
ಬೆಳ್ತಂಗಡಿ: SIR ಪ್ರಕ್ರಿಯೆಯ ಸಂದರ್ಭದಲ್ಲಿ ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಂಜಯನಗರ, ವಾರ್ಡ್ ಸಂಖ್ಯೆ–122ಕ್ಕೆ ಸಂಬಂಧಿಸಿದಂತೆ ಏಳು ಮಂದಿ ಮತದಾರರ ಅನುಮತಿಯಿಲ್ಲದೆ ಅವರ ಹೆಸರಿನಲ್ಲಿ Form-7 ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಬೆಳ್ತಂಗಡಿ ಆಗ್ರಹಿಸಿದೆ.
ಈ ಕುರಿತು SDPI ಬೆಳ್ತಂಗಡಿ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ ಅವರು ಬೆಳ್ತಂಗಡಿ ತಹಸೀಲ್ದಾರರಿಗೆ ಹಾಗೂ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಖಾದ್ರಿ ಬಿ, ಫೆಲಿಕ್ಸ್ ಡಿಸೋಜ, ರೋಷನ್, ಡಲ್ವಿನ್ ಬಿಜು, ಅಬ್ದುಲ್ ಮಜೀದ್ ಬಂಗಾಡಿ, ಹಂಝ ಇರ್ಫಾನ್ ಬಿ ಹಾಗೂ ನಿಜಾಮುದ್ದಿನ್ ಅವರ ಹೆಸರಿನಲ್ಲಿ Form-7 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆದರೆ, ಮೇಲ್ಕಂಡ ಮತದಾರರು ತಾವು ಯಾವುದೇ Form-7 ಅರ್ಜಿ ಅಥವಾ ಆಕ್ಷೇಪಣೆಯನ್ನು ಸಲ್ಲಿಸಿಲ್ಲ ಎಂದು ತಿಳಿಸಿರುವುದಾಗಿ SDPI ಹೇಳಿದೆ. ಹೀಗಾಗಿ, ಅವರ ಹೆಸರು, ವೈಯಕ್ತಿಕ ವಿವರಗಳು, ಸಹಿ ಅಥವಾ ಇತರ ದಾಖಲೆಗಳನ್ನು ಅವರ ಅನುಮತಿಯಿಲ್ಲದೆ ಬಳಸಿಕೊಂಡು ಅರ್ಜಿ ಸಲ್ಲಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
Form-7 ಅರ್ಜಿಗಳ ಮೂಲ ದಾಖಲೆಗಳನ್ನು ಪರಿಶೀಲಿಸಿ, ಅರ್ಜಿಗಳನ್ನು ಯಾರು ಸಿದ್ಧಪಡಿಸಿದ್ದಾರೆ, ಯಾರು ಸಲ್ಲಿಸಿದ್ದಾರೆ ಮತ್ತು ಯಾವ ದಾಖಲೆಗಳ ಆಧಾರದ ಮೇಲೆ ಸಲ್ಲಿಸಲಾಗಿದೆ ಎಂಬುದನ್ನು ತನಿಖೆ ನಡೆಸುವಂತೆ SDPI ಒತ್ತಾಯಿಸಿದೆ.
ಅರ್ಜಿಗಳ ಸಲ್ಲಿಕೆ ಪ್ರಕ್ರಿಯೆಯಲ್ಲಿ BLA ಆಗಿ ಕಾರ್ಯನಿರ್ವಹಿಸುತ್ತಿರುವ ಪದ್ಮ ಕುಮಾರ್ ಕುಲಾಲ್ ಸೇರಿದಂತೆ ಯಾವುದೇ ವ್ಯಕ್ತಿಗಳ ನೇರ ಅಥವಾ ಪರೋಕ್ಷ ಪಾತ್ರವಿದೆಯೇ ಎಂಬುದನ್ನು ದಾಖಲೆಗಳು ಮತ್ತು ಪುರಾವೆಗಳ ಆಧಾರದ ಮೇಲೆ ಪರಿಶೀಲಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.
ಅಲ್ಲದೆ, ತನಿಖೆ ಪೂರ್ಣಗೊಳ್ಳುವವರೆಗೆ ವಿವಾದಿತ Form-7 ಅರ್ಜಿಗಳ ಆಧಾರದ ಮೇಲೆ ಸಂಬಂಧಪಟ್ಟ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಸಂಜಯನಗರ ವಾರ್ಡ್ ವ್ಯಾಪ್ತಿಯಲ್ಲಿ ಇದೇ ರೀತಿಯಾಗಿ ಇತರ ಮತದಾರರ ಹೆಸರಿನಲ್ಲಿಯೂ ಅರ್ಜಿಗಳನ್ನು ಸಲ್ಲಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು SDPI ಆಗ್ರಹಿಸಿದೆ.
ನಕಲಿ ಸಹಿ, ವೈಯಕ್ತಿಕ ದಾಖಲೆಗಳ ಅನಧಿಕೃತ ಬಳಕೆ ಅಥವಾ ತಪ್ಪು ಮಾಹಿತಿಯ ಆಧಾರದ ಮೇಲೆ ಅರ್ಜಿಗಳನ್ನು ಸಲ್ಲಿಸಿರುವುದು ತನಿಖೆಯಲ್ಲಿ ದೃಢಪಟ್ಟಲ್ಲಿ, ಸಂಬಂಧಪಟ್ಟವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಅಕ್ಬರ್ ಬೆಳ್ತಂಗಡಿ ಒತ್ತಾಯಿಸಿದ್ದಾರೆ.
ಮತದಾರರ ಪಟ್ಟಿಯಲ್ಲಿರುವ ಅರ್ಹ ಮತದಾರರ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಪಾರದರ್ಶಕ ತನಿಖೆ ನಡೆಸಿ ಅದರ ಫಲಿತಾಂಶವನ್ನು ಸಂಬಂಧಪಟ್ಟ ಮತದಾರರು ಹಾಗೂ ದೂರುದಾರರಿಗೆ ತಿಳಿಸಬೇಕು ಎಂದು SDPI ಮನವಿ ಮಾಡಿದೆ.ಈ ವೇಳೆ
ಎಸ್ ಡಿ ಪಿ ಐ ಜಿಲ್ಲಾ ಕಾರ್ಯದರ್ಶಿ ನವಾಜ್ ಕಟ್ಟೆ, ಕುವೆಟ್ಟು ಗ್ರಾ.ಪಂ ಮಾಜಿ ಸದಸ್ಯ ಮುಸ್ತಾಫ ಗುರುವಾಯನಕೆರೆ,ಎಸ್ ಡಿ ಟಿ ಯು ಕಾರ್ಯದರ್ಶಿ ಸಲೀಂ ಜಿ.ಕೆ.ಮಂಗಳೂರು ಗ್ರಾಮಾಂತರ,ಯಂಗ್ ಡೆಮಾಕ್ರಟಿಕ್ ಕನ್ವಿನರ್ ಅಸ್ಮ, ರಶೀದ್ ಬೆಳ್ತಂಗಡಿ, ಉಮರ್ , ಹೈದರ್, ಸಾಧಿಕ್ ನಾವೂರು, ರುಬಿಯಾ ಸೇರಿದಂತೆ ಇನ್ನಿತರ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.