ಚಿಂತನೆಗಳನ್ನು ಸದ್ವಿನಿಯೋಗ ಮಾಡಿದಾಗ ಶ್ರೇಷ್ಠ ವ್ಯಕ್ತಿಗಳಾಗಲು ಸಾಧ್ಯ ಶಿಕ್ಷಣಕ್ಕೆ ನೆರವು ನೀಡಿದಾಗ ಆತ್ಮ ತೃಪ್ತಿ :ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸಭಾ ಭವನದಲ್ಲಿ ಗುರುವಂದನಾ ಕಾರ್ಯಕ್ರಮ

 

 

ಬೆಳ್ತಂಗಡಿ :ಪ್ರತಿಯೊಬ್ಬರಲ್ಲಿಯೂ ಶ್ರೇಷ್ಠವಾದ ಚಿಂತನೆಗಳಿದ್ದು ಆ ಚಿಂತನೆಗಳನ್ನು ಸದ್ವಿನಿಯೋಗ ಮಾಡಿದಾಗ ಶ್ರೇಷ್ಠ ವ್ಯಕ್ತಿಗಳಾಗಲು ಸಾಧ್ಯ. ನಾರಾಯಣ ಗುರುಗಳ ತತ್ವ, ಆದರ್ಶವನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು. ಅವರ ಚಿಂತನೆಗಳನ್ನು ತಿಳಿಸುವ ಕಾರ್ಯವನ್ನು ಸಮಾಜ ಸೇವಾ ಸಂಸ್ಥೆಗಳು ಮಾಡಬೇಕಾಗಿದೆ. ಸಂಘಟನೆಗಳು ಶಿಕ್ಷಣಕ್ಕೆ ನೆರವು ನೀಡುವ ಕಾರ್ಯವನ್ನು ಮಾಡಬೇಕು ಶಿಕ್ಷಣಕ್ಕೆ ನೀಡುವ ಸೇವೆಗಿಂತ ದೊಡ್ಡ ಸೇವೆ ಯಾವುದೂ ಇಲ್ಲ ಎಂದು ಸೋಲೂರು ಮಹಾಸಂಸ್ಥಾನದ ಪೀಠಾಧಿಪತಿಗಳಾಗಿರುವ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿಯವರು ನುಡಿದರು.
ಅವರು ಭಾನುವಾರ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ, ಯುವ ಬಿಲ್ಲವ ವೇದಿಕೆ, ಬಿಲ್ಲವ ಮಹಿಳಾ ವೇದಿಕೆ ಬೆಳ್ತಂಗಡಿ ಇವರ ಜಂಟಿ ಆಶ್ರಯದಲ್ಲಿ ಯುವ ವಾಹಿನಿ ಬೆಳ್ತಂಗಡಿ, ಯುವವಾಹಿನಿ ವೆಣೂರು ಘಟಕ ಮತ್ತು ತಾಲೂಕಿನ ಬಿಲ್ಲವ ಸಂಘದ ಗ್ರಾಮ ಸಮಿತಿಗಳ ಸಹಯೋಗದೊಂದಿಗೆ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸಭಾಭವನದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಾ

