ಬೆಳ್ತಂಗಡಿ: ಮುಗೇರಡ್ಕ ಏತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಬೆಳ್ತಂಗಡಿ ರಾಜ್ಯ ಹೆದ್ದಾರಿ ರಸ್ತೆ ಬದಿಯಲ್ಲಿ ಮಾಡುತ್ತಿರುವ ಪೈಪ್ ಲೈನ್ ಕಾಮಗಾರಿಯನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಮಳೆಗಾಲ ಮುಗಿಯುವವರೆಗೆ ತಡೆ ಹಿಡಿಯಬೇಕೆಂದು ಲೋಕೋಪಯೋಗಿ ಇಲಾಖೆಗೆ ನ್ಯಾಯಾವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರೊಬ್ಬರು ಮನವಿ ಮಾಡಿದ್ದಾರೆ.
ಅವರು ನೀಡಿದ ಮನವಿಯಲ್ಲಿ ಲೋಕೋಪಯೋಗಿ ಇಲಾಖೆಯ ಆಧೀನದಲ್ಲಿ ಬರುವ ಉಪ್ಪಿನಂಗಡಿ-ಗುರುವಾಯನಕೆರೆ ರಸ್ತೆಯ ತೀರ ಹತ್ತಿರದಲ್ಲಿ ಮಳೆಗಾಲದ ಈ ದಿನಗಳಲ್ಲಿ ಹೊಂಡ ತೋಡಿ ಮುಗೆರಡ್ಕ ಏತ ನೀರಾವರಿ ಯೋಜನೆಗೆ ಸಂಬಂಧಿಸಿದ ಪೈಪ್‍ಲೈನ್ ಗಳನ್ನು ಹಾಕುತ್ತಿದ್ದು ಇದರಿಂದಾಗಿ ಸಾರ್ವಜನಿಕರು, ವಾಹನ ಸವಾರರು ಜೀವವನ್ನು ಕೈಯಲ್ಲಿ ಇಟ್ಟುಕೊಂಡು ಸಾಗಬೇಕಾದ ಪರಿಸ್ಥಿತಿ ಉಂಟಾಗಿರುತ್ತದೆ. ಇಳಂತಿಲ, ಮೊಗ್ರು ಗ್ರಾಮದ ಗ್ರಾಮೀಣ ರಸ್ತೆಗಳನ್ನು ಹಾಳು ಮಾಡಿ ರಸ್ತೆಯ ತೀರ ಬದಿಯಲ್ಲಿ ಮಣ್ಣು ಅಗೆದ ಪರಿಣಾಮ ಮಳೆಯಿಂದಾಗಿ ಅಗೆದ ಮಣ್ಣು ರಸ್ತೆಯಲ್ಲಿ ಪಸರಿಸಿ ಪುಟಾಣಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಈಗಾಗಲೇ ಸಂಬಂಧಪಟ್ಟ ಬೃಹತ್ ನೀರಾವರಿ ಯೋಜನೆಯ ಇಂಜಿನಿಯರ್ ರವರ ಗಮನಕ್ಕೆ ತಂದರೂ ಅವರು ಇದುವರೆಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.ಇದೀಗ ಉಪ್ಪಿನಂಗಡಿ-ಗುರುವಾಯನಕೆರೆ ರಸ್ತೆಯಲ್ಲಿ ರಸ್ತೆಯಿಂದ 3.50 ಮೀಟರ್ ಬಿಟ್ಟು ಪೈಪ್ ಲೈನ್ ಅಳವಡಿಸಬೇಕೆಂಬ ನಿಯಮವಿದ್ದರೂ ಅದನ್ನು ಗಾಳಿಗೆ ತೂರಿ, ತೀರಾ ಅವೈಜ್ಞಾನಿಕವಾಗಿ ಸುರಿಯುವ ಮಳೆಯ ಮದ್ಯೆ ನಿರಂತರವಾಗಿ ಕಾಮಗಾರಿ ನಡೆಸುತ್ತಿದ್ದಾರೆ. ಇದರಿಂದಾಗಿ ಈ ವರ್ಷದ ಮಳೆಗಾಲದಲ್ಲಿ ಸದ್ರಿ ರಸ್ತೆಯ ಮೂಲಕ ಸಂಚರಿಸುವುದು ತೀರ ಕಷ್ಠ ಮತ್ತು ಅಪಾಯಕರ.ಆದುದರಿಂದ ತಾವು ಸಾರ್ವಜನಿಕರ ಜೀವದ ಹಿತದೃಷ್ಠಿಯಿಂದ ಈ ಬಗ್ಗೆ ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಮಳೆಗಾಲ ಮುಗಿಯುವ ತನಕ ಸದ್ರಿ ಕಾಮಗಾರಿಯನ್ನು ತಡೆಹಿಡಿಯಬೇಕಾಗಿ ವಕೀಲ ಸಾಮಾಜಿಕ ಕಾರ್ಯಕರ್ತರಾದ ಮನೋಹರ್ ಕುಮಾರ್ ಇಳಂತಿಲ ಇಲಾಖೆಗೆ ಮನವಿ ಮಾಡಿದ್ದಾರೆ.