ಬೆಳ್ತಂಗಡಿ : ಕಾಲ ಭೈರವೇಶ್ವರ ಒಕ್ಕಲಿಗ ಗೌಡರ ಸಂಘ ಬೆಳ್ತಂಗಡಿ ಹಾಗೂ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಸೌಹಾರ್ದ ಸಹಕಾರಿಯ ಸಂಯುಕ್ತ ಆಶ್ರಯದಲ್ಲಿ ಜೂ 27 ರಂದು ಉಜಿರೆಯ ಎಸ್. ಪಿ ಆಯಿಲ್ ಮಿಲ್ ಸಭಾಂಗಣದಲ್ಲಿ ಕೆಂಪೇಗೌಡ ಜಯಂತಿಯ ಆಚರಣೆ ನಡೆಯಿತು.
ಒಕ್ಕಲಿಗ ಗೌಡರ ಸಂಘದ ಅಧ್ಯಕ್ಷ ಕೇರಿಮಾರು ಬಾಲಕೃಷ್ಣ ಗೌಡ ಅಧ್ಯಕ್ಷತೆ ವಹಿಸಿ ಕೆಂಪೇಗೌಡರ ಮೇರು ವ್ಯಕ್ತಿತ್ವ ಹಾಗೂ ಆದರ್ಶಗಳು ಇಂದಿನ ಕಾಲಘಟ್ಟದಲ್ಲಿ ಅತ್ಯಂತ ಪ್ರಸ್ತುತವಾಗಿದ್ದು, ಇದನ್ನು ಮೈಗೂಡಿಸಿಕೊಂಡು ನಮ್ಮ ಸಂಘಟನೆಯ ಎಲ್ಲಾ ಕಾರ್ಯಯೋಜನೆಗಳನ್ನು ಸಾಕಾರಾಗೊಳಿಸುವಂತೆ ಕರೆಕೊಟ್ಟರು. ಮಹಿಳಾ ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಗೀತಾ ಚಿದಾನಂದ ಗೌಡ ಇವರು ಕೆಂಪೇಗೌಡರ ಇತಿಹಾಸದ ಮಾಹಿತಿಯನ್ನು ಸವಿಸ್ತಾರವಾಗಿ ಸಭೆಯ ಮುಂದೆ ಇಟ್ಟರು. ಸೌಹಾರ್ದ ಸಹಕಾರಿಯ ನಿರ್ದೇಶಕ ಎನ್. ಲಕ್ಷ್ಮಣ ಗೌಡ ಬೆಂಗಳೂರು ನಗರ ಕಟ್ಟುವಲ್ಲಿ ಕೆಂಪೇಗೌಡರು ಅನುಸರಿಸಿದ ಮಾರ್ಗ ವಿಧಾನಗಳ ಬಗ್ಗೆ ಬೆಳಕು ಚೆಲ್ಲಿದರು.
ಕಾಲಭೈರವೇಶ್ವರ ಒಕ್ಕಲಿಗ ಗೌಡರ ಸೌಹಾರ್ದ ಸಹಕಾರಿಯ ಅಧ್ಯಕ್ಷ ರಂಜನ್. ಜಿ. ಗೌಡ, ಯುವ ವೇದಿಕೆಯ ಅಧ್ಯಕ್ಷ ಸುಧಾಕರ ಗೌಡ, ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಅಪರ್ಣ ಶಿವಕಾಂತ ಗೌಡ ಹಾಗೂ ಸೌಹಾರ್ದ ಸಹಕಾರಿಯ ಮುಖ್ಯ ಕಾರ್ಯನಿರ್ವಾಹಣಾ ಧಿಕಾರಿ ದಿನೇಶ್ ಗೌಡ ಕಲ್ಲಾಜೆ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಒಕ್ಕಲಿಗ ಗೌಡರ ಸೌಹಾರ್ದ ಸಹಕಾರಿಯ ನಿರ್ದೇಶಕರು, ಸಂಘದ ಪದಾಧಿಕಾರಿಗಳು, ಗ್ರಾಮಸಮಿತಿಗಳ ಪದಾಧಿಕಾರಿಗಳು, ವಿವಿಧ ಗ್ರಾಮಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಗೌಡ ಕಲ್ಲಾಜೆ ಸ್ವಾಗತಿಸಿ ಪ್ರಕಾಶ್ ಕುಮಾರ್ ಕೆದ್ಲ ಧನ್ಯವಾದ ಅರ್ಪಿಸಿದರು.