ಬೆಳ್ತಂಗಡಿ: ವಾಹನಗಳಿಗೆ ರೆಟ್ರೋ ರಿಪ್ಲೆಕ್ಟಿವ್ ಟೇಪ್ & ರೆಯರ್ ಮಾರ್ಕಿಂಗ್ ಪ್ಲೆಟ್ ಹಾಕುವ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಳ್ತಂಗಡಿಯಲ್ಲಿ ಕಳೆದ ವಾರ ವಾಹನ ಮಾಲಕರು ಪ್ರತಿಭಟನೆ ನಡೆಸಿದ್ದರು. ಬಳಿಕ ಮಾಜಿ ಶಾಸಕ ವಸಂತ ಬಂಗೇರ ಹಾಗೂ ಹಾಲಿ ಶಾಸಕ ಹರೀಶ್ ಪೂಂಜ ಅಧಿಕಾರಿಗಳ ಜೊತೆ ಮಾತನಾಡಿ ಸಾರಿಗೆ ಪ್ರಾಧಿಕಾರ ನಿಗದಿ ಪಡಿಸಿದ ಕ್ಯೂ ಆರ್ ಕೋಡ್ ಹೊಂದಿರುವ ರಿಪ್ಲೆಕ್ಟರ್ ಸ್ಟಿಕರ್ ಅಳವಡಿಸಿ, ಬಳಿಕ ಎಫ್ ಸಿ ಮಾಡುವ ನಿಯಮ ಎಲ್ಲಾ ಕಡೆಗಳಲ್ಲಿ ಅನುಷ್ಠಾನ ಆಗುವವರೆಗೆ ಬೆಳ್ತಂಗಡಿಯಲ್ಲಿ ಹಳೆಯ ರೀತಿಯ ನಿಯಮ ಮುಂದುವರಿಯಲಿ ಎಂದು ಸೂಚಿಸಿದ್ದರು. ಆದರೆ ಇಂದು ಮತ್ತೆ ಸಾರಿಗೆ ಪ್ರಾಧಿಕಾರ ನಿಗದಿ ಪಡಿಸಿದ ಸಂಸ್ಥೆಯವರು ಜನಪ್ರತಿನಿಧಿಗಳ ಮಾತಿಗೆ ಕುಮ್ಮಕ್ಕು ನೀಡದೆ ಹೊಸ ನಿಯಮವನ್ನು ಅನುಸರಿಸಿ, ವಾಹನ ಮಾಲಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಇಂದು ಮತ್ತೆ ಬೆಳ್ತಂಗಡಿ ಎಪಿಎಂಸಿ ಪ್ರಾಂಗಣಕ್ಕೆ ಎಫ್‌ಸಿ ಮಾಡಲು ವಾಹನ ಮಾಲಕರು ಬಂದಾಗ ಸಾರಿಗೆ ಪ್ರಾಧಿಕಾರ ನಿಗದಿ ಪಡಿಸಿದ ಖಾಸಗಿ ಸಂಸ್ಥೆಯವರು ಸರ್ಕಾರ ದರ ನಿಗದಿ ಮಾಡುವ ಮುನ್ನವೇ ಮನಸ್ಸೋ ಇಚ್ಚೆ ಇವರೇ ದರ ನಿಗದಿ ಮಾಡಿ ಜನಸಾಮಾನ್ಯರನ್ನು ಸುಲಿಗೆ ಮಾಡಲು ಮುಂದಾಗಿರುವ ವಿಚಾರ ತಿಳಿದು ಬಂದಿದೆ.
ಬೆಳ್ತಂಗಡಿಯಲ್ಲಾದ ರಸ್ತೆಯ ಅಯೋಮಯಗಳ ಬಗ್ಗೆಯಾಗಲಿ, ದೊಡ್ಡ, ದೊಡ್ಡ ಹೊಂಡಗಳಿಗೆ ಬಿದ್ದು, ಬಿದ್ದು ಸಾಗುವ ವಾಹನದ ಬಗ್ಗೆಯಾಗಲಿ ಯೋಚಸದೇ ಜನರಿಂದ ನಾನಾ ರೀತಿಯಲ್ಲಿ ಕೊಳ್ಳೆಹೊಡೆಯಲು ಖಾಸಗಿ ಸಂಸ್ಥೆಗಳ ಮೂಲಕ ಸರ್ಕಾರ ಮುಂದಾಗಿರುವ ಬಗ್ಗೆ ವಾಹನ ಮಾಲಕರು ಗರಂ ಆಗಿದ್ದಾರೆ. ಅದಲ್ಲದೇ ಟೂರಿಸ್ಟ್ ವಾಹನಗಳಿಗೆ ಮಾತ್ರ ಸ್ಟಿಕರ್ ಮೂಲಕ ವಸೂಲಿ ಮಾಡುತ್ತಿರುವುದು ಖಾಸಗಿ ವಾಹನಗಳಿಗೆ ಯಾವುದೇ ಸ್ಟಿಕರ್ ಅಳವಡಿಕೆ ನಿಬಂಧನೆಗಳಿಲ್ಲದಿರುವುದು ಮತ್ತಷ್ಟು ಅಕ್ರೋಶಕ್ಕೊಳಗಾಗುವಂತಾಗಿದೆ.ಕಳೆದ ಎರಡು ವರ್ಷಗಳಿಂದ ಕೊರೋನ, ಬಿಡದೇ ಸುರಿಯುತ್ತಿದ್ದ ಮಳೆ ಇವೆಲ್ಲವುಗಳ ನಷ್ಟದಿಂದ ಈಗಷ್ಟೇ ಹೊರಬರುತ್ತಿದ್ದ ಮಾಲಕರಿಗೆ ಎಫ್‌ಸಿ ಮಾಡಿಸುವುದು ದೊಡ್ಡ ಹೊರೆಯಾಗುತ್ತಿದೆ. ಎಫ್‌ಸಿ ಇಲ್ಲದಿದ್ದಾಗ ಅಧಿಕಾರಿಗಳು ಹಾಕುವ ದಂಡ, ಇತ್ತ ಎಫ್,ಸಿ ಮಾಡಲು ಹೋದಾಗ ನಡೆಯುತ್ತಿರುವ ಸುಲಿಗೆ ಈ ಎರಡರ ಮಧ್ಯೆ ಇರುವ ವಾಹನ ಮಾಲಕರು ಚಿಂತಾಕ್ರಾಂತರಾಗಿದ್ದಾರೆ.
ಕಡಿಮೆ ದರದಲ್ಲಾಗುತ್ತಿದ್ದ ವಾಹನದ ಎಫ್ ಸಿ ಕಾರ್ಯಗಳು ಈಗ ಏಕಾಏಕಿ ಹೆಚ್ಚಾಗಿರುವುದರಿಂದ ಜೊತೆಗೆ ಟಾಕ್ಸ್ ಸೇರಿದಂತೆ ಇತರೆ ವಸ್ತುಗಳ ಬೆಲೆ ಏರಿಕೆಯಾಗಿದ್ದರಿಂದ ತತ್ತರಿಸಿರುವ ವಾಹನ ಮಾಲಕರು, ಹೊಸ ನಿಯಮದ ಬಗ್ಗೆ ತೀವ್ರ ಆಕ್ರೋಶಗೊಂಡಿದ್ದಾರೆ.