ಶಿಕ್ಷಣಕ್ಕೆ ನೆರವು ನೀಡಿದಾಗ ಆತ್ಮ ತೃಪ್ತಿ ಆಗುತ್ತದೆ. ನಾನು ನಾರಾಯಣ ಗುರುಗಳ ಚಿಂತನೆಗಳನ್ನು ಅಳವಡಿಸಿಕೊಂಡು 36 ವರ್ಷಗಳ ಕಾಲ ಸನ್ಯಾಸತ್ವ ಜೀವನದಲ್ಲಿ ಸಹಸ್ರಾರು ಸಂಖ್ಯೆಯ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಶಿಕ್ಷಣವನ್ನು ಕೊಡುವ ಸೇವೆಯನ್ನು ಮಾಡಿದ್ದೇನೆ. ಇದೀಗ ನಾರಾಯಣ ಗುರುಗಳ ಅನುಗ್ರಹದಿಂದ ಸಮಾಜ ಬಾಂಧವರ ಪ್ರೀತಿ, ಅಭಿಮಾನದಿಂದ ಈಡಿಗ ಮಹಾ ಸಂಸ್ಥಾನದ ಪೀಠಾಧಿಪತಿಯಾಗುವ ಯೋಗ ಬಂದಿದ್ದು ಇಲ್ಲಿಂದ ಹಿಂದೆ ಮಾಡಿದ ದೇವೆಗಿಂತ ಹೆಚ್ಚಿನ ಸೇವೆಯನ್ನು ಶಿಕ್ಷಣಕ್ಕಾಗಿ ಮಾಡುತ್ತೇನೆ. ಈ ಮೂಲಕ ಸಮಾಜವನ್ನು ಉನ್ನತ ಮಟ್ಟಕ್ಕೇರಿಸಲು ಶ್ರಮಿಸುತ್ತೇನೆ. ಶಿಕ್ಷಣ ಸೇವೆಗಾಗಿ ಮುಂದಿನ ದಿನಗಳಲ್ಲಿ ಎರಡು ಲಕ್ಷಕ್ಕೂ ಅಧಿಕ ಮಂದಿಯನ್ನು ಸದಸ್ಯತ್ವ ಮಾಡಿ ದಿನಕ್ಕೊಂದು ರೂಪಾಯಿ ಶಿಕ್ಷಣಕ್ಕಾಗಿ ಮೀಸಲಿಡಿ ಎಂಬ ಧ್ಯೇಯದೊಂದಿಗೆ ಶಿಕ್ಷಣಕ್ಕೆ ನೆರವು ನೀಡುವ ನಿಧಿ ಸಂಗ್ರಹಿಸಿ ಶಿಕ್ಷಣ ನೆರವು ನೀಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

 

ಮಾಜಿ ಶಾಸಕ ವಸಂತ ಬಂಗೇರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಆರ್ಯ ಈಡಿಗ ಸಮಾಜದಲ್ಲಿ 26 ಪಂಗಡವಿದ್ದು ಇದರಲ್ಲಿ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿಗಳಿಗೆ ಪೀಠಾಧೀಶರಾಗುವ ಭಾಗ್ಯ ಒದಗಿದ್ದು ನಮಗೆ ಸಿಕ್ಕಿರುವ ದೊಡ್ಡ ಭಾಗ್ಯವಾಗಿದೆ. ಶ್ರೀಗಳು ಬಿಲ್ಲವ ಸಮಾಜವನ್ನು ಎತ್ತರಕ್ಕೆ ಬೆಳೆಸುವ ಕಾರ್ಯ ಮಾಡಬೇಕು ಸಮಾಜವನ್ನು ಒಗ್ಗೂಡಿಸಬೇಕು ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘವು ಹಿಂದಿನಿಂದಲೂ ಆದಾಯದ ಹೆಚ್ಚು ಭಾಗವನ್ನು ಶಿಕ್ಷಣಕ್ಕೆ ವಿನಿಯೋಗಿಸುತ್ತಿದ್ದು ಮುಂದೆಯೂ ಇದನ್ನು ಮುಂದುವರೆಸುವ ಚಿಂತನೆ ನಮ್ಮದು. ಶಿಕ್ಷಣ ನೆರವು ಪಡೆದ ವಿದ್ಯಾರ್ಥಿಗಳು ಉನ್ನತ ವ್ಯಾಸಾಂಗ ಪಡೆದು ಶ್ರೇಷ್ಠ ವ್ಯಕ್ತಿಗಳಾಗಬೇಕು ಎಂದರು.

