ಬೆಳ್ತಂಗಡಿ : ‘ಲಯನ್ಸ್ ತಳಮಟ್ಟದ ಜನರನ್ನು ತಲುಪಿ ಅವರ ಪ್ರೀತಿಯನ್ನು ಗಳಿಸಬೇಕು. ಯಾವುದೇ ವ್ಯರ್ಥ ಕಾರ್ಯಗಳನ್ನು ಮಾಡದೆ ನಿಸ್ವಾರ್ಥವಾದ ಕೆಲಸಗಳನ್ನು ಮಾಡಬೇಕು. ನಾವು ಮಾಡುವ ಸಾಧನೆಗಳೇ ಮಾತಿನ ವಿಷಯವಾಗಬೇಕು’ ಎಂದು ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಾರ್ವಜನಿಕ ಕುಂದುಕೊರತೆ ನಿವಾರಣಾ ಅಧಿಕಾರಿ ಡಾ. ಬೂಮನಹಳ್ಳಿ ನಾಗರಾಜ್ ಹೇಳಿದರು.
ಅವರು ಭಾನುವಾರ ಬೆಳ್ತಂಗಡಿ ಹೋಲಿ ರಿಡೀಮರ್ ಆಡಿಟೋರಿಯಂನಲ್ಲಿ ನಡೆದ ಬೆಳ್ತಂಗಡಿ ಲಯನ್ಸ್ ಕ್ಲಬ್ ನ 2022-23 ನೇ ಸಾಲಿನ ಅಧ್ಯಕ್ಷ ಡಾ.ದೇವಿಪ್ರಸಾದ್ ಬೊಲ್ಮ ಧರ್ಮಸ್ಥಳ ಮತ್ತು ತಂಡದ ಪದಗ್ರಹಣ ಸಮಾರಂಭದಲ್ಲಿ ಸೇವಾ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಲಯನ್ಸ್ ಕ್ಲಬ್ ನ ನೂತನ ಅಧ್ಯಕ್ಷ ಡಾ.ದೇವಿಪ್ರಸಾದ್ ಬೊಲ್ಮ ಮಾತನಾಡಿ, ‘ಲಯನ್ಸ್ ಸಂಸ್ಥೆಯಲ್ಲಿ ಶಿಕ್ಷಣ ಮತ್ತು ಉದ್ಯೋಗಕ್ಕೆ ಪ್ರಾಮುಖ್ಯತೆ ನೀಡಿ ಈ ಬಾರಿ ಕೆಲಸಗಳನ್ನು ಮಾಡಲಾಗುವುದು.
ಕಾಲೇಜು ವಿದ್ಯಾರ್ಥಿಗಳಿಗೆ ಐಎಎಸ್, ಐಪಿಎಸ್ ತರಬೇತಿ ನೀಡುವ ಯೋಚನೆ ಇದೆ’ ಎಂದರು.
ಬೆಳ್ತಂಗಡಿ ಲಯನ್ಸ್ ಕ್ಲಬ್ ನ 49 ನೇ ಅಧ್ಯಕ್ಷನಾಗಿ ನನ್ನನ್ನು ಆಯ್ಕೆ ಮಾಡಲಾಗಿದ್ದು, ‘ಈ ಪದಗ್ರಹಣ ಸಮಾರಂಭ ಮುಂದಿನ ವರ್ಷದ ಸುವರ್ಣ ಮಹೋತ್ಸವದ ಸುವರ್ಣ ಮುಹೂರ್ತ ಎಂದು ಭಾವಿಸುವೆ’ ಎಂದರು.
ಲಯನ್ಸ್ ಜಿಲ್ಲೆ 317 ಡಿ ಯ ದ್ವಿತೀಯ ಉಪ ರಾಜ್ಯಪಾಲೆ ಭಾರತಿ ಬಿ.ಎಂ. ಪದಗ್ರಹಣ ನಡೆಸಿಕೊಟ್ಟರು.
