ಬೆಳ್ತಂಗಡಿ:ಕರ್ನಾಟಕ ರಾಜ್ಯದ ಮಾಜಿ ಶಾಸಕ , ಸಿಪಿಐ(ಎಂ) ಮಾಜಿ ರಾಜ್ಯ ಕಾರ್ಯದರ್ಶಿ , ರೈತ ಕಾರ್ಮಿಕರ ಧ್ವನಿಯಾಗಿದ್ದ ಜಿ.ವಿ ಶ್ರೀರಾಮ ರೆಡ್ಡಿ ಅವರ ನಿಧನ ಶೋಷಿತ ವರ್ಗಕ್ಕೆ ಧ್ವನಿ ಇಲ್ಲದವರಿಗೆ ತುಂಬಲಾರದ ನಷ್ಟ ಎಂದು ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿ ಸಂತಾಪ ಸೂಚಿಸಿದೆ.
ಇಡೀ ರಾಜ್ಯ ಕಂಡ ಅತ್ಯುತ್ತಮ ಸಂಸದೀಯ ನಾಯಕ , ಹೋರಾಟಗಾರನನ್ನು ರಾಜ್ಯ ಕಳೆದುಕೊಂಡಿದೆ. ಆದಿ ಉಡುಪಿ ಬೆತ್ತಲೆ ಪ್ರಕರಣ , ಮಂಗಳೂರಿನ ಪಬ್ ಧಾಳಿ , ಹೋಂಸ್ಟೇ ಧಾಳಿ , ಚರ್ಚ್ ಧಾಳಿ , ಮಡೆಮಡೆಸ್ನಾನ , ಪಂಕ್ತಿಭೇದ , ದೇವಸ್ಥಾನ ಪ್ರವೇಶ , ಕಂಬಾಲಪಳ್ಳಿ ದಲಿತರ ಹತ್ಯಾಕಾಂಡ ಸೇರಿದಂತೆ ದಲಿತ, ಆದಿವಾಸಿಗಳ ಮೇಲಿನ ದೌರ್ಜನ್ಯಗಳ ವಿರುದ್ಧ ಅತ್ಯಂತ ಪ್ರಬಲವಾದ ಹೋರಾಟ ನಡೆಸಿದ್ದ ಅವರ ಹೋರಾಟವನ್ನು ಕರ್ನಾಟಕ ಮರೆಯಲು ಸಾಧ್ಯವಿಲ್ಲ ಎಂದು ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ, ನ್ಯಾಯವಾದಿ ಶಿವಕುಮಾರ್ ಎಸ್. ಎಂ ಹೇಳಿದ್ದಾರೆ. ಬೆಳ್ತಂಗಡಿ ತಾಲೂಕಿನ ಸಿಪಿಐ(ಎಂ) ಪಕ್ಷದ ಸದಸ್ಯರಾಗಿದ್ದ ವಿಠ್ಠಲ ಮಲೆಕುಡಿಯ ಪ್ರಕರಣ , ಸೌಜನ್ಯ ಅತ್ಯಾಚಾರ, ಕೊಲೆ , ನೆರಿಯ ಸುಂದರ ಮಲೆಕುಡಿಯ ಪ್ರಕರಣಗಳಲ್ಲಿ ರಾಷ್ಟ್ರಮಟ್ಟದಲ್ಲಿ ಹೋರಾಟ ನಡೆಯಲು ಜಿವಿಎಸ್ ಅವರ ಶ್ರಮವನ್ನು ಮರೆಯಲು ಸಾಧ್ಯವಿಲ್ಲ. ಕೋಮುವಾದದ್ದ ವಿರುದ್ಧ ಗಟ್ಟಿ ಧ್ವನಿಯಾಗಿದ್ದ ರೆಡ್ಡಿ ಅವರು ಜಾತ್ಯತೀತ ಶಕ್ತಿಗಳ ಸಂಘಟನೆಗಾಗಿ ವಿಶೇಷ ಒತ್ತು ನೀಡುತ್ತಿದ್ದರು. ಅವರ ನಿಧನ ಪ್ರಜಾಪ್ರಭುತ್ವ , ಜನಪರ , ರೈತ ಕಾರ್ಮಿಕರ ಚಳವಳಿಗೆ ತುಂಬಲಾರದ ನಷ್ಟ. ಜಿವಿಎಸ್ ಅವರ ಹೋರಾಟವನ್ನು ಮುಂದುವರಿಸುವ ಮೂಲಕ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ತೀರ್ಮಾನಿಸಿದ್ದೇವೆ ಎಂದು ಶಿವಕುಮಾರ್ ಎಸ್. ಎಂ ತಿಳಿಸಿದ್ದಾರೆ.