ಬೆಳ್ತಂಗಡಿ: ವಿದ್ಯಾರ್ಥಿಗಳಿಗೆ ಸಮಸ್ಯೆ ಇರುವ ಪ್ರದೇಶಗಳಲ್ಲಿ ಟ್ರಿಪ್ ಗಳನ್ನು ಹೆಚ್ಚಿಸಬೇಕು ಗ್ರಾಮೀಣ ಪ್ರದೇಶಗಳಲ್ಲಿ ಸಂಪರ್ಕ ಸಮಸ್ಯೆ ಉಂಟಾಗದಂತೆ ಸಮೀಕ್ಷೆಗಳನ್ನು ನಡೆಸಿ ಸಂಚಾರ ವ್ಯವಸ್ಥೆ ಸರಿಪಡಿಸುವಲ್ಲಿ ಯೋಜನೆ ರೂಪಿಸುವಂತೆ ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಸೋಮವಾರ ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆದ ಕೆ.ಎಸ್.ಆರ್.ಟಿ.ಸಿ.ಜನಸ್ಪಂದನ ಹಾಗೂ ಸಾರ್ವಜನಿಕ ಅಹವಾಲು ಸ್ವೀಕಾರ ಮತ್ತು ಮಾಹಿತಿ ಕಾರ್ಯಗಾರದಲ್ಲಿ ಮಾತನಾಡಿದರು.
ಮುಂದಿನ 15 ದಿನಗಳೊಳಗೆ ಸಭೆಯಲ್ಲಿ ಬಂದ ವಿಚಾರಗಳ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ನೀಡಿ ಇನ್ನೊಂದು ಸುತ್ತಿನ ಸಭೆಯನ್ನು ನಡೆಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಮೇಲಂತಬೆಟ್ಟು ಸಮೀಪದ ಪಕ್ಕಿದಕಲ ಪ್ರದೇಶದಲ್ಲಿ ಬಸ್ ಡಿಪೋ ನಿರ್ಮಿಸಲು ಸ್ಥಳ ಗುರುತಿಸಲಾಗಿದೆ. ಇದರ ಕಾನೂನಾತ್ಮಕ ಪ್ರಕ್ರಿಯೆ ಮುಗಿದ ಕೂಡಲೇ ಕೆಎಸ್ ಆರ್ ಟಿಸಿ ಗೆ ಈ ಜಾಗವನ್ನು ಹಸ್ತಾಂತರಿಸಲಾಗುವುದು ಎಂದು ಹೇಳಿದರು.
ಬೆಳ್ತಂಗಡಿಯಿಂದ ಕಕ್ಕಿಂಜೆ ಮೂಲಕ ನೆರಿಯಕ್ಕೆ ಬರುವ ಕೆಲವು ಬಸ್ ಗಳನ್ನು ಕಾಯರ್ತಡ್ಕ-ಮಿಯಾರು- ಕಳೆಂಜ-ನಿಡ್ಲೆ ಮೂಲಕ ಧರ್ಮಸ್ಥಳಕ್ಕೆ ವಿಸ್ತರಿಸಬೇಕು ಎಂಬ ವಿಚಾರವನ್ನು ಕಳೆಂಜ ಗ್ರಾಪಂ ಅಧ್ಯಕ್ಷ ಪ್ರಸನ್ನ ಸಭೆಯ ಗಮನಕ್ಕೆ ತಂದರು.
ಬೆಳ್ತಂಗಡಿ-ಮೂಡಬಿದ್ರೆ, ಬೆಳ್ತಂಗಡಿ-ನಾರಾವಿ ರಸ್ತೆಯಲ್ಲಿ ಗ್ರಾಮಾಂತರ ಸಾರಿಗೆ ಬಸ್ ಗಳನ್ನು ಓಡಿಸಬೇಕು ಎಂದು ಎಬಿವಿಪಿ ಕಾರ್ಯಕರ್ತರು ತಿಳಿಸಿದರು.
ಕೆಲವು ರೂಟ್ ಗಳಲ್ಲಿ ಶಾಲಾ ರಜಾದಿನಗಳಲ್ಲಿ ಬಸ್ ಗಳು ಓಡಾಟ ನಡೆಸದ ಕಾರಣ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವ ಕುರಿತು ಕೊಯ್ಯೂರಿನ ತಾರಾನಾಥ ಗೌಡ ಹೇಳಿದರು.
