ಮಾನವ ಕಲ್ಯಾಣ ಹಾಗೂ ಸಂತೋಷವೇ ಎಲ್ಲಾ ಸೇವೆಗಳ ಮುಖ್ಯ ಉದ್ಧೇಶ: ಡಾ. ಡಿ. ವೀರೇಂದ್ರ ಹೆಗ್ಗಡೆ. ಅಮೇರಿಕಾದ ವೆಲ್ ನೆಸ್ ವಿಶ್ವವಿದ್ಯಾಲಯದಿಂದ ವೀರೇಂದ್ರ ಹೆಗ್ಗಡೆಯವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ.

 

 

 

ಬೆಳ್ತಂಗಡಿ: ನಾವೆಲ್ಲರೂ ಇಂದು ಸುಮನಸರಾಗಬೇಕು. ವಿಶ್ವ ಕಲ್ಯಾಣವೇ ನಮ್ಮ ಗುರಿಯಾಗಬೇಕು ಸಮಸ್ತ ಮಾನವ ಕಲ್ಯಾಣ ಹಾಗೂ ಸಂತೋಷವೇ ಎಲ್ಲಾ ಸೇವೆಗಳ ಮುಖ್ಯ ಉದ್ದೇಶವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನುಡಿದರು. ಅವರು ಅಮೇರಿಕಾದ ವೆಲ್‍ನೆಸ್ ವಿಶ್ವವಿದ್ಯಾಲಯದ ವತಿಯಿಂದ ಜಾಗತಿಕ ಮಟ್ಟದಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕ್ಷೇತ್ರದಲ್ಲಿ ಮಾಡಿದ ಸೇವೆ, ಸಾಧನೆಯನ್ನು ಗುರುತಿಸಿ ನ 06 ಶನಿವಾರ ಧರ್ಮಸ್ಥಳದ ಮಹೋತ್ಸವ ಸಭಾ ಭವನದಲ್ಲಿ ನಡೆದ ಸಮಾರಂಭದಲ್ಲಿ ಆಚಾರ್ಯ ಪದವಿಯೊಂದಿಗೆ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿ ಮಾತನಾಡಿದರು.

ವೈದ್ಯಕೀಯ ಚಿಕಿತ್ಸೆಯಲ್ಲಿ ವಿವಿಧ ಪದ್ಧತಿಗಳ ಮಧ್ಯೆ ಸ್ಪರ್ಧೆ ಸಲ್ಲದು. ಪರಸ್ಪರ ಪೂರಕವಾಗಿ ಚಿಕಿತ್ಸೆ ನೀಡಿ ರೋಗಿಯ ಯೋಗ ಕ್ಷೇಮದೊಂದಿಗೆ ಆರೋಗ್ಯ ಭಾಗ್ಯ ರಕ್ಷಣೆಯೇ ವೈದ್ಯರ ಗುರಿಯಾಗಬೇಕು ಎಂದು ಸಲಹೆ ನೀಡಿದರು. ಆದುದರಿಂದ ವಿಶ್ವದಲ್ಲೇ ಪ್ರಥಮವಾಗಿ ತಾವು ಧರ್ಮಸ್ಥಳದಲ್ಲಿ ಮತ್ತು ಉಜಿರೆಯಲ್ಲಿ ಪ್ರಕೃತಿ ಚಿಕಿತ್ಸಾ ಹಾಗೂ ಯೋಗ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆಯನ್ನು ಆರಂಭಿಸಿರುವುದಾಗಿ ಹೇಳಿದರು.
ಧಾರವಾಡದಲ್ಲಿರುವ ಅಲೋಪತಿ ಆಸ್ಪತ್ರೆಯಲ್ಲಿ ಕೂಡಾ ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿಭಾಗಗಳನ್ನು ಪ್ರಾರಂಭಿಸಿರುವುದಾಗಿ ಅವರು ತಿಳಿಸಿದರು.
ನಮ್ಮ ಧರ್ಮ, ಸಂಸ್ಕೃತಿ ಮತ್ತು ಪರಂಪರೆಯನ್ನು ಕಡೆಗಣಿಸಬಾರದು. ಧರ್ಮಸ್ಥಳದಲ್ಲಿ ಜನರ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯ ಭಾಗ್ಯ ರಕ್ಷಣೆಗೆ ನಿರಂತರ ಮಾರ್ಗದರ್ಶನದೊಂದಿಗೆ ಅಭಯದಾನ ನೀಡಲಾಗುತ್ತದೆ ಎಂದು ಹೇಳಿದರು. ಭಾರತೀಯ ಧರ್ಮ, ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಅರಿವು, ಜಾಗೃತಿ ಮೂಡಿಸಿ ಲೋಕ ಕಲ್ಯಾಣವಾಗುವಂತೆ ನಾವೆಲ್ಲರೂ ಶ್ರಮಿಸೋಣ ಎಂದು ಅವರು ಸಲಹೆ ನೀಡಿದರು.

