ಬೆಳ್ತಂಗಡಿ: ಅರುಣಾಚಲ ಪ್ರದೇಶದ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಅಧಿಕಾರಿಗಳ ಸುಮಾರು 30 ಜನರ ತಂಡ ಜೂನ್ 23 ರಂದು ಉಜಿರೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಮಾಹಿತಿಗಳನ್ನು ಪಡೆದುಕೊಳ್ಳಲಿದೆ.ಉಜಿರೆಯಲ್ಲಿರುವ ಕಸ ವಿಲೇವಾರಿ ಘಟಕ ಹಾಗೂ ಕಸವನ್ನು ಯಂತ್ರಗಳ ಮೂಲಕ ಮರು ಬಳಕೆ ಮಾಡಿ ಅದರಿಂದ ವಿವಿಧ ರೀತಿಯ ಅದಾಯ ಪಡೆಯುವಂತಹ ವಸ್ತುಗಳ ತಯಾರಿ ಹಾಗೂ ಅಚ್ಚುಕಟ್ಟಾದ ಕಸ ವಿಲೇವಾರಿ ಘಟಕ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲೆಡೆ ಪ್ರವಾಸ ಕೈಗೊಂಡಿರುವ ಈ ತಂಡ ಉಜಿರೆ ಗ್ರಾಮ ಪಂಚಾಯಿತಿಗೂ ಭೇಟಿ ನೀಡಲಿದೆ. ಅಧ್ಯಯನ ಪ್ರವಾಸದಲ್ಲಿ ಬರುವ ತಂಡ ಕರ್ನಾಟಕದಲ್ಲಿನ ಪಂಚಾಯತ್ ರಾಜ್ ವ್ಯವಸ್ಥೆ , ಸಂಸ್ಥೆಗಳ ಯೋಜನೆ ರೂಪಣೆ ಮತ್ತು ಮೇಲ್ವಿಚಾರಣೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯಕ್ರಮ ಮತ್ತು ಯೋಜನೆಗಳ ಅನುಷ್ಟಾನ, ವಿನೂತನ ಚಟುವಟಿಕೆಗಳು,ಇತ್ಯಾದಿಗಳ ಬಗ್ಗೆ ತಿಳಿದುಕೊಳ್ಳುವ ಮತ್ತು ಸೂಕ್ತವಾದವುಗಳನ್ನು ಅನುಕರಣೆ ಮಾಡುವ ಉದ್ಧೇಶದಿಂದ ಪ್ರವಾಸ ಹಮ್ಮಿಕೊಳ್ಳಲಾಗಿದೆ. ಉಜಿರೆಗೆ ಆಗಮಿಸುವ ತಂಡ ಜಿ.ಪಿ.ಡಿ.ಪಿ,ಸ್ಥಾಯಿ ಸಮಿತಿ,ಘನ ತ್ಯಾಜ್ಯ ವಿಲೇವಾರಿ ಬಗ್ಗೆ ಚರ್ಚೆ ನಡೆಸಲಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ತಿಳಿಸಿದ್ದಾರೆ.