ಆಲಂತಡ್ಕ ಬಸ್ಸನ್ನು ವಳಂಬ್ರ ತನಕ ವಿಸ್ತರಿಸಬೇಕು, ಧರ್ಮಸ್ಥಳ ಡಿಪೋದಲ್ಲಿ ಮಕ್ಕಳಿಗೆ ಬಸ್ ಪಾಸ್ ನೀಡಲು ಅನಗತ್ಯ ವಿಳಂಬ ಮಾಡಲಾಗುತ್ತಿದೆ, ಪಾಸ್ ವಿತರಿಸುವ ಕೆಲವು ಸಿಬಂದಿಗಳು ವಿದ್ಯಾರ್ಥಿಗಳೊಂದಿಗೆ ಸರಿಯಾಗಿ ಸ್ಪಂದಿಸದೆ ಸತಾಯಿಸುವ ಕುರಿತು ಕಡಿರುದ್ಯಾವರ ಗ್ರಾಪಂ ಅಧ್ಯಕ್ಷ ಅಶೋಕ್ ಕುಮಾರ್,ನವೀನ್ ನೆರಿಯ ಅಧಿಕಾರಿಗಳಿಗೆ ತಿಳಿಸಿದರು.
ಬಸ್ ಗಳಲ್ಲಿ ವಿಶೇಷಚೇತನರು ಹಾಗೂ ಹಿರಿಯ ನಾಗರಿಕರಿಗೆ ಮೀಸಲಾಗಿರುವ ಸೀಟುಗಳಲ್ಲಿ ಸಂಬಂಧಪಟ್ಟವರಿಗೆ ಸ್ಥಳವಕಾಶ ಸಿಗದೆ ತೊಂದರೆ ಉಂಟಾಗುತ್ತಿರುವ ಕುರಿತು ನಾರಾವಿಯ ಡ್ಯಾನಿಯಲ್ ಡಿಸೋಜಾ ಶಾಸಕರಿಗೆ ಮನವಿ ಸಲ್ಲಿಸಿದರು.ಖಾಸಗಿ ಬಸ್ ಗಳ ಜತೆ ಸಾರಿಗೆ ಬಸ್ ಗಳ ಪೈಪೋಟಿ ಕುರಿತು ವಿಜಯಕುಮಾರ್ ಮಾನಸಾ ತಿಳಿಸಿ.
ಖಾಸಗಿ ಬಸ್ಸ್ ಸಂಚಾರಿಸುವ ಸಮಯದಲ್ಲೇ ಸಾರಿಗೆ ಸಂಸ್ಥೆಗಳ ಬಸ್ಸುಗಳು ಸಂಚಾರಿಸುವುದರಿಂದ ತೊಂದರೆಯಾಗುತಿದೆ. ಇದರ ಸಮಯವನ್ನು ಬದಲಾವಣೆ ಮಾಡಬೇಕೆಂದು ಖಾಸಗಿ ಬಸ್ಸ್ ಮಾಲಕ ವಿಜಯ ಕುಮಾರ್ ಮಾನಸ ಶಾಸಕರಲ್ಲಿ ವಿನಂತಿಸಿದರು ಈ ಬಗ್ಗೆ ಅಧಿಕಾರಿಗಳಲ್ಲಿ ಶಾಸಕರು ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಮಾಜಿ ಸೈನಿಕರನ್ನು ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡುವಾಗ ಅವರ ಸೈನ್ಯದ ಸೇವಾವಧಿಯನ್ನು ಕೆ.ಎಸ್ ಆರ್ .ಟಿ.ಸಿ ಯಲ್ಲಿ ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತಿಲ್ಲ ಇದರಿಂದ ನಿವೃತ್ತ ಯೋಧರಿಗೆ ನೇಮಕಾತಿ ಸಮಯ ಅನ್ಯಾಯವಾಗುತ್ತಿರುವ ಕುರಿತು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ದ.ಕ. ಜಿಲ್ಲಾ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್ ಕಾಂಚೋಡು ಅಧಿಕಾರಿಗಳ ಗಮನಕ್ಕೆ ತಂದರು.
