ಬೆಳ್ತಂಗಡಿ : ಸುಮಾರು ಒಂಬತ್ತು ತಿಂಗಳ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಕೊಲೆ ಮಾಡಿದ ಯುವಕನ ಶವವನ್ನು ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಎಸೆಯಲಾಗಿದೆ ಎಂದು ಆರೋಪಿಗಳು ತಿಳಿಸಿದ್ದು ಅದರಂತೆ ಬೆಂಗಳೂರು ಎಸಿಪಿ ರಾಜೇಂದ್ರ ನೇತೃತ್ವದಲ್ಲಿ ಕಬ್ಬನ್ ಪಾರ್ಕ್ ಇನ್ಸ್ಪೆಕ್ಟರ್ ಚೈತನ್ಯ ಮತ್ತು ಅಶೋಕ್ ನಗರ ಠಾಣೆ ಪಿಎಸ್ಐ ಅಶ್ವಿನಿ ಮತ್ತು ತಂಡದವರು ಶವ ಪತ್ತೆಹಚ್ಚುವ ಕಾರ್ಯಾಚರಣೆ ನಡೆಸುತ್ತಿದ್ದು ಎರಡನೇ ದಿನದ ಕಾರ್ಯಾಚರಣೆಯಲ್ಲಿ ಕೂಡ ಯಾವುದೇ ಸುಳಿವು ಪತ್ತೆಯಾಗಿಲ್ಲ.
ಚಿಕ್ಕಮಗಳೂರು ಜಿಲ್ಲೆ – ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ಗಡಿಭಾಗದ ಘಾಟಿಯ ಪ್ರದೇಶಗಳ ಕಣಿವೆಗಳಲ್ಲಿ ಮೂಡಿಗೆರೆಯ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆ(ರಿ)ಯ ಫೀಸ್ ಮೋನು , ಅರೀಫ್ ಬಣಕಲ್, ಅಬ್ದುಲ್ ರಹಿಮಾನ್, ಅಶೀಕ್, ರಹೀಂ, ಅಹಮ್ಮದ್ ಭಾವ, ಉಮಾರ್ ಮತ್ತಿತರರ ಸಹಕಾರದಲ್ಲಿ ಹುಡುಕಾಟ ಆರಂಭಿಸಿದ್ದು ಯಾವುದೇ ಶವದ ಸುಳಿವು ಪತ್ತೆಯಾಗಿಲ್ಲ.
ಆರೋಪಿಗಳ ಹೇಳಿಕೆ ಗೊಂದಲ..!
ಪ್ರಕರಣ ಸಂಬಂಧಿಸಿದಂತೆ ಪ್ರಮುಖ ಆರೋಪಿ ಶರತ್ ಮತ್ತು ಧನುಷ್ ಎಂಬವರನ್ನು ಬೆಂಗಳೂರು ಪೊಲೀಸರು ಶವ ಪತ್ತೆ ಹಚ್ಚಲು ಬಿಗಿ ಭದ್ರತೆಯಲ್ಲಿ ಕರೆತಂದಿದ್ದು ಇಬ್ಬರು ಕೂಡ ಸ್ಥಳಗಳನ್ನು ಬೇರೆ ಬೇರೆಯಾಗಿ ಗುರುತಿಸುತ್ತಿದ್ದು ಇದರಿಂದ ಪೊಲೀಸರು ಗೊಂದಲಕ್ಕೆ ಸಿಲುಕಿದ್ದಾರೆ.