ಬೆಳ್ತಂಗಡಿ:ನಾರಾಯಣ ಗುರುಗಳ ಪಠ್ಯವನ್ನು ಮರು ಸೇರ್ಪಡೆಗೊಳಿಸಲು ಶಿಕ್ಷಣ ಸಚಿವರು ಆದೇಶಿಸಿರುವುದು ಬಿಲ್ಲವ ಸಂಘದ ಹಾಗೂ ಇತರರ ಹೋರಾಟಕ್ಕೆ ಸಂದ ಜಯ ಎಂದು ಶ್ರೀ ನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಇದರ ಅಧ್ಯಕ್ಷ ಚಿದಾನಂದ ಎಲ್ದಕ್ಕ ತಿಳಿಸಿದ್ದಾರೆ.
ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತಾದ ಪಠ್ಯವನ್ನು 10ನೇ ತರಗತಿಯ ಸಮಾಜ, ವಿಜ್ಞಾನದಲ್ಲೇ ಮರು ಸೇರ್ಪಡೆ ಮಾಡುವಂತೆ ಶಿಕ್ಷಣ ಸಚಿವರು ಆದೇಶಿಸಿರುವುದು ಸ್ವಾಗತಾರ್ಹ ಬೆಳವಣಿಗೆ ಇದು ನಮ್ಮ ಸಂಘವು ಸೇರಿದಂತೆ ರಾಜ್ಯಾದಾದ್ಯಂತ ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಯಾಯಿಗಳು ನಡೆಸಿದ ಹೋರಾಟಕ್ಕೆ ಸಂದ ಜಯವಾಗಿರುತ್ತದೆ.ಶಿಕ್ಷಣ ಸಚಿವರ ಸೂಚನೆಗೆ ಪೂರಕವಾಗಿ ಸರಕಾರ ಈ ಬಗ್ಗೆ ತಕ್ಷಣ ಆದೇಶ ಹೊರಡಿಸಬೇಕು ಇಲ್ಲವಾದಲ್ಲಿ ಈ ಬಗ್ಗೆ ರಾಜ್ಯಮಟ್ಟ ಅಥವಾ ಜಿಲ್ಲಾ ಮಟ್ಟದ ಹೋರಾಟಕ್ಕೆ ನಮ್ಮ ಸಂಘದ ಸಂಪೂರ್ಣ ಬೆಂಬಲ ಇರಲಿದೆ.ಪಠ್ಯ ಮರು ಸೇರ್ಪಡೆ ವಿಚಾರದಲ್ಲಿ ಮುತುವರ್ಜಿ ವಹಿಸಿದ ಸಚಿವರಾದ ಸುನೀಲ್ ಕುಮಾರ್ ಮತ್ತು ಸಂಸದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಇವರಿಗೆ ಸಂಘದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.