ಬೆಳ್ತಂಗಡಿ: ಜಿಲ್ಲೆಯ ಹಲವೆಡೆ ಉತ್ತಮ ಬರಹಗಾರರು, ಸಾಹಿತಿಗಳು ಇದ್ದಾರೆ. ಅವರನ್ನು ಗುರುತಿಸಿ, ಅವರ ಸಾಹಿತ್ಯದ ಬಗ್ಗೆ ಮತ್ತು ಅವರ ಕನ್ನಡಾಭಿಮಾನವನ್ನು ಮನೆ ಮನೆಗೆ ತಲುಪಿಸುವ ಪ್ರಯತ್ನ ಮಾಡಲು ಅವಕಾಶ ಸಿಕ್ಕಿರುವುದು ಖುಷಿಯ ವಿಚಾರ. ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಗೆದ್ದಲ್ಲಿ ನೂತನ ಕನ್ನಡ ಭವನ ನಿರ್ಮಾಣ ಮಾಡುವ ಇಂಗಿತ ಹೊಂದಿದ್ದೇನೆ. ಕನ್ನಡ ಸಾಹಿತ್ಯವನ್ನು ಬೇರು ಮಟ್ಟದಲ್ಲಿ ತಲುಪಿಸುವ ಕಾರ್ಯ ಮಾಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣಾ ಅಭ್ಯರ್ಥಿ ವಾಸುದೇವ್ ಹೇಳಿದರು.
ಅವರು ಲಾಯಿಲಾ ಸ್ಥಾನಿಕ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕನ್ನಡ ಸಾಹಿತ್ಯ ಕೆಲಸಗಳು ಬೇರಿನಮಟ್ಟಕ್ಕೆ ಇಳಿದಿಲ್ಲ. ಸಾಮಾನ್ಯ ಜನರೂ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾಗವಹಿಸುವಂತೆ ಆಗಬೇಕಾಗಿದೆ. ಜನರಿಗೆ ಕಡಿಮೆ ದರದಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳು ಸಿಗುತ್ತಿಲ್ಲ, ಈ ಸಮಸ್ಯೆಯನ್ನೂ ಸರಿಪಡಿಸಬೇಕಾಗಿದೆ ಎಂದರು.
ಕೊಕ್ಕಡ ನಾಡ ಕಛೇರಿ ಬಳಿ ಮತ್ತು ಬೆಳ್ತಂಗಡಿ ತಹಶೀಲ್ದಾರ್ ಕಛೇರಿಯಲ್ಲಿ ಬೆಳಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಸಾಹಿತ್ಯ ಪರಿಷತ್ತಿನ ಕಾರ್ಡ್, ಆಧಾರ್ ಕಾರ್ಡ್ ಮತ್ತು ವೋಟರ್ ಐಡಿಯನ್ನು ಮತದಾನದ ವೇಳೆ ತರಬೇಕು ಎಂದು ಮಾಹಿತಿ ನೀಡಿದರು.
ನಿವೃತ್ತ ತಹಶೀಲ್ದಾರ್ ಮಹಾಲಿಂಗಪ್ಪ, ವಕೀಲರಾದ ಮನೋಹರ್ ಕುಮಾರ್ ಉಪಸ್ಥಿತರಿದ್ದರು. ಧನಂಜಯ್ ರಾವ್ ಸ್ವಾಗತಿಸಿ, ವಂದಿಸಿದರು.