ಪರಿಸರವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ: ಪ್ರಕೃತಿಯ ಸಮತೋಲನ ಕಾಪಾಡುವ ಕಾಡು ಪ್ರಾಣಿಗಳನ್ನು ರಕ್ಷಿಸಬೇಕು: ಡಾ. ಡಿ. ವೀರೇಂದ್ರ ಹೆಗ್ಗಡೆ ಬೆಳಾಲು ಬೈಪಾಡಿ ರಕ್ಷಿತಾರಣ್ಯದಲ್ಲಿ ಬಿತ್ತೋತ್ಸವ ಕಾರ್ಯಕ್ರಮ

 

 

ಬೆಳ್ತಂಗಡಿ:ಪರಿಸರವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆಯಾಗಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರಾಜ್ಯಾದ್ಯಂತ 10ಲಕ್ಷ ಗಿಡಗಳನ್ನು ನಾಟಿ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿದ್ದು 35ಲಕ್ಷ ರೂ. ಅನುದಾನ ಮೀಸಲಿರಿಸಲಾಗಿದೆ. ಅರಣ್ಯ ಸಂರಕ್ಷಣೆಗೆ ವಿಪತ್ತು ನಿರ್ವಹಣೆ ಘಟಕದ ಸದಸ್ಯರು ಪೂರ್ಣ ಸಹಕಾರ ನೀಡಲಿದ್ದಾರೆ.ಅರಣ್ಯ ಇಲಾಖೆಯು ಇದಕ್ಕೆ ಉತ್ತಮ ಬೆಂಬಲವನ್ನು ನೀಡುತ್ತಿದೆ ಎಂದು
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ‌ ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ಪ್ರಾದೇಶಿಕ ಅರಣ್ಯ ವಿಭಾಗ,ಉಪ್ಪಿನಂಗಡಿ ವಲಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ,ಧರ್ಮಸ್ಥಳ, ಜನಜಾಗೃತಿ ಮತ್ತು ಕೃಷಿ ಪ್ರಾದೇಶಿಕ ವಿಭಾಗ ಮತ್ತು ಗ್ರಾಮ ಅರಣ್ಯ ಸಮಿತಿ ಬೆಳಾಲು ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪರಿಸರ ಸಂರಕ್ಷಣೆಯ ಮಹತ್ವಾಕಾಂಕ್ಷೆಯ ಯೋಜನೆಗೆ ಅರಣ್ಯದಲ್ಲಿ ಕಾಡು ಪ್ರಾಣಿಗಳಿಗಾಗಿ ಹಣ್ಣು ಹಂಪಲುಗಳ ಗಿಡಗಳನ್ನು ಬೆಳೆಸುವ ಉದ್ದೇಶದೊಂದಿಗೆ ಜೂ.8 ರಂದು‌ ಬಂದಾರು ಗ್ರಾಮದ ಬೆಳಾಲು‌ ಬೈಪಾಡಿ ದಡಂತಮಲೆ ರಕ್ಷಿತಾರಣ್ಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿತ್ತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

 

 

ಪ್ರಕೃತಿಯ ಸಮತೋಲವನ್ನು ಕಾಪಾಡುವ ಕಾಡುಪ್ರಾಣಿಗಳನ್ನು ರಕ್ಷಿಸಬೇಕು. ಕೃಷಿ ಕಾರ್ಯಗಳಿಗೆ ಕಾಡಿನಿಂದ ವಸ್ತುಗಳನ್ನು ಸಂಗ್ರಹಿಸುವಾಗ ಅವುಗಳ ಬೆಳವಣಿಗೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಪರಿಸರ ಸಂರಕ್ಷಣೆಗೆ ಸಮಾಜ ಪಣತೊಟ್ಟು ಕೆಲಸ ಮಾಡಿದರೆ ಅದು ಮುಂದಿನ ಪೀಳಿಗೆಗೆ ಉತ್ತಮ ಕೊಡುಗೆಯಾಗುತ್ತದೆ. ಮಣ್ಣಿನ ಸವಕಳಿಯಿಂದ ತೊಂದರೆಗಳು ಉದ್ಭವಿಸಲು ಅರಣ್ಯನಾಶ ಕಾರಣ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ‌ ಹರೀಶ್ ಪೂಂಜ ಮಾತನಾಡಿ ಡಾ.ಡಿ. ಹೆಗ್ಗಡೆಯವರ ಪರಿಸರ ಸಂರಕ್ಷಣೆ ಕುರಿತ ಮುಂಜಾಗೃತೆ ಎಲ್ಲರಿಗೂ ಮಾದರಿ ಅವರ ಪ್ರೇರಣೆ, ಮಾರ್ಗದರ್ಶನದಲ್ಲಿ ಅರಣ್ಯವನ್ನು ಬೆಳೆಸಿ, ರಕ್ಷಿಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಹೇಳಿದರು.
ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ ಎಸ್.ನೆಟಲ್ ಕರ್, ಉಪ ಸಂರಕ್ಷಣಾಧಿಕಾರಿ
ಡಾ. ವೈ.ಕೆ ದಿನೇಶ್‌ ಕುಮಾರ್‌, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಲ್.ಎಚ್ , ಮಂಜುನಾಥ್, ಬಂದಾರು ಗ್ರಾ.ಪಂ. ಅಧ್ಯಕ್ಷೆ ಪರಮೇಶ್ವರಿ ಕೆ . ಗೌಡ, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಗಂಗಾಧರ ಗೌಡ, ಬಂದಾರು ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ ಗೌಡ ಉಪಸ್ಥಿತರಿದ್ದರು.
ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಎ ಮಧುಸೂಧನ್, ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಿಸ್ ಉಪಸ್ಥಿತರಿದ್ದರು
ಪುತ್ತೂರು ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಪಿ.ಕಾರ್ಯಪ್ಪ ಸ್ವಾಗತಿಸಿದರು.ವಿಪತ್ತು ನಿರ್ವಹಣ ಘಟಕದ ಜೈವಂತ್ ಪಟಗಾರ್ ಕಾರ್ಯಕ್ರಮ ನಿರೂಪಿಸಿದರು.

