ನಾರಾಯಣ ಗುರುಗಳಿಗೆ ಪಠ್ಯದಲ್ಲಿ ಅವಮಾನ ಜಿಲ್ಲೆಯ ಶಾಸಕರುಗಳಿಗೆ ಕಾಣುತ್ತಿಲ್ಲವೇ? ಸರಿಪಡಿಸದಿದ್ದಲ್ಲಿ ಕಾಂಗ್ರೆಸ್ ವತಿಯಿಂದ ಹೋರಾಟ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ವಸಂತ ಬಂಗೇರ ಹೇಳಿಕೆ

 

 

ಬೆಳ್ತಂಗಡಿ : ‘ಪಠ್ಯಪುಸ್ತಕ ಪರಿಷ್ಕರಣೆ ನೆಪದಲ್ಲಿ ಬಸವಣ್ಣ, ನಾರಾಯಣ ಗುರು, ಅಂಬೇಡ್ಕರ್, ಕುವೆಂಪು, ಪೆರಿಯಾರ್, ಕಯ್ಯಾರ ಕಿಂಞಣ್ಣ ರೈ ಮುಂತಾದ ಮಹನೀಯರ ಜೀವನ ಚರಿತ್ರೆಯನ್ನು ರೋಹಿತ್ ಚಕ್ರತೀರ್ಥ ನೇತೃತ್ವದ ಪರಿಷ್ಕರಣಾ ಸಮಿತಿ ತಿರುಚಿ ಅವಮಾನ ಮಾಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸರಿಪಡಿಸುವ ವಿಶಾಲ ಹೃದಯ ಹೊಂದಿದ್ದರೂ ರಾಜ್ಯದ ಪ್ರೌಢ ಶಿಕ್ಷಣ ಸಚಿವ, ಕೋಮುವಾದಿ ಬಿ. ಸಿ ನಾಗೇಶ್ ಬೇಜಾವಬ್ದಾರಿಯುತವಾಗಿ ವರ್ತಿಸುತ್ತಿದ್ದಾರೆ. ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ವಿದ್ಯಾರ್ಥಿಗಳ ಬಾಳಿನಲ್ಲಿ ಚೆಲ್ಲಾಟವಾಡುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಈ ಬಗ್ಗೆ ಹೋರಾಟ ಅನಿವಾರ್ಯ’ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಪಠ್ಯ ಪುಸ್ತಕಗಳ ಪರಿಷ್ಕರಣೆಯನ್ನು ವಿರೋಧಿಸಿ ನಾಡಿನ ಮಠಾಧೀಶರು, ಪ್ರಗತಿಪರ ಲೇಖಕರು, ಹಲವು ಸಮುದಾಯಗಳ ಮುಖಂಡರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಬಹು ಜನರ ಬೇಡಿಕೆಯಂತೆ ತಕ್ಷಣ ಶಿಕ್ಷಣ ಸಚಿವರನ್ನು ವಜಾಗೊಳಿಸಿ ಪಠ್ಯ ಪುಸ್ತಕಗಳನ್ನು ಸರಿಪಡಿಸಿ ಗೊಂದಲಕ್ಕೆ ತೆರೆ ಎಳೆಯಬೇಕು. ಕುವೆಂಪು ವಿರಚಿತ ನಾಡಗೀತೆಯನ್ನು ವಿಡಂಬನಾತ್ಮಕವಾಗಿ ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ, ಸಂತ ನಾರಾಯಣ ಗುರುಗಳ ಪಠ್ಯವನ್ನು ವಿನಾಕಾರಣ ಹತ್ತನೇ ತರಗತಿಯ ಸಮಾಜ ವಿಜ್ಞಾನದಿಂದ ತೆಗೆದು ಕೇವಲ 20% ವಿದ್ಯಾರ್ಥಿಗಳು ಓದುವ ಕನ್ನಡ (ಐಚ್ಚಿಕ) ಪಠ್ಯಪುಸ್ತಕಕ್ಕೆ ಸೇರಿಸಿದ ರೋಹಿತ್ ಚಕ್ರತೀರ್ಥನಿಗೆ ಶಾಸಕ ವೇದವ್ಯಾಸ ಕಾಮತ್ ರವರು ಮಂಗಳೂರಿನಲ್ಲಿ ಸನ್ಮಾನ ಹಮ್ಮಿಕೊಂಡಿರುವುದು ಅವರ ನೈತಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ’.
