವನ್ನು ಸಾರ್ಥಕಗೊಳಿಸಬೇಕು ಎಂದರು.
ಮದ್ಯಪಾನ ಸಮಾಜಕ್ಕೆ ದೊಡ್ಡ ಕಂಟಕವಾಗಿದ್ದು, ಕುಟುಂಬದ ಒಬ್ಬ ವ್ಯಕ್ತಿ ವ್ಯಸನಮುಕ್ತನಾದರೂ ಇಡೀ ಕುಟುಂಬದ ಬದುಕಿನಲ್ಲಿ ಸುಧಾರಣೆ ಕಂಡುಬರುತ್ತದೆ. ಇದರಿಂದ ಸಮಾಜವೂ ಪ್ರಗತಿಯತ್ತ ಸಾಗುತ್ತದೆ. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ರಾಜ್ಯದಾದ್ಯಂತ ನಡೆಯುತ್ತಿರುವ ಮದ್ಯವರ್ಜನ ಶಿಬಿರಗಳಿಂದ ಅನೇಕರು ವ್ಯಸನಮುಕ್ತರಾಗಿ ಸುಖ, ಶಾಂತಿ ಹಾಗೂ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.
ನವಜೀವನ ಸಾಧನಾ ಸಮಾವೇಶವನ್ನು ಉದ್ಘಾಟಿಸಿದ ಹೇಮಾವತಿ ವೀ. ಹೆಗ್ಗಡೆ ಮಾತನಾಡಿ, ವ್ಯಸನಮುಕ್ತರಾದವರು ದೃಢಸಂಕಲ್ಪದಿಂದ ಸಾರ್ಥಕ ಜೀವನ ನಡೆಸಬೇಕು. ನುಡಿದಂತೆ ನಡೆದಾಗ ಮಾತಿಗೆ ಬೆಲೆ ಬರುತ್ತದೆ. ಜನಜಾಗೃತಿ ವೇದಿಕೆಯ ಕಾರ್ಯಕರ್ತರು ಹಾಗೂ ನವಜೀವನ ಸದಸ್ಯರ ನಿಷ್ಠೆ ಮತ್ತು ಬದ್ಧತೆಯಿಂದ ವೇದಿಕೆಯ ಚಟುವಟಿಕೆಗಳು ಯಶಸ್ವಿಯಾಗಿವೆ ಎಂದರು. ವ್ಯಸನಮುಕ್ತರು ನಂದಾದೀಪದಂತೆ ಬೆಳಗಿ ಇತರರ ಬದುಕಿಗೂ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ವ್ಯಸನಮುಕ್ತಿಯಿಂದ ಆರ್ಥಿಕ ಬಡತನ ಹಾಗೂ ಹೃದಯದ ಬಡತನ ನಿವಾರಣೆಯಾಗಿ ಆರ್ಥಿಕ ಸ್ವಾವಲಂಬನೆಯೊಂದಿಗೆ ಸುಖ, ಶಾಂತಿ ಮತ್ತು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ. ಇಂತಹ ಸುಧಾರಣಾ ಕಾರ್ಯಕ್ರಮಗಳು ವಿಶಿಷ್ಟವಾಗಿದ್ದು, ಗಾಂಧೀಜಿಯವರಿಗೆ ಅರ್ಪಿಸುವ ಕೊಡುಗೆಯಾಗಿದೆ ಎಂದರು.
ಮದ್ಯವ್ಯಸನ ಮುಕ್ತರ ಪರವಾಗಿ ಕೇಶವ ಚಾರ್ಮಾಡಿ ಹಾಗೂ ಸುಕನ್ಯಾ ಅನಿಸಿಕೆ ವ್ಯಕ್ತಪಡಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಇಒ ಅನಿಲ್ ಕುಮಾರ್ ಆಶಯ ಭಾಷಣ ಮಾಡಿದರು.ಶ್ರೀಧಾಮ ಮಾಣಿಲದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ,ಶಾಸಕ ಹರೀಶ್ ಪೂಂಜ, ಮಾಜಿ ಎಂಎಲ್‌ಸಿ ಕೆ. ಪ್ರತಾಪಸಿಂಹ ನಾಯಕ್, ನಟರಾಜ ಬಾದಾಮಿ ಹಾಗೂ ಮಂಗಳೂರಿನ ಪ್ರಕಾಶ್ ಕಾರಂತ್ ಶುಭಾಶಂಸನೆ ಮಾಡಿದರು.ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ವಸಂತ ಸಾಲಿಯಾನ್, ಸಮಾಜ ಸೇವಕ ಆರ್.ಬಿ. ಹೆಬ್ಬಳ್ಳಿ, ಶ್ರೀ ಕ್ಷೇ ಧ. ಮ ಗ್ರಾ ಯೋ ಬಿ.ಸಿ.ಟ್ರಸ್ಟ್ ಮುಖ್ಯ ಹಣಕಾಸು ಅಧಿಕಾರಿ ಶಾಂತಾರಾಮ ಪೈ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯ ಕಾರ್ಯದರ್ಶಿ ವಿವೇಕ್ ವಿ. ಪಾಯ್ಸ್, ಗಿರೀಶ್ ಕೆ.ಎಸ್. ವಾಸುದೇವ ನಾಯಕ್, ಸುಖಲತಾ ಶೆಟ್ಟಿ, ರಾಜರಾಮ ಶೆಟ್ಟಿ ಉಪಸ್ಥಿತರಿದ್ದರು.
ಉಡುಪಿ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಸ್ವಾಗತಿಸಿದರು. ಜಿಲ್ಲಾ ನಿರ್ದೇಶಕ ದಿನೇಶ್ ಡಿ. ಧನ್ಯವಾದ ಸಲ್ಲಿಸಿದರು. ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.