ಕಳೆದ 40 ವರ್ಷಗಳಿಂದ ಪರಿಸರ ಸಂರಕ್ಷಣೆ ಬಗ್ಗೆ ನಾನಾ ಯೋಜನೆಗಳನ್ನು ಡಾ.ಡಿ.ಹೆಗ್ಗಡೆಯವರು ಹಮ್ಮಿಕೊಂಡಿದ್ದಾರೆ. ಕಳೆದ ವರ್ಷ ಚಾರ್ಮಾಡಿ ಅರಣ್ಯ ಭಾಗದಲ್ಲಿ ಗಿಡಗಳ ನಾಟಿಯನ್ನು ಮಾಡಲಾಗಿತ್ತು. ಕಾಡು ಪ್ರಾಣಿಗಳ ಆಹಾರಕ್ಕಾಗಿ ಸಾವಿರಾರು ಹಣ್ಣುಹಂಪಲುಗಳ ಗಿಡಗಳನ್ನು ಕಾಡಿನ ನಾನಾ ಭಾಗಗಳಲ್ಲಿ ನಾಟಿ ಮಾಡಲಾಗಿದೆ. ಈ ಬಾರಿ ಜೂ.5ರಂದು ರಾಜ್ಯದ 175 ತಾಲೂಕುಗಳ 875 ಸ್ಥಳಗಳಲ್ಲಿ 1,81,000 ಗಿಡಗಳನ್ನು ನೆಡಲಾಗಿದೆ. ಪುನಶ್ಚೇತನಗೊಂಡ ಕೆರೆಗಳ ಆಸುಪಾಸು ಹಣ್ಣು-ಹಂಪಲು ಗಿಡಗಳನ್ನು ಬೆಳೆಸಲಾಗುತ್ತಿದೆ.

ಉಜಿರೆ ಎಸ್ ಡಿಎಂ ಕಾಲೇಜಿನ ಎನ್ನೆಸ್ಸೆಸ್ ವಿದ್ಯಾರ್ಥಿಗಳು, ಪೆರ್ಲ ಬೈಪಾಡಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು, ಒಕ್ಕೂಟಗಳ ಸದಸ್ಯರು ಗ್ರಾಮಸ್ಥರು ಶೌರ್ಯ ವಿಪತ್ತು ತಂಡದ ಸದಸ್ಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ಸಹಕರಿಸಿದರು.
ಇತ್ತೀಚೆಗೆ ನಿಧನರಾದ ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ. ಯಶೋವರ್ಮ ಅವರು ಸಂಗ್ರಹಿಸಿದ್ದ ಅನೇಕ ಜಾತಿಯ ಬೀಜಗಳನ್ನು ಬಿತ್ತೋತ್ಸವ ಕಾರ್ಯಕ್ರಮದಲ್ಲಿ ಬಳಸಿಕೊಳ್ಳಲಾಯಿತು.
24 ಜಾತಿಯ ಗಿಡಗಳ ಬೀಜಗಳನ್ನು ಸಂಗ್ರಹಿಸಿದ ವಿದ್ಯಾರ್ಥಿನಿ ಪಲ್ಲವಿ, 18 ಜಾತಿಯ ಬೀಜಗಳನ್ನು ಸಂಗ್ರಹಿಸಿದ ವಿದ್ಯಾರ್ಥಿ ಶ್ರವಣಕುಮಾರ್ ಹಾಗೂ 17 ಜಾತಿಯ ಬೀಜಗಳನ್ನು ಸಂಗ್ರಹಿಸಿದ ವಿದ್ಯಾರ್ಥಿನಿ ನಿಖಿತಾ ಇವರಿಗೆ ಅರಣ್ಯ ಇಲಾಖೆಯ ವತಿಯಿಂದ ಬಹುಮಾನ ಘೋಷಿಸಲಾಯಿತು.

error: Content is protected !!