ಕಮರಿತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಬ್ಬರ ಕನಸು, ಅರ್ಧದಲ್ಲೇ ನಿಂತಿತು ಎಳೆ ಕಂದಮ್ಮಗಳ ಉಸಿರು’: ಅಪಘಾತದಿಂದ ನಡು ರಸ್ತೆಯಲ್ಲಿ ಪ್ರಾಣಬಿಟ್ಟ ಅಣ್ಣ- ತಂಗಿ: ಪೋಷಕರೇ ಮಕ್ಕಳ ಕೈಗೆ ವಾಹನ ಕೊಡುವ ಮುನ್ನ ಎಚ್ಚರಾ.. ಎಚ್ಚರಾ..!: ಹೆಚ್ಚುತ್ತಿದೆ ಎಳೆಯರ ಅಪಘಾತ ಪ್ರಕರಣ, ಎಚ್ಚೆತ್ತುಕೊಳ್ಳಬೇಕಿದೆ ಸಮಾಜ

 

 

ಸುಳ್ಯ:  ಅದೆಷ್ಟೋ  ಕನಸುಗಳ ಹೊತ್ತ   ಪುಟ್ಟ ವಿದ್ಯಾರ್ಥಿಗಳಿಬ್ಬರು ದ್ವಿಚಕ್ರ ವಾಹನದಲ್ಲಿ ತೆರಳಿ ರಸ್ತೆ ಮಧ್ಯೆ ಅಪಘಾತಕ್ಕೀಡಾಗಿ ಕೊನೆಯುಸಿರೆಳೆದ ಕರುಣಾಜನಕ ಘಟನೆ ಸುಳ್ಯದಲ್ಲಿ‌ ನಡೆದಿದೆ.
ಸುಳ್ಯದ ಎಲಿಮಲೆ ಸಮೀಪ ಘಟನೆ ನಡೆದಿದ್ದು, ಪೋಷಕರಲ್ಲಿ ಭಯ ಹುಟ್ಟಿಸಿದೆ. ಸೋಮವಾರ ಬೆಳಗ್ಗೆ‌ ಜ್ಯೂನಿಯರ್ ಕಾಲೇಜು ವಿದ್ಯಾರ್ಥಿ ನಿಶಾಂತ್ ತನ್ನ ತಂಗಿ 5ನೇ ತರಗತಿಯ ಮೋಕ್ಷಾಳನ್ನು‌‌ ಸ್ಕೂಟಿಯಲ್ಲಿ ಕೂರಿಸಿಕೊಂಡು ಸುಬ್ರಹ್ಮಣ್ಯ – ಜಾಲ್ಸೂರು ರಾಜ್ಯ ಹೆದ್ದಾರಿಯಲ್ಲಿ ಸಾಗಿದ್ದಾರೆ. ಸುಳ್ಯ ತಾಲೂಕಿನ ಎಲಿಮಲೆ ಸಮೀಪ ನಿಶಾಂತ್ ಚಲಾಯಿಸುತ್ತಿದ್ದ ಸ್ಕೂಟಿಗೆ ಮಾರುತಿ 800 ಕಾರು ಡಿಕ್ಕಿಯಾಗಿದ್ದು, ಡಿಕ್ಕಿಯ ರಭಸಕ್ಕೆ ನಿಶಾಂತ್ ಸ್ಥಳದಲ್ಲೇ ಮೃತಪಟ್ಟರೆ ಮೋಕ್ಷಾಳನ್ನು ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭ ಸಾವನ್ನಪ್ಪಿದ್ದಾಳೆ.
ಮೃತಪಟ್ಟ ಇಬ್ಬರು ಕಡಪಾಲ ಬಾಜಿನಡ್ಕ ದೇವಿದಾಸ್ ಎಂಬವರ ಮಕ್ಕಳು ಎಂದು ತಿಳಿದು ಬಂದಿದೆ. ಮೃತ ನಿಶಾಂತ್ ಸುಳ್ಯ ಜೂನಿಯರ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಮೋಕ್ಷಾ ದೇವಚಳ್ಳ ಸ.ಮಾ.ಹಿ.ಪ್ರಾ. ಶಾಲೆಯ 5ನೇ ತರಗತಿ ವಿದ್ಯಾರ್ಥಿನಿಯಾಗಿದ್ದರು.