ಸುರ್ಯಕ್ಕೆ ಬಸ್ ಆರಂಭಿಸುವಂತೆ ಮನವಿ ಮಾಡಲಾಯಿತು. ಶಿಬಾಜೆ,ಉಪ್ಪಿನಂಗಡಿ, ಕಿಲ್ಲೂರು ಮೊದಲಾದ ಕಡೆ ಅಗತ್ಯ ಸಮಯ ಬಸ್ ಓಡಿಸುವಂತೆ ತಿಳಿಸಲಾಯಿತು.ಬೆಂಗಳೂರಿನಿಂದ ಅರಸಿನಮಕ್ಕಿ ಶಿಶಿಲ ಶಿಬಾಜೆ ಬರುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ರಾತ್ರಿ ಬರುವ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಅವರು ಕೊಕ್ಕಡದಲ್ಲಿ ಅಥವಾ ಗುಂಡ್ಯ ದಲ್ಲಿ ಇಳಿದು ಬೆಳಗ್ಗಿನವರೆಗೆ ಕಾಯಬೇಕು ಅದ್ದರಿಂದ ಬೆಂಗಳೂರಿನಿಂದ ಶಿಬಾಜೆ ಮೂಲಕ ಬಸ್ಸ್ ಸಂಚಾರಿಸಿದರೆ ಆ ಭಾಗದ ಜನರಿಗೆ ಅನುಕೂಲವಾದೀತು ಈ ಬಗ್ಗೆಯೂ ಕ್ರಮ ವಹಿಸುವಂತೆ ಸಭೆಯಲ್ಲಿ ಚರ್ಚಿಸಲಾಯಿತು.
ತಾಲೂಕಿನಾದ್ಯಂತ 6820 ವಿದ್ಯಾರ್ಥಿ ಬಸ್ ಪಾಸ್ ವಿತರಿಸಲಾಗಿದೆ.ಬೆಳ್ತಂಗಡಿಗೆ ಸುಸಜ್ಜಿತ ನೂತನ ಬಸ್ ನಿಲ್ದಾಣಕ್ಕೆ ನೀಲನಕ್ಷೆ ತಯಾರಿಸಲಾಗಿದೆ.ಕೊರೊನಾ ಕಾರಣ ಕಳೆದ ಎರಡು ವರ್ಷಗಳಿಂದ ನೂತನ ಬಸ್ ಖರೀದಿ ಹಾಗೂ ನೇಮಕಾತಿ ಆಗಿಲ್ಲ.ಪುತ್ತೂರು ವಿಭಾಗದಲ್ಲಿ 112 ಚಾಲಕ-ನಿರ್ವಾಹಕರು ವರ್ಗಾವಣೆಯಾಗಿದ್ದು ಸಿಬ್ಬಂದಿ ಕೊರತೆ ಎದುರಾಗಿದೆ.ಲಾಕ್ ಡೌನ್ ಬಳಿಕ ಇದೀಗ ಸಂಸ್ಥೆಯ ಆದಾಯದಲ್ಲಿ ಅಭಿವೃದ್ಧಿ ಆರಂಭವಾಗಿದೆ.ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.
ಪುತ್ತೂರು ವಿಭಾಗದ ಸಂಚಲನಾಧಿಕಾರಿ ಮುರಳೀದರ ಆಚಾರ್ಯ ಪ್ರಯಾಣಿಕರ ಅಹವಾಲುಗಳಿಗೆ ಉತ್ತರ ನೀಡಿದರು.ಕಾರ್ಯಕ್ರಮದಲ್ಲಿ ಉಜಿರೆ ಗ್ರಾ.ಪಂ ಅಧ್ಯಕ್ಷೆ ಪುಷ್ಪವತಿ ಆರ್ ಶೆಟ್ಟಿ ಉಪಸ್ಥಿತರಿದ್ದರು.
ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಜಯ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಅರುಣ್ ಕುಮಾರ್ ವಂದಿಸಿದರು. ತಾಪಂ ಸಂಯೋಜಕ ಜಯಾನಂದ ಲಾಯಿಲ ನಿರೂಪಿಸಿದರು.