ವೇದಿಕೆಯಲ್ಲಿದ್ದ ನಿರ್ಗಮನ ಅಧ್ಯಕ್ಷ ಹೇಮಂತ ರಾವ್ ಎರ್ಡೂರ್, ಅಥಿತಿಗಳಾದ ಚಲನಚಿತ್ರ ನಿರ್ದೇಶಕ ಜೆ.ಕೆ., ನಟ ಹಾಗೂ ಡಬ್ಬಿಂಗ್ ಕಲಾವಿದ ಸುಮಂತ್ ಭಟ್, ಐಎಎಸ್ ಮತ್ತು ಕೆಎಎಸ್ ತರಬೇತುದಾರೆ ಅನಿತಾ ಲಕ್ಷ್ಮೀ ಆಚಾರ್ಯ ಇವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಪ್ರಾಂತ್ಯಾಧ್ಯಕ್ಷ ವಸಂತ ಶೆಟ್ಟಿ, ನಿರ್ಗಮನ ಕೋಶಾಧಿಕಾರಿ ದತ್ತಾತ್ರೇಯ ಬಿ, ನೂತನ ಕೋಶಾಧಿಕಾರಿ ಪಂಚಾಕ್ಷರಪ್ಪ ಇದ್ದರು.
ಆರ್ಯ ಭಟ ಪ್ರಶಸ್ತಿ ಪುರಸ್ಕೃತ ವಿ.ಆರ್.ನಾಯಕ್ ರನ್ನು ಸನ್ಮಾನಿಸಲಾಯಿತು. ಎಸ್ ಎಸ್ ಎಲ್ ಸಿ ಯಲ್ಲಿ ತಾಲ್ಲೂಕಿನ ಸಾಧಕ ವಿದ್ಯಾರ್ಥಿಗಳಾದ ವೈಭವ್ ಕೆ. ಎ., ನಿರಂಜನ್, ಶ್ರಾವ್ಯ ಡೋಂಗ್ರೆ, ಸ್ರಷ್ಟಿ ರೈ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪ್ರಾಪ್ತಿ ಶೆಟ್ಟಿ ಹಾಗೂ ಸಿಂಚನಳಿಗೆ ಕಲಾ ಪುರಸ್ಕಾರ ನೀಡಲಾಯಿತು.
ಕಂಕಣಭಾಗ್ಯ, ವಿದ್ಯಾನಿಧಿ ಸೇರಿದಂತೆ ವಿವಿಧ ಸೇವಾ ಚಟುವಟಿಕೆಗಳು ನಡೆದವು.
ಕಿರಣ್ ಕುಮಾರ್ ಶೆಟ್ಟಿ ನೀತಿ ಸಂಹಿತೆ ವಾಚಿಸಿದರು.ರವೀಂದ್ರ ಶೆಟ್ಟಿ ಧ್ವಜವಂದನೆ ನಡೆಸಿದರು. ನಿರ್ಗಮನ ಕಾರ್ಯದರ್ಶಿ ಅನಂತ್ ಕೃಷ್ಣ ವಾರ್ಷಿಕ ವರದಿ ವಾಚಿಸಿದರು. ಪ್ರಾಂತ್ಯಾಧ್ಯಕ್ಷ ಧರಣೇಂದ್ರ ಕೆ ಜೈನ್, ಅಶ್ರಫ್ ಆಲಿಕುಂಞಿ ಮುಂಡಾಜೆ, ಪ್ರಭಾಕರ ಗೌಡ ಬೊಲ್ಮ, ಮುರಳೀಧರ ದಾಸ, ರಘುರಾಮ ಶೆಟ್ಟಿ, ಸುರೇಶ್ ಶೆಟ್ಟಿ ಬಿ ಲಾಯಿಲ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು. ವೇದಿಕೆಯಲ್ಲಿ ಪ್ರಾಂತ್ಯದ ವಿವಿಧ ಲಯನ್ಸ್ ಕ್ಲಬ್ ಗಳ ಅಧ್ಯಕ್ಷರುಗಳು, ದೇವಿ ಪ್ರಸಾದ್ ಬೊಳ್ಮ ಅವರ ಪತ್ನಿ ಸೌಮ್ಯಾ ಡಿ ಪ್ರಸಾದ್, ನಿರ್ಗಮನ ಕೋಶಾಧಿಕಾರಿ ಧತ್ತಾತ್ರೇಯ ಕೆ ಉಪಸ್ಥಿತರಿದ್ದರು. ಜಿಲ್ಲಾ ರಾಜ್ಯಪಾಲರ ಸಂಪುಟದ ಕಾರ್ಯದರ್ಶಿ ಕುಡ್ಪಿ ಅರವಿಂದ ಶೆಣೈ ನೂತನ ಸಮಿತಿಗೆ ಶುಭಕೋರಿದರು. ಕೆ. ಕೃಷ್ಣ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ನೂತನ ಕಾರ್ಯದರ್ಶಿ ತುಕಾರಾಮ ಬಿ ವಂದಿಸಿದರು.