 

ಬೆಂಗಳೂರಿನ ಕೃಷಿ ವಿಜ್ಞಾನ ವಿ.ವಿ.ಯ ವಿಜ್ಞಾನಿ ಡಾ. ಬಿ.ಎನ್. ಸತ್ಯನಾರಾಯಣ ಮಾತನಾಡಿ, ನಮ್ಮ ಯೋಚನೆಗಳಂತೆ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಧರ್ಮಸ್ಥಳದಲ್ಲಿ ಸತ್ಯ, ನ್ಯಾಯ, ಧರ್ಮ ಮತ್ತು ಸಮಾನತೆ ನಿತ್ಯವೂ ಜೀವಂತವಾಗಿದ್ದು ಹೆಗ್ಗಡೆಯವರು ಸಮಾಜದ ಕಣ್ಮಣಿಯಾಗಿದ್ದಾರೆ. ಹೆಗ್ಗಡೆಯವರಂತೆ ನಿಷ್ಕಲ್ಮಶ ಮನದಿಂದ ಸಮಾಜ ಸೇವೆ ಮಾಡುವವರೇ ನಿಜವಾದ ವಿಜ್ಞಾನಿಗಳು. ಜನ ಸಾಮಾನ್ಯರೂ ಕೂಡಾ ಸ್ವ-ಸಹಾಯ ಸಂಘಗಳ ಮೂಲಕ ಸ್ವಾಭಿಮಾನ ಮತ್ತು ಗೌರವಯುತ ಜೀವನ ಮಾಡುವಂತೆ ಕಲಿಸಿದ ಹೆಗ್ಗಡೆಯವರನ್ನು ಅವರು ಅಭಿನಂದಿಸಿದರು.
ಬೆಂಗಳೂರು ವಿ.ವಿ. ಉಪಕುಲಪತಿ ಡಾ. ಕೆ.ಆರ್. ವೇಣುಗೋಪಾಲ್ ಮಾತನಾಡಿ, ಯೋಗ, ಧ್ಯಾನ, ಪ್ರಾಣಾಯಾಮ, ವಾಕಿಂಗ್, ಸರಳ, ಸಾತ್ವಿಕ ಆಹಾರ ಸೇವನೆ, ಸರಿಯಾದ ನಿದ್ರೆ ಮತ್ತು ಸದಾಚಾರದೊಂದಿಗೆ ವ್ಯಸನ ಮುಕ್ತರಾಗಿ ಸರಳ ಜೀವನ ನಡೆಸಿದಲ್ಲಿ ಆರೋಗ್ಯ ಪೂರ್ಣ ಜೀವನ ಮಾಡಬಹುದು ಎಂದು ಹೇಳಿದರು.

 

 

 

 

ಮಣಿಪಾಲದ ಮಾಹೆ ವಿ.ವಿ.ಯ ಉಪಕುಲಪತಿ ಎಂ.ಡಿ. ವೆಂಕಟೇಶ್, ಸುರತ್ಕಲ್ ಎನ್.ಐ.ಟಿ.ಕೆ. ಯ ಪ್ರೊ. ಶ್ರೀಪತಿ ಆಚಾರ್ಯ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಬ್ರಹ್ಮಶ್ರೀ ಪತ್ರಿಜಿ, ಸುಬಾ ಕೋಟಾ ಮತ್ತು ಆರ್ಯಾಂಬತ್ ಜನಾರ್ದನನ್ ಅವರಿಗೆ ಕೂಡಾ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು.
ನಾಟ್ಯ ಸಂಪದ ತಂಡದವರ ಭರತನಾಟ್ಯ, ಡಾ. ನಾಗೇಂದ್ರ ಶಾಸ್ತ್ರಿ ಮತ್ತು ತಂಡದವರ ಕರ್ನಾಟಕ ಸಂಗೀತ, ಡಾ. ಕೆ. ಸುರೇಶ್ ಮತ್ತು ಆದಿತ್ಯ ರಂಗನ್ ಅವರ ವೇದ ಮಂತ್ರ ಪಠಣ ಸಮಾರಂಭಕ್ಕೆ ವಿಶೇಷ ಮೆರುಗನ್ನು ನೀಡಿತು.ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್ ಮತ್ತು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಆನ್‍ಲೈನ್ ಮೂಲಕ ಶುಭಾಶಂಸನೆ ಮಾಡಿ ಹೆಗ್ಗಡೆಯವರನ್ನು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಹೇಮಾವತಿ ವಿ. ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ , ಶಾಸಕ ಹರೀಶ್ ಪೂಂಜ ಮತ್ತು ವಿಧಾನಪರಿಷತ್ ಶಾಸಕರುಗಳಾದ ಕೆ. ಪ್ರತಾಪಸಿಂಹ ನಾಯಕ್ ಮತ್ತು ಕೆ. ಹರೀಶ್ ಕುಮಾರ್ ಉಪಸ್ಥಿತರಿದ್ದರು.

ಅಮೇರಿಕಾದ ವೇದಿಕ್ ವೆಲ್‍ನೆಸ್ ವಿಶ್ವವಿದ್ಯಾಲಯದ ಅಧ್ಯಕ್ಷರಾದ ಕೃಷ್ಣಮೂರ್ತಿ ಸ್ವಾಗತಿಸಿದರು. ಉಪಾಧ್ಯಕ್ಷರಾದ ರಶ್ಮಿಕೃಷ್ಣಮೂರ್ತಿ ಧನ್ಯವಾದವಿತ್ತರು.

error: Content is protected !!