ನಾರಾಯಣ ಗುರುಗಳ ಪಠ್ಯವನ್ನು ತೆಗೆದು ಹಾಕಿರುವ ಸರ್ಕಾರದ ಧೋರಣೆಯಿಂದ ದ.ಕ, ಉಡುಪಿ, ಕೊಡಗು, ಉತ್ತರ ಕನ್ನಡದಲ್ಲಿರುವ ಬಹು ಸಂಖ್ಯಾತ ಬಿಲ್ಲವರು ಸೇರಿದಂತೆ ನಾರಾಯಣ ಗುರುಗಳ ಸಮಸ್ತ ಅನುಯಾಯಿಗಳಿಗೆ ನೋವಾಗಿರುತ್ತದೆ. ಈ ಬಗ್ಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಹಿಂದುಳಿದ ವರ್ಗಗಳ ಇಲಾಖಾ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಗ್ರಾಮ ಗ್ರಾಮಗಳಿಗೆ ಹೋಗಿ ಬಿಲ್ಲವ ಭವನಗಳಿಗೆ ಅನುದಾನ ಘೋಷಣೆ ಮಾಡಿ ಬರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮೌನ ವಹಿಸಿರುವುದು ಯಾಕೆ? ಇವರುಗಳಿಗೆ ನಾರಾಯಣ ಗುರುಗಳಿಗೆ ಪಠ್ಯದಲ್ಲಿ ಆಗುತ್ತಿರುವ ಅವಮಾನ ಕಾಣುತ್ತಿಲ್ಲವೇ? ಎಂದು ಪ್ರಶ್ನಿಸಿದರು.
ನಾರಾಯಣ ಗುರುಗಳ ಹೋರಾಟ ಮಹಾತ್ಮ ಗಾಂಧೀಜಿ, ರವೀಂದ್ರನಾಥ ಟಾಗೋರರಂತಹ ಮಹಾನ್ ನಾಯಕರಿಗೆ ಪ್ರೇರಣೆ ನೀಡಿರುತ್ತದೆ. ಮಹಾತ್ಮ ಗಾಂಧೀಜಿಯವರನ್ನು ಕೊಂದ ನಾಥೂರಾಮ್‍ಗೋಡ್ಸೆಯನ್ನು ಪೂಜಿಸುವ ನಕಲಿ ದೇಶ ಭಕ್ತ ಬಿ.ಜೆ.ಪಿಯು ರೋಹಿತ್ ಚಕ್ರತೀರ್ಥ ಮಾಡಿದ ಎಡವಟ್ಟುಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಲೆ ತೆರಬೇಕಾದ ದಿನಗಳು ದೂರವಿಲ್ಲ. ಈ ತಪ್ಪನ್ನು ಸರಿಪಡಿಸದಿದ್ದಲ್ಲಿ ನಡೆಯುವ ಹೋರಾಟಕ್ಕೆ ಕಾಂಗ್ರೇಸ್‍ನ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಶೈಲೇಶ್ ಕುಮಾರ್, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜನ್ ಜಿ ಗೌಡ, ಕಾಂಗ್ರೆಸ್ ವಕ್ತಾರ ಮನೋಹರ್ ಕುಮಾರ್ ಇಳಂತಿಲ, ಯುವ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ನಗರ ಘಟಕದ ಮಹಿಳಾ ಅಧ್ಯಕ್ಷೆ ವಂದನಾ, ಪ್ರಧಾನ ಕಾರ್ಯದರ್ಶಿ ಸೌಮ್ಯ ಪುದ್ದೋಟ್ಟು ಇದ್ದರು.

error: Content is protected !!