 

 

 

ಮಕ್ಕಳಿಗೆ ವಾಹನ‌ ಚಾಲನೆ‌ ನೀಡುವ ಮುನ್ನ ಎಚ್ಚರ:

ಮಕ್ಕಳಿಗೆ 18 ವರ್ಷ ತುಂಬುವ ಮುನ್ನವೆ ದ್ವಿಚಕ್ರ ವಾಹನ ಕಲಿಸಿ ಕೊಡುವ ಪೋಷಕರು, ಮಕ್ಕಳು ಸ್ವಲ್ಪ ಸರಿಯಾಗಿ ದ್ವಿಚಕ್ರ ವಾಹನ ಚಲಾಯಿಸಿದರೆ, ಅವರ ಸುಪರ್ದಿಗೆ ವಾಹನ ಒಪ್ಪಿಸುತ್ತಾರೆ. ಡೈರಿಗೆ ಹಾಲು ಕೊಟ್ಟು ಬರಲು ಅಥವಾ ದಿನಸಿ ಸಾಮಾಗ್ರಿಗಳಿಗೆ ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕೆಲವರು ಕಳುಹಿಸುತ್ತಿದ್ದಾರೆ. ಆದರೆ 18 ವರ್ಷ ತುಂಬುವ ಮುನ್ನ ಮಕ್ಕಳ ಕೈಗೆ ವಾಹನ ಕೊಡುವುದು ಶಿಕ್ಷಾರ್ಹ ಅಪರಾಧ. ಹೆತ್ತವರ ನಿರ್ಲಕ್ಷ್ಯದಿಂದ ಇಂತಹ ಪ್ರತಿಭಾನ್ವಿತ ವಿದ್ಯಾರ್ಥಿಗಳು ದಾರುಣ ಅಂತ್ಯ ಕಾಣುವಂತಾಗಿದೆ.

ಮಂಗಳೂರಿನಲ್ಲಿ ‌ಘಟನೆ:

ಇತ್ತೀಚೆಗೆ ವಾಹನ‌ ನಿಲ್ಲಿಸಲು ತೆರಳಿದ್ದ ಟ್ರಾಫಿಕ್ ಪೊಲೀಸ್ ಒಬ್ಬರಿಗೆ ಕಾರು ಅಪಘಾತ ನಡೆಸಿತ್ತು. ತನಿಖೆ ನಡೆಸಿದಾಗ 16 ವರ್ಷ ವಯಸ್ಸಿನ ಬಾಲಕ ಕಾರು ಚಲಾಯಿಸಿದ್ದು ಬೆಳಕಿಗೆ ಬಂದಿತ್ತು. ಪೊಲೀಸರು ಅಪ್ರಾಪ್ತರ ವಾಹನ ಚಲಾವಣೆಗೆ ಸ್ಥಳದಲ್ಲೇ ದಂಡ ಅಥವಾ ಘಟನೆ ಕಂಡು ಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.
ಇಲ್ಲವಾದಲ್ಲಿ ಬಾಳಿ ಬದುಕಬೇಕಾದ ಎಳೆಯ ಜೀವಗಳು ಅಪಘಾತದಲ್ಲಿ ತಮ್ಮ ಉಸಿರು ಚೆಲ್ಲಬಹುದು ಅಥವಾ ಇತರರ ಜೀವಕ್ಕೆ ಕುತ್ತು ತಂದುಕೊಳ್ಳುವ ಜೊತೆಗೆ ಬಾಲ್ಯಾಪರಾಧಿಗಳಾಗಿ ತಮ್ಮ ಅಮೂಲ್ಯ ಜೀವನ ಕಳೆದುಕೊಳ್ಳಬಹುದು. ಬದುಕಿದ್ದರೆ ಕಾನೂನು ಪಾಲನೆಯೊಂದಿಗೆ ಉತ್ತಮ ರೀತಿಯಲ್ಲಿ ಜೀವನ ಸಾಗಿಸೋಣ ಎಂಬುದಷ್ಟೇ ‘ಪ್ರಜಾಪ್ರಕಾಶ’ ತಂಡದ ಆಶಯವಾಗಿದೆ.

error: Content is protected !!