 

 

ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕ ಡಾ. ಯೋಗೀಶ್ ಕೈರೋಡಿ ಗುರುವಂದನಾ ಭಾಷಣ ಮಾಡಿ ವಿಖ್ಯಾತಾನಂದ ಶ್ರೀಗಳು ನಾರಾಯಣ ಗುರುಗಳ ಚಿಂತನೆಯನ್ನು ಮೈಗೂಡಿಸಿಕೊಂಡು ಅವರ ಬಗ್ಗೆ ಆಳವಾದ ಅಧ್ಯಾಯನವನ್ನು ನಡೆಸಿ ಅವರ ವಿಚಾರಗಳನ್ನು ಸಮಾಜಕ್ಕೆ ಧಾರೆಎರೆದವರು. ಅವರು ಪ್ರತಿಯೊಂದು ಚಿಂತನೆಗಳು ನಾರಾಯಣ ಗುರುಗಳಂತೆ ಶಿಕ್ಷಣ ಸೇವೆಯೇ ಮುಖ್ಯ ಎಂಬುದನ್ನು ಚಿಂತಿಸಿ ಶಿಕ್ಷಣಕ್ಕೆ ದೊಡ್ಡ ಕೊಡುಗೆಯನ್ನು ನೀಡುತ್ತಿರುವವರು. ಶ್ರೀಗಳಂತೆ ಪ್ರತಿಯೊಂದೂ ಬಿಲ್ಲವ ಸಂಘದನೆಗಳು ನಾರಾಯಣ ಗುರುಗಳ ಪರಿಕಲ್ಪನೆಯಲ್ಲಿ ಸಮಾಜವನ್ನು ಕಟ್ಟುವ ಕಾರ್ಯ ಮಾಡಬೇಕು ಎಂದರು.
ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

 

 

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಂದ ಚಿನ್ನದ ಪದಕ ಪಡೆದ ಗೃಹರಕ್ಷಕ ದಳದ ಘಟಕಾಧಿಕಾರಿ ಜಯಾನಂದ ಲಾಯಿಲ, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಪೂರ್ಣ ಅಂಕ ಪಡೆದ ರೋಶನ್, ಸಾಧಕ ವಿದ್ಯಾರ್ಥಿಗಳಾದ ಸಂಪದ ಕೆ.ಎಸ್, ಯಶ್ಮಿತಾ ಕೆ ಮತ್ತು ಹರ್ಷಿತಾ ಅವರನ್ನು ಅಭಿನಂದಿಸಲಾಯಿತು.ಎಸ್‌ಎಸ್‌ಎಲ್‌ಸಿಯಲ್ಲಿ 600ಕ್ಕೂ ಅಧಿಕ ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಿಡಲಾಯಿತು. ಬಲಿಷ್ಠ ಬಿರ್ವೆರ್ ತಂಡದ ಅವಳಿ ಜವಳಿ ಸಮಾಜ ಸೇವಕರಾದ ಸನತ್ ಅಂಚನ್, ಮತ್ತು ಸಂಪತ್ ಅಂಚನ್‌ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಬಿಜೆಪಿ ಮಂಡಲದ ಅಧ್ಯಕ್ಷ ಜಯಂತ ಕೋಟ್ಯಾನ್, ಶ್ರೀ ಗುರುದೇವ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಮಾಣಿಂಜ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಕುಮಾರ್ ಕುರ್ತೋಡಿ, ಧರ್ಮವಿಜೇತ್ ಬೆಂಗಳೂರು ಉಪಸ್ಥಿತರಿದ್ದರು.
ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಉಪಾಧ್ಯಕ್ಷ ಮನೋಹರ ಕುಮಾರ್ ಇಳಂತಿಲ, ಹಾಲಿ ನಿರ್ದೇಶಕ ರಂಜಿತ್ ಹೆಚ್ ಡಿ, ಗುರುದೇವ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವಥ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಯುವ ಬಿಲ್ಲವ ವೇದಿಕೆ ಅಧ್ಯಕ್ಷ ನಿತೇಶ್ ಕೋಟ್ಯಾನ್ ವಂದಿಸಿದರು. ಗುರುನಾರಾಯಣ ಸ್ವಾಮಿ ಸೇವಾ ಸಂಘದ ಪ್ರ.ಕಾರ್ಯದರ್ಶಿ ಜಯವಿಕ್ರಂ ಕಲ್ಲಾಪು ಸ್ವಾಗತಿಸಿದರು.
ಸಮಾರಂಭಕ್ಕೂ ಮುನ್ನ ವಿಖ್ಯಾತಾನಂದ ಸ್ವಾಮೀಜಿಯವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಬಳಿಕ ನಾರಾಯಣ ಗುರುಗಳ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

error